ಬೆಂಗಳೂರು: ಕಳೆದ ಮೂರು ದಿನಗಳಿಂದ ಜನತೆ ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದರೆ, ಸಾರಿಗೆ ನೌಕರರಿಗೆ ಈ ಬಾರಿ ದೀಪಾವಳಿ ಹಬ್ಬದ ಸಂಭ್ರಮ ಮರೆಯಾಗಿದೆ. ಯಾಕೆಂದರೆ ಕಳೆದ ತಿಂಗಳ ವೇತನವೇ ಇನ್ನೂ ಸಾರಿಗೆ ನೌಕರರಿಗೆ ಬಂದಿಲ್ಲ.
ಹೀಗಾಗಿ ಸಂಬಳ ಹಾಕದ ಸರ್ಕಾರದ ಧೋರಣೆ ಖಂಡಿಸಿ ಬಿಎಂಟಿಸಿ ನೌಕರರ ಮಕ್ಕಳು ಕಣ್ಣೀರು ಹಾಕಿದ್ದಾರೆ. ವೇತನ ಆಗದಿರುವ ಕುರಿತು ವಿಡಿಯೋ ಮಾಡಿ ಆ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಚಿಕ್ಕ ಮಕ್ಕಳ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸಿಎಂ ಅಂಕಲ್, ಎಲ್ಲಾರ ಮನೆಯಲ್ಲೂ ಹಬ್ಬ ಮಾಡ್ತಿದಾರೆ. ನಮ್ಮ ಮನೆಯಲ್ಲಿ ಹಬ್ಬವೇ ಇಲ್ಲ. ನಮ್ಮಪ್ಪನಿಗೆ ಹೊಸ ಬಟ್ಟೆ ತೆಗೆದುಕೊಂಡು ಬಾ ಅಂತ ಹೇಳಿದರೆ ದುಡ್ಡಿಲ್ಲ ಅಂತ ಹೇಳ್ತಾರೆ. ಅಕ್ಕ ಪಕ್ಕದ ಮನೆಗಳಲ್ಲಿ ಎಲ್ಲಾರು ಹಬ್ಬ ಮಾಡಿದ್ದಾರೆ. ನಮಗೆ ಹಬ್ಬ ಇಲ್ಲ. ದಯಮಾಡಿ ಅಪ್ಪನಿಗೆ ಸಂಬಳ ಕೊಡಿ ಅಂತ ಸಾರಿಗೆ ನೌಕರರ ಮಕ್ಕಳು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಂಗಲಾಚುತ್ತಿದ್ದಾರೆ.