ಬೆಂಗಳೂರು: ಇತ್ತೀಚೆಗೆ ನಗರದ ಖಾಸಗಿ ಶಾಲೆಯೊಂದರ ಹೆಣ್ಣು ಮಕ್ಕಳ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಮಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ನಡುವೆ ತಾರತಮ್ಯದಿಂದ ನೋಡುವುದು ಮತ್ತು ಮನಸ್ಸಿಗೆ ನೋವುಂಟಾಗುವಂತೆ ನಡೆದುಕೊಳ್ಳದಂತೆ ಶಾಲಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದೆ.
ಅಲ್ಲದೇ, ಪ್ರಕರಣ ಸಂಬಂಧ ಮುಖ್ಯ ಶಿಕ್ಷಕರು ಮತ್ತು ಇತರ ಸಿಬ್ಬಂದಿಯಿಂದ ಮುಂದಿನ ದಿನಗಳಲ್ಲಿ ಈ ರೀತಿ ನಡೆದುಕೊಳ್ಳುವುದಿಲ್ಲ ಎಂಬುದಾಗಿ ಪ್ರಮಾಣಪತ್ರ ದಾಖಲಿಸಿಕೊಂಡ ಪ್ರಕರಣ ಇತ್ಯರ್ಥಪಡಿಸಿದೆ.
ನಗರದ ಸೆಂಟ್ ಜೋಸಫ್ ಕಾನ್ವೆಂಟ್ ವಿದ್ಯಾರ್ಥಿನಿಯರ ಶಾಲೆಯ ಇಬ್ಬರು ಹೆಣ್ಣು ಮಕ್ಕಳು ನಾಪತ್ತೆ ಪ್ರಕರಣ ಸಂಬಂಧ ಶಾಲಾ ಮುಖ್ಯ ಶಿಕ್ಷಕಿ ಪಿ.ವಿ. ಸಿಸ್ಟರ್ ಕ್ಲಾರ ಅವರು ಮಕ್ಕಳನ್ನು ನ್ಯಾಯಾಲಯದ ಮುಂದೆ ಹಾಜರಿಪಡಿಸುವಂತೆ ಕೋರಿ ಹೆಬಿಯಾಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿ ನ್ಯಾ.ಬಿ.ವೀರಪ್ಪ ಮತ್ತು ಕೆ.ಎಸ್.ಹೇಮಲೇಖ ಅವರಿದ್ದ ನ್ಯಾಯಪೀಠ, ಮಕ್ಕಳೊಂದಿಗೆ ಮಾನವೀತೆಯಿಂದ ನಡೆದುಕೊಳ್ಳಬೇಕು.
ಶೈಕ್ಷಣಿಕ ಭವಿಷ್ಯ ರೂಪಿಸುವಲ್ಲಿ ಪೋಷಕರು ಮತ್ತು ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಶ್ರಮಿಸಬೇಕು ಎಂದು ಸೂಚನೆ ನೀಡಿದೆ. ಜತೆಗೆ, ಇಬ್ಬರೂ ಮಕ್ಕಳನ್ನು ಮಾನಸಿಕ ತಜ್ಞರಿಂದ ಕೌನ್ಸೆಲಿಂಗ್‌ಗೆ ಒಳಪಡಿಸಬೇಕು. ಶಿಕ್ಷಣ ಸಂಸ್ಥೆಯ ಯಾವುದೇ ಸಿಬ್ಬಂದಿ ಮಕ್ಕಳ ಭಾವನೆಗೆ ನೋವುಂಟು ಮಾಡುವ ರೀತಿಯಲ್ಲಿ ವರ್ತಿಸಬಾರದು. ಮಕ್ಕಳಲ್ಲಿ ಭೇದವನ್ನುಂಟು ಮಾಡುವ ಮಾತುಗಳನ್ನಾಡಬಾರದು. ಸ್ವಂತ ಮಕ್ಕಳಂತೆ ನೋಡಿಕೊಂಡು ಶಿಕ್ಷಣ ಮುಂದುವರೆಸಲು ನೆರವಾಗಬೇಕು ಎಂದು ಸೂಚನೆ ನೀಡಿತು. ಅಷ್ಟೇ ಅಲ್ಲದೆ, ಮಕ್ಕಳ ಎದುರಲ್ಲಿ ಪೋಷಕರು ನಾಗರಿಕರಂತೆ ವರ್ತಿಸಬೇಕು ಎಂದು ಸೂಚನೆ ನೀಡಿದೆ.
ಇದೇ ವೇಳೆ, ನ್ಯಾಯಪೀಠದ ಸೂಚನೆ ಮೇರೆಗೆ, ಮಕ್ಕಳು ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು ಮತ್ತು ವಾರ್ಡ್‌ನ್‌ರನ್ನು ತಪ್ಪಿಸಿಕೊಂಡು, ನಾವು ಮಾಡಿದ್ದು ತಪ್ಪಾಗಿದೆ. ಈ ರೀತಿಯಲ್ಲಿ ಮುಂದೆ ನಡೆದುಕೊಳ್ಳುವುದಿಲ್ಲ ಎಂದು ಕ್ಷಮೆಯಾಚಿಸಿದ್ದರು. ಜತೆಗೆ, ಮುಂದಿನದ ದಿನಗಳಲ್ಲಿ ವಿದ್ಯಾಬ್ಯಾಸ ಮುಂದುವರೆಸಲು ಹೆಚ್ಚಿನ ಗಮನ ಹರಿಸಿ ಉತ್ತಮ ಪ್ರಜೆಗಳಾಗುವುದಾಗಿ ಭರವಸೆ ನೀಡಿದರು. ಮಕ್ಕಳ ಪತ್ತೆಗೆ ಶ್ರಮಿಸಿ ಪೊಲೀಸ್ ಇಲಾಖೆ ಸಿಬ್ಬಂದಿಯಾದ ಪುಲಕೇಶಿ ನಗರದ ಠಾಣೆಯ ಇನ್ಸ್ಪೆಕ್ಟರ್ ಪಿ.ಎಂ.ಕಿರಣ್ ಮತ್ತವರ ಸಿಬ್ಬಂದಿಯನ್ನು ಹೈಕೋರ್ಟ್ ಪ್ರಶಂಸಿದೆ.
ಶಿಕ್ಷಕರಿಂದ ಪ್ರಮಾಣಪತ್ರ ದಾಖಲಿಸಿಕೊಂಡ ನ್ಯಾಯಪೀಠ: ಶಾಲೆಯ ಮುಖ್ಯ ಶಿಕ್ಷಕಿ ಕ್ಲಾರ ಅವರು, ಸುಮಾರು 127 ವರ್ಷಗಳ ಇತಿಹಾಸವಿರುವ ಶಿಕ್ಷಣ ಸಂಸ್ಥೆಯಾದ ಸೆಂಟ್ ಜೋಸಫ್ ಕಾನ್ವೆಂಟ್ ವಿದ್ಯಾರ್ಥಿನಿಯರ ಶಾಲೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿನಿಯ ಘನತೆ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡಿದ್ದೇವೆ. ಮುಂದೆಯೂ ಅದನ್ನೇ ಮುಂದುವರೆಸುತ್ತೇವೆ. ಜತೆಗೆ, ಯಾವುದೇ ಕಾರಣಕ್ಕೆ ಮಕ್ಕಳಲ್ಲಿ ತಾರತಮ್ಯ ಅನುಸರಿಸುವುದಿಲ್ಲ.
ಮಕ್ಕಳು ತಪ್ಪು ದಾರಿಗೆ ಹೋದಲ್ಲಿ ಅವರನ್ನು ಸರಿ ಪಡಿಸುವುದಕ್ಕೆ ಅಗತ್ಯವಿರುವ ಕ್ರಮ ಕೈಗೊಳ್ಳುವಂತೆ ಎಲ್ಲ ಸಿಬ್ಬಂದಿಗೆ ನಿರ್ದೇಶನ ನೀಡಲಾಗುವುದು. ಮಕ್ಕಳೊಂದಿಗೆ ಏರು ಧ್ವನಿಯಿಂದ ಮಾತನಾಡುವುದು ಮತ್ತು ಭಾವನೆಗಳಿಗೆ ಧಕ್ಕೆಯಾಗದಂತೆ ವರ್ತಿಸಲು ಸೂಚಿಸುತ್ತಿರುತ್ತೇನೆ.
ಭವಿಷ್ಯದಲ್ಲಿ ಮಕ್ಕಳಿಗೆ ಯಾವುದೇ ಸಿಬ್ಬಂದಿಯಿಂದ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ಅಲ್ಲದೆ, ಮಕ್ಕಳೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಜ್ಞಾನವನ್ನು ವೃದ್ಧಿಸಲು ಮನಶಾಸ್ತ್ರಜ್ಞರಿಂದ ಕಾಲ ಕಾಲಕ್ಕೆ ತರಬೇತಿ ಕಾರ್ಯಾಗಾರ ಕೈಗೊಳ್ಳಲಾಗುವುದು ಎಂಬುದಾಗಿ ನ್ಯಾಯಪೀಠಕ್ಕೆ ಪ್ರಮಾಣಪತ್ರದ ಮೂಲಕ ಭರವಸೆ ನೀಡಿದ್ದರು. ಈ ಅಂಶವನ್ನು ದಾಖಲಿಸಿಕೊಂಡ ಪ್ರಕರಣವನ್ನು ಇತ್ಯರ್ಥ ಪಡಿಸಿತು.
ಇದನ್ನೂ ಓದಿ: ಬಿಜೆಪಿಯವರು ಸುಳ್ಳಿನ ಫ್ಯಾಕ್ಟರಿಯಾದರೆ ಆರ್ಎಸ್ಎಸ್ ಅದರ ರೂವಾರಿ: ಸಿದ್ದರಾಮಯ್ಯ ವಾಗ್ದಾಳಿ