ಬೆಂಗಳೂರು: ಟ್ಯಾಂಕರ್ ನೀರು ಸಂಪ್ಗೆ ತುಂಬಿಸುವಾಗ ದಿಢೀರ್ ಆಗಿ ಪುಟ್ಟ ಮಗುವೊಂದು ಅದರೊಳಗೆ ಬಿದ್ದ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ನಡೆದಿದ್ದು, ಇದರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಮನೆ ಹೊರಗಡೆ ಆಟವಾಡುತ್ತಿದ್ದ ಮಗು ಓಪನ್ ಇದ್ದ ಸಂಪ್ನೊಳಗೆ ಬಿದ್ದಿದೆ. ಆದರೆ ಪೋಷಕರ ಸಮಯಪ್ರಜ್ಞೆಯಿಂದ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಎಲೆಕ್ಟ್ರಾನಿಕ್ ಸಿಟಿ 2ನೇ ಹಂತದ ಬಳಿಯಿರುವ ಸಾಯಿ ಬಾಲಾಜಿ ಆಂಧ್ರ ಮೆಸ್ ಹೋಟೆಲ್ನ ಪಕ್ಕದ ಮನೆಯೊಂದರ ಸಂಪ್ಗೆ ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತಿತ್ತು. ಈ ವೇಳೆ ಸಂಪ್ ಓಪನ್ ಇದ್ದು, ಅದರಲ್ಲಿ ಮಗು ಬಿದ್ದಿದೆ. ಅದರ ಪಕ್ಕದಲ್ಲೇ ವಾಹನ ಓಡಾಡುತ್ತಿದ್ದರೂ ಮಗು ಸಂಪ್ನೊಳಗೆ ಬಿದ್ದಿರುವುದು ಯಾರ ಗಮನಕ್ಕೂ ಬಂದಿಲ್ಲ.
ಕೆಲ ಕ್ಷಣವಾದರೂ ಮಗು ಬಿದ್ದಿರುವುದು ಯಾರ ಗಮನಕ್ಕೂ ಬಂದಿಲ್ಲ. ಬಳಿಕ ಪೋಷಕರು ಹೊರ ಬಂದು ನೋಡಿದಾಗ ಮಗು ಕಾಣಿಸಿಲ್ಲ. ತಕ್ಷಣವೇ ಸಂಪ್ ಬಳಿ ಬಂದು ನೋಡಿದಾಗ ಮಗು ಬಿದ್ದಿರುವುದು ಕಂಡಿದೆ. ಕೂಡಲೇ ಸಂಪ್ನೊಳಗೆ ಇಳಿದು ಮಗುವಿನ ರಕ್ಷಣೆ ಮಾಡಿದ್ದಾರೆ. ಇದಾದ ಬಳಿಕ ಹೊರಕ್ಕೆ ಬಂದ ತಾಯಿ ಮಗುವನ್ನ ಎತ್ತಿಕೊಂಡು ಆರೈಕೆ ಮಾಡಿದ್ದಾರೆ. ಮಗುವಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.