ಹಾವೇರಿ: ಪ್ರತಿವರ್ಷ ಜೂನ್ 5ರಂದು ವಿಶ್ವಪರಿಸರ ದಿನಾಚರಣೆ ಆಚರಿಸಲಾಗುತ್ತದೆ. ಈ ದಿನ ಗಿಡನೆಟ್ಟು ಪರಿಸರ ಪ್ರೇಮಿಗಳಾಗಿ ಮರುದಿನದಿಂದ ಆ ಗಿಡದ ಬಳಿಯೂ ಸುಳಿಯದೇ ಮರೆತುಬಿಡುವ ಜನರಿದ್ದಾರೆ. ಆದರೆ ಇಲ್ಲೊಂದು ಕಡೆ ಮಾತ್ರ ಪ್ರತಿದಿನ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ.
ಹೌದು.. ನಗರದ ಬಸವೇಶ್ವರನಗರದ ಪುಟಾಣಿಗಳು ಪ್ರತಿದಿನವು ಗಿಡಗಳನ್ನು ಆರೈಕೆ ಮಾಡುತ್ತಾ ಪರಿಸರ ದಿನಾಚರಣೆಗೆ ಅರ್ಥ ನೀಡಿದ್ದಾರೆ. ಅರಣ್ಯ ಇಲಾಖೆ ನೆಟ್ಟಿರುವ ಗಿಡಗಳಿಗೆ ತಮ್ಮ ಹೆಸರು ಹಾಕಿ ಅವರ ಗಿಡಗಳನ್ನು ಸಂರಕ್ಷಣೆ ಮಾಡುವ ಕಾರ್ಯ ಮಾಡುತ್ತಿದ್ದಾರೆ.
ಮುಂಜಾನೆಯೇ ಗಿಡದ ಬಳಿ ಬಂದು ನೀರು, ಗೊಬ್ಬರ ಹಾಕಿ ಅದರಲ್ಲಿ ಕಸ ತೆಗೆದು ಆರೈಕೆ ಮಾಡುತ್ತಾರೆ. ಸುಮಾರು 12 ಪುಟಾಣಿಗಳು ಪ್ರತಿನಿತ್ಯವೂ ಈ ಕಾರ್ಯ ಮಾಡುತ್ತಾ ಬಂದಿದ್ದು, ಅರಣ್ಯ ಇಲಾಖೆ ನೆಟ್ಟಿರುವ ಗಿಡಗಳು ಸೋಂಪಾಗಿ ಬೆಳೆಯುತ್ತಿವೆ.
ಈ ಮಕ್ಕಳ ವಿಶೇಷ ಕಾರ್ಯಕ್ಕೆ ಪರಿಸರ ಪ್ರೇಮಿ ಮಹಾಂತೇಶ್ ಬೆನ್ನೆಲುಬಾಗಿ ನಿಂತಿದ್ದಾರೆ. ಪುಟಾಣಿಗಳಿಗೆ ಗಿಡಗಳ ಆರೈಕೆಗೆ ಬೇಕಾಗುವ ಸಲಕರಣೆಗಳನ್ನು ಒದಗಿಸುವ ಮೂಲಕ ನೆರವಾಗುತ್ತಾರೆ. ಅಲ್ಲದೆ ಯಾವ ಯಾವ ಗಿಡಕ್ಕೆ ಯಾವ ರೀತಿಯಲ್ಲಿ ಆರೈಕೆ ಮಾಡಬೇಕು ಎಂಬುವುದನ್ನು ಮಹಾಂತೇಶ್ ಮಕ್ಕಳಿಗೆ ತಿಳಿಸಿಕೊಡುತ್ತಾರೆ. ಮಹಾಂತೇಶ್ ನೇತೃತ್ವದಲ್ಲಿ ಈ ಪುಟಾಣಿ ಪಡೆ ಮುಂಜಾನೆ ಸನ್ನದ್ಧವಾಗಿರುತ್ತದೆ.
ಅರಣ್ಯ ಇಲಾಖೆ ನೆಟ್ಟು ಹೋಗಿದ್ದ ಈ ಗಿಡಗಳು ಪೋಷಣೆಯಿಲ್ಲದೆ ಬಾಡಲಾರಂಭಿಸಿದ್ದವು. ಇದರಿಂದ ಬೇಸತ್ತ ಈ ಮಕ್ಕಳು ಹಿರಿಯರ ಮಾರ್ಗದರ್ಶನದಲ್ಲಿ ಗಿಡಗಳ ಆರೈಕೆ ಮಾಡುತ್ತಿದ್ದಾರೆ. ಮಕ್ಕಳ ಪೋಷಣೆಯಲ್ಲಿ ನೇರಳೆ ಸೇರಿದಂತೆ ವಿವಿಧ ಹಣ್ಣಿನ ಗಿಡಗಳು, ಹೊಂಗೆ, ಸುಬಾಬುಲ್ ಸೇರಿದಂತೆ ವಿವಿಧ ಗಿಡಗಳು ಸೋಂಪಾಗಿ ಬೆಳೆದುನಿಂತಿವೆ. ಮಕ್ಕಳ ಈ ಕಾರ್ಯ ಇದೇ ರೀತಿ ಮುಂದುವರೆಯಲಿ ನಗರ ಇನ್ನಷ್ಟು ಹಸಿರಾಗಲಿ ಎಂಬುದು ನಗರವಾಸಿಗಳ ಆಶಯವಾಗಿದೆ.