ಬೆಂಗಳೂರು: ಚಿಲುಮೆ ಸಂಸ್ಥೆ ಮತದಾರರ ಮಾಹಿತಿ ಕದ್ದ ಆರೋಪದ ಹಿನ್ನೆಲೆ, ತನಿಖಾ ಸಂಸ್ಥೆಗಳು ಚಿಲುಮೆ ಸಂಸ್ಥೆ ಪಾಲಿಕೆ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು, ಮಾನಸಿಕ ಹಿಂಸೆ ನೀಡಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.
ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆದಿರುವ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕರಣದ ತನಿಖೆ, ವಿಚಾರಣೆ ನೆಪದಲ್ಲಿ ನಮಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಒಂದೆಡೆ ಪೊಲೀಸರು ತನಿಖೆಗೆ ಕರೆದರೆ, ಮತ್ತೊಂದೆಡೆ, ಚುನಾವಣಾ ಆಯೋಗದ ಅಧಿಕಾರಿಗಳಿಗೆ ಉತ್ತರ ನೀಡಬೇಕಾಗಿದೆ. ಅದೇ ರೀತಿ, ನಮ್ಮ ಕೆಲಸವನ್ನೂ ಮಾಡಬೇಕಾಗಿದೆ ಎಂದು ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣದ ಸಂಬಂಧ ಈಗಾಗಲೇ ಹಲಸೂರುಗೇಟ್, ಕಾಡುಗೋಡಿ ಪೊಲೀಸ್ ಠಾಣೆಗಳಲ್ಲಿ ಮೊಕದ್ದಮೆ ದಾಖಲಾಗಿದೆ. ಈ ಠಾಣೆಗಳ ಪೊಲೀಸರು ಕೂಡ ವಿಚಾರಣೆಗೆ ಕರೆದು ಮಾಹಿತಿ ಪಡೆಯುತ್ತಿದ್ದಾರೆ. ಆಯಾ ವಿಧಾನಸಭಾ ಕ್ಷೇತ್ರ ಪೊಲೀಸ್ ಠಾಣೆಗಳ ತನಿಖಾಧಿಕಾರಿಗಳು ವಿಚಾರಣೆ ನೆಪದಲ್ಲಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದಿದ್ದಾರೆ.
ಕಂದಾಯ ಅಧಿಕಾರಿಗಳ ಕಾಟ: ಕಂದಾಯ ಅಧಿಕಾರಿಗಳು ಇದೇ ವಿಚಾರವಾಗಿ ಮೊಬೈಲ್‌ಗೆ ಕರೆ ಮಾಡಿ ತಕ್ಷಣ ಬರುವಂತೆ ಸೂಚಿಸುತ್ತಾರೆ. ಒಂದಷ್ಟು ಕಾಲಾವಕಾಶ ಕೇಳಿದರೂ, ನಮ್ಮ ಮೇಲೆಯೇ ಮುಗಿಬೀಳುತ್ತಾರೆ. ಹೀಗೆ, ಕಳೆದ ಹತ್ತು ದಿನಗಳಿಂದ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.
ಆಸ್ತಿ ತೆರಿಗೆ ಸಂಗ್ರಹಕ್ಕೆ ಧಕ್ಕೆ: ಈ ರೀತಿಯ ಚಟುವಟಿಕೆಗಳಿಂದ ಬಿಬಿಎಂಪಿ ನೀಡಿರುವ ಆಸ್ತಿ ತೆರಿಗೆ ಸಂಗ್ರಹ ಗುರಿಯನ್ನು ಮುಟ್ಟಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಹಾಗೂ ಚುನಾವಣಾ ಆಯೋಗ ಸೂಕ್ತ ನಿರ್ಧಾರ ಕೈಗೊಂಡು, ಪಾಲಿಕೆ ಸಿಬ್ಬಂದಿಯ ಹಿತಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಕಂದಾಯ ಅಧಿಕಾರಿ ಕಚೇರಿಯಲ್ಲಿಯೇ ವಿಚಾರಣೆ ನಡೆಯಲಿ: ಕಂದಾಯ ಅಧಿಕಾರಿ ಕಚೇರಿಯಲ್ಲಿಯೇ ಎಲ್ಲಾ ಹಂತದ ಸಿಬ್ಬಂದಿಯ ವಿಚಾರಣೆ ನಡೆಯಬೇಕು. ಈ ಕೂಡಲೇ ಬಿಎಲ್‌ಒ ಗಳನ್ನು ಮುಖ್ಯ ಚುನಾವಣಾಧಿಕಾರಿಗಳನ್ನು ನೇಮಿಸಬೇಕು ಎಂದು ಅಮೃತ್ ರಾಜ್ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಇದನ್ನೂ ಓದಿ; ಶರಾವತಿ ಸಂತ್ರಸ್ತರಿಗೆ ಪರಿಹಾರ ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫಲ : ಧ್ರುವನಾರಾಯಣ್