ಬೆಂಗಳೂರು: ಕ್ರೈಸ್ತ ಸಮುದಾಯದ ನಿಯೋಗ ಇಂದು ಸಿಎಂ ಬಿಎಸ್ವೈ ಅವರನ್ನು ಧವಳಗಿರಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದೆ.
ಮಹಾಧರ್ಮಾಧ್ಯಕ್ಷ ಡಾ.ಪೀಟರ್ ನಿಯೋಗದಲ್ಲಿ ಭೇಟಿಯಾದ ಕ್ರೈಸ್ತ ಮುಖಂಡರು, ಕಪಾಲಿ ಬೆಟ್ಟದಲ್ಲಿ ಕ್ರೈಸ್ತ ಪ್ರತಿಮೆ ಸ್ಥಾಪನೆ ವಿಚಾರಕ್ಕೆ ಸರ್ಕಾರದಿಂದ ವಿರೋಧ ಕೇಳಿ ಬಂದ ಹಿನ್ನೆಲೆ ಸಿಎಂ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಭೇಟಿ ಬಳಿಕ ಕ್ರೈಸ್ತ ಸಮುದಾಯದ ಮಹಾಧರ್ಮಾಧ್ಯಕ್ಷ ಡಾ.ಪೀಟರ್ ಮಾತನಾಡಿ, ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ಮಾಡುವ ವಿಚಾರದಲ್ಲಿ ಸಿಎಂಗೆ ಮನವಿ ಮಾಡಿದ್ದೇವೆ. ಇದರಲ್ಲಿ ರಾಜಕೀಯ ಮಾಡೋದು ಬೇಡ. ಸುಮಾರು ವರ್ಷಗಳಿಂದಲೂ ಯೇಸುವನ್ನು ಅಲ್ಲಿ ಪೂಜಿಸುತ್ತಿದ್ದೆವು. ಅಲ್ಲಿ ಈಗ ಯೇಸು ಪ್ರತಿಮೆ ನಿರ್ಮಾಣ ಆಗುತ್ತಿದೆ. ಇದಕ್ಕೆ ವಿರೋಧ ಬೇಡ ಎಂದು ಮನವಿ ಮಾಡಿದ್ದೇವೆ ಎಂದರು.
ಕಪಾಲಿ ಬೆಟ್ಟದಲ್ಲಿ ಹಿಂದೂ ದೇವತೆಗಳನ್ನು ಪೂಜೆ ಮಾಡುತ್ತಾ ಇದ್ದರು ಎನ್ನುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಕೆಲವರು ನಾವು ಮತಾಂತರ ಮಾಡುತ್ತಿದ್ದೇವೆ ಅನ್ನೋ ಆರೋಪ ಮಾಡಿದ್ದಾರೆ. ನಾವು ಯಾರನ್ನು ಮತಾಂತರ ಮಾಡ್ತಿಲ್ಲ. ಮತಾಂತರ ಮಾಡೋದು ಸುಲಭ ಅಲ್ಲ. ಹಿಂದೆ ಬಂದಿದ್ದ ಕ್ರೈಸ್ತ ಮಿಷನರಿಗಳು ಮತಾಂತರ ಮಾಡಿರಬಹದು. ಆದರೆ, ಈಗ ನಾವು ಒಂದುವರೆ ಲಕ್ಷ ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸುತ್ತಿದ್ದೇವೆ. ಒಬ್ಬರನ್ನಾದರೂ ಮತಾಂತರ ಮಾಡಿದ್ದನ್ನು ತೋರಿಸಲಿ. ಸಿಎಂ ಎಲ್ಲಾ ಧರ್ಮದವರನ್ನೂ ಗೌರಿವಿಸುತ್ತಾರೆ ಎನ್ನುವ ನಂಬಿಕೆ ಇದೆ ಎಂದರು.