ಬೆಂಗಳೂರು: ಚಿಲುಮೆ ಸಂಸ್ಥೆಯಿಂದ ಮತದಾರರ ಮಾಹಿತಿ ಕಳವು ಪ್ರಕರಣದಲ್ಲಿ ಕೊನೆಗೂ ಬೆಂಗಳೂರು ನಗರ ಮಾಜಿ ಡಿಸಿ ಕೆ ಶ್ರೀನಿವಾಸ್ ಅವರನ್ನು ಹಲಸೂರು ಗೇಟ್ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹೈಕೋರ್ಟ್ ನಲ್ಲಿ ಕೆ ಶ್ರೀನಿವಾಸ್ ನಿರೀಕ್ಷಣಾ ಜಾಮೀನು ವಜಾ ಬೆನ್ನಲ್ಲೆ ವಿಚಾರಣೆಗೆ ಹಾಜರಾಗಿದ್ದರು. ಮತದಾರರ ಮಾಹಿತಿ ಕಳುವಿನಲ್ಲಿ ಆರ್ ಒ ಗಳ ಸೀಲ್ ಸಹಿ ದುರ್ಬಳಕೆಯಾಗಿತ್ತು. ಈ ಕುರಿತು ಮಾಜಿ ಡಿಸಿಗೆ ಪ್ರಶ್ನೋತ್ತರಗಳ ಪಟ್ಟಿಯನ್ನು ಪೊಲೀಸರು ಸಿದ್ದಪಡಿಸಿದ್ದರು.
ಕೆ ಶ್ರೀನಿವಾಸ್ ಗೆ 23 ಪ್ರಶ್ನೆಗಳನ್ನು ಕೇಳಿದ್ದ ಪೊಲೀಸರು, ಚಿಲುಮೆ ಸಂಸ್ಥೆಗೆ ಸರ್ವೇ ಮಾಡಲು ಅನುಮತಿ ಕೊಟ್ಟಿದ್ದು ಯಾಕೆ ? ಚಿಲುಮೆ ಸಂಸ್ಥೆಗೂ ನಿಮಗೂ ಏನು ಸಂಬಂಧ ? ಸರ್ವೇಯಲ್ಲಿ ಮತದಾರರ ವೈಯಕ್ತಿಕ ಮಾಹಿತಿ ಕಲೆ ಹಾಕುತ್ತಿದ್ದ ಬಗ್ಗೆ ನಿಮಗೆ ಮಾಹಿತಿ ಇರಲಿಲ್ವಾ? ಆರ್ ಒ ಗಳಿಗೆ ಸೀಲ್ ಸಹಿ ಹಾಕಲು ನೀವೇ ಹೇಳಿದ್ದಾ? ಎಂದು ಪ್ರಶ್ನೆ ಮಾಡಿದ್ದರು.
ಪೊಲೀಸರ ಪ್ರಶ್ನೆಗಳನ್ನು ಸ್ಪಷ್ಟವಾಗಿ ತಳ್ಳಿ ಹಾಕಿರುವ ಮಾಜಿ ಡಿಸಿ ಶ್ರೀನಿವಾಸ್ ಆರ್ಒಗಳು ಏನ್ ಮಾಡಿದರೋ ನನಗೆ ಗೊತ್ತಿಲ್ಲ. ಚಿಲುಮೆ ಸಂಸ್ಥೆಗೆ ಈ ಹಿಂದೆಯೂ ಕೂಡ ಕೊಟ್ಟಿದ್ದರು ಅದೇ ರೀತಿ ಈ ಬಾರಿ ಕೂಡ ಅನುಮತಿ ಕೊಟ್ಟಿರೋದಾಗಿ ಉತ್ತರಿಸಿದ್ದಾರೆ. ಆದರೆ ಅವರು ಈ ರೀತಿ ದುರ್ಬಳಕೆ ಮಾಡಿಕೊಳ್ತಾರೆ ಅನ್ನೋದು ಗೊತ್ತಿಲ್ಲ. ಸಹಿ ಕೂಡ ನಾನು ಹಾಕಿಲ್ಲ ಎಂದು ಕೆ ಶ್ರೀನಿವಾಸ್ ಸ್ಪಷ್ಟನೆ ನೀಡಿದ್ದಾರೆ.
ಬಿಎಲ್ಒ ಕಾರ್ಡ್ ನೀಡಿದ ಬಗ್ಗೆಯೂ ಶ್ರೀನಿವಾಸ್ ಗೆ ಪೊಲೀಸರು ಪ್ರಶ್ನೆ ಮಾಡಿದ್ದು, ನಾನು ಯಾವ ತಪ್ಪು ಮಾಡಿಲ್ಲ ಎಂದು ಶ್ರೀನಿವಾಸ್ ಉತ್ತರ ನೀಡಿದ್ದಾರೆ. ಸದ್ಯ ಬೆಂಗಳೂರು ನಗರ ಮಾಜಿ ಡಿಸಿ ಹೇಳಿಕೆ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂಓದಿ:ಅವಳಿನಗರದಲ್ಲಿ ಕುಡಿಯುವ ನೀರಿಗೆ ಪರದಾಟ; ಸರ್ಕಾರದ ವಿರುದ್ಧ ಮೇಯರ್ ಬೇಸರ