ಬೆಂಗಳೂರು : ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ಅಪೌಷ್ಟಿತೆ ಇನ್ನಿಲ್ಲದಂತೆ ಕಾಡುತ್ತಿದೆ. ಮಕ್ಕಳಲ್ಲಿ ಅಪೌಷ್ಟಿಕತೆ ನೀಗಿಸಲು ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.
ಆದರೆ, ಅವು ಸಕಾಲಕ್ಕೆ ಮತ್ತು ಸಮರ್ಪಕವಾಗಿ ಜಾರಿಗೆಯಾಗದ ಕಾರಣ ಹಲವು ಜಿಲ್ಲೆಗಳಲ್ಲಿ ಸಾವಿರಾರು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದು, ಇದರಿಂದ ಪಾಲಕರಲ್ಲಿ ಆತಂಕ ಮನೆ ಮಾಡಿದೆ.
ಸರ್ಕಾರದ ಯೋಜನೆಗಳು ತೆವಳುತ್ತಾ ಸಾಗಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯವೂ ಅದಕ್ಕೆ ಕಾರಣ. ಅದರಲ್ಲೂ ಕೊಳಗೇರಿ ಪ್ರದೇಶಗಳಲ್ಲಿ ಹೆಚ್ಚು ಅಪೌಷ್ಟಿಕ ಮಕ್ಕಳು ಕಂಡು ಬಂದಿದ್ದಾರೆ.
ಅವರು ಅಪೌಷ್ಟಿಕತೆಯಿಂದ ಬಳಲಬಾರದು ಎಂಬ ಉದ್ದೇಶದಿಂದ ಸರ್ಕಾರವು ಮನೆಗೆ ಆಹಾರ ಪದಾರ್ಥಗಳನ್ನು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿತ್ತು.
ರಾಯಚೂರು ಜಿಲ್ಲೆಯಲ್ಲಿ 2017-2018ನೇ ಸಾಲಿನಿಂದ ನವೆಂಬರ್ 2019ರ ಅಂತ್ಯದವರೆಗೆ 3,657 ಅಪೌಷ್ಟಿಕ ಮಕ್ಕಳು ಪತ್ತೆಯಾಗಿದ್ದಾರೆ. ದಾವಣಗೆರೆಯಲ್ಲಿ 11 ಸಾವಿರಕ್ಕೂ ಹೆಚ್ಚು ಮಕ್ಕಳ ಪೈಕಿ 224 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಹಾಸನ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ನಿಖರ ಅಂಕಿ-ಅಂಶ ದೊರೆಯದಿದ್ದರೂ ಅಪೌಷ್ಟಿಕತೆ ಮಕ್ಕಳು ಇದ್ದಾರೆ ಎಂಬುದು ಮೂಲಗಳು ತಿಳಿಸಿವೆ.
ಏನೆಲ್ಲಾ ಪೌಷ್ಟಿಕ ಆಹಾರ ವಿತರಣೆ ಮಾಡಲಾಗುತ್ತಿದೆ?: ಆರು ತಿಂಗಳಿಂದ 3 ವರ್ಷ ವಯಸ್ಸಿನ ಮಕ್ಕಳಿಗೆ ಪುಷ್ಟಿ ಪುಡಿ, 25 ದಿನಕ್ಕೆ 300 ಗ್ರಾಂ ಹಾಲಿನ ಪುಡಿ ಹಾಗೂ 200 ಗ್ರಾಂ ಸಕ್ಕರೆ ನೀಡಲಾಗುತ್ತಿದೆ. 3 ವರ್ಷದಿಂದ 6 ವರ್ಷದೊಳಗಿನ ಮಕ್ಕಳಿಗೆ 25 ದಿನಗಳವರೆಗೆ ಹಾಲಿನ ಪುಡಿ 300 ಗ್ರಾಂ, ಸಕ್ಕರೆ 200 ಗ್ರಾಂ, ಹೆಸರು ಕಾಳು 800 ಗ್ರಾಂ, ಅಕ್ಕಿ/ಗೋಧಿ 2 ಕೆಜಿ, ತೊಗರಿ ಬೇಳೆ ಅರ್ಧಕೆಜಿ, ಮಸಾಲೆ 150 ಗ್ರಾಂ ಹಾಗೂ 8 ಮೊಟ್ಟೆ ವಿತರಿಸಲಾಗುತ್ತಿದೆ.
ಬಾಣಂತಿ ಹಾಗೂ ಗರ್ಭಿಣಿಯರಿಗೆ ಹಾಲಿನ ಪುಡಿ 500 ಗ್ರಾಂ, ಸಕ್ಕರೆ 300 ಗ್ರಾಂ, ಮೊಟ್ಟೆ 25, ಹೆಸರು ಕಾಳು ಅರ್ಧಕೆಜಿ, ಅಕ್ಕಿ, ಗೋಧಿ ತಲಾ 4 ಕೆಜಿ, ತೊಗರಿ ಬೇಳೆ 400 ಗ್ರಾಂ, ಶೇಂಗಾ ಅರ್ಧ ಕೆಜಿ, ಬೆಲ್ಲ ಅರ್ಧಕೆಜಿ ಹಾಗೂ 200 ಗ್ರಾಂ ಮಸಾಲೆಯನ್ನು ಸರ್ಕಾರದಿಂದ ವಿತರಣೆ ಆಗುತ್ತಿದೆ.
ಲಾಕ್ಡೌನ್ನಂಥ ಸಂದಿಗ್ಧ ಪರಿಸ್ಥಿತಿಯಲ್ಲೂ ಜಿಲ್ಲೆಯ ಎಲ್ಲಾ ಕಡೆ ಪೌಷ್ಟಿಕ ಆಹಾರ ಸಮರ್ಪಕವಾಗಿ ಮಾಡಲಾಗಿದೆ. ಲಾಕ್ಡೌನ್ನಲ್ಲಿ ಪೌಷ್ಟಿಕ ಆಹಾರ ಒದಗಿಸುವಲ್ಲಿ ಸರ್ಕಾರ ಯಶಸ್ವಿಯಾದ್ರೂ ಹಿಂದುಳಿದ ಪ್ರದೇಶದಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಹೀಗಾಗಿ, ಸೂಕ್ತ ಕ್ರಮ ಕೈಗೊಳ್ಳಬೇಕಿದೆ.