ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ರೌಡಿಗಳ ಅವ್ಯವಹಾರ ಆರೋಪ ಸಂಬಂಧ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಬೆಳಗಾವಿಯ ಕಾರಾಗೃಹ ಡಿಐಜಿ ಸೋಮಶೇಖರ್ಗೆ ಸೂಚಿಸಿದೆ.
ಈ ಹಿಂದೆ ಬೆಂಗಳೂರು ಸೆಂಟ್ರಲ್ ಜೈಲು ಅಧೀಕ್ಷಕರಾಗಿ ಕಾರ್ಯ ನಿರ್ವಹಿಸಿರುವ ಅನುಭವದ ಆಧಾರದ ಮೇಲೆ ತನಿಖಾಧಿಕಾರಿಯಾಗಿ ಸೋಮಶೇಖರ್ ಅವರನ್ನ ನೇಮಿಸಿದ್ದು, ಇಂದು ಖುದ್ದು ಜೈಲಿಗೆ ಭೇಟಿ ಕೊಟ್ಟು ಪ್ರಕರಣದ ತನಿಖೆ ನಡೆಸಲಿದ್ದಾರೆ. ಈ ಮಧ್ಯೆಯೇ ಜೈಲಿನ ಚೀಫ್ ಸೂಪರ್ಡೆಂಟ್ ರಂಗನಾಥ್ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ಘಟನೆ ಮತ್ತು ಜೈಲಿನ ವ್ಯವಸ್ಥೆಯ ಬಗ್ಗೆ ಕಾರಾಗೃಹ ಎಡಿಜಿಪಿ ಅಲೋಕ್ ಮೋಹನ್ ಭೇಟಿ ಮಾಡಿ ವರದಿ ಸಲ್ಲಿಸಿದ್ದಾರೆ.
ಪ್ರಾಥಮಿಕ ವರದಿ ಆರು ಪುಟಗಳನ್ನ ಒಳಗೊಂಡಿದ್ದು, 20 ಅಂಶಗಳನ್ನ ಪ್ರಮುಖವಾಗಿ ಉಲ್ಲೇಖಿಸಲಾಗಿದೆ. 2019 ರಲ್ಲಿಯೇ ಜೆಸಿಬಿ ನಾರಾಯಣ ಬಿಡುಗಡೆಯಾಗಿರುವ ಜೈಲಿನ ಡೈರಿ ದಿನಾಂಕ ಉಲ್ಲೇಖ, ಜೈಲಿನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಕೆಲ ಸಿಬ್ಬಂದಿಗಳಿಂದ ಪಿತೂರಿ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ.
ಓದಿ: ನಾಳೆ ಸಿಎಂ ಜನ್ಮದಿನ.. ನಾಡಿನ ಜನತೆಗೆ ಬರ್ತ್ಡೇ ಗಿಫ್ಟ್ ಕೊಡೊ ಬಗ್ಗೆ ಏನಂದ್ರು ಗೊತ್ತಾ?
ಗಾಂಜಾ ಮತ್ತು ಮೊಬೈಲ್ ಬಳಕೆ ಸಂಬಂಧ 19 ಮಂದಿ ವಿರುದ್ಧ 12 ಎಫ್ಐಆರ್ ದಾಖಲಾಗಿದೆ. ಅತಿ ಹೆಚ್ಚು ವರ್ಷ ಜೈಲಿನಲ್ಲೇ ಕೆಲಸ ಮಾಡ್ತಿದ್ದ 52 ಸಿಬ್ಬಂದಿಯನ್ನ ವರ್ಗಾವಣೆ ಮಾಡಲಾಗಿದೆ. ಜೈಲಿಗೆ ಬಂದ ಒಂದೇ ವರ್ಷದಲ್ಲಿ ಇಬ್ಬರನ್ನ ಅಮಾನತು ಮಾಡಿ, ಎಂಟು ಮಂದಿ ಸಿಬ್ಬಂದಿ ವಿರುದ್ಧ ಇಲಾಖೆ ತನಿಖೆಗೆ ಆದೇಶ ನೀಡಿದೆ.
ಚೀಫ್ ಸೂಪರ್ಡೆಂಟ್ ಮತ್ತು ಸೂಪರ್ಡೆಂಟ್ರನ್ನ ಬಿಟ್ಟು ಜೈಲಿನಲ್ಲಿರುವ ಎಲ್ಲಾ ಪೊಲೀಸ್ ಸಿಬ್ಬಂದಿಗೂ ಮೊಬೈಲ್ ನಿಷೇಧಿಸಲಾಗಿದೆ. ಮೂರು ಹಂತದಲ್ಲಿ ಭದ್ರತಾ ಸಿಬ್ಬಂದಿಯ ಪರಿಶೀಲನೆ ಮಾಡಲಾಗುತ್ತಿದೆ. ಕೆಲ ಸಿಬ್ಬಂದಿಗಳ ಪಿತೂರಿಯಿಂದ ಜೈಲಿನಲ್ಲಿ ಆಗಾಗ ಸಮಸ್ಯೆಗಳಾಗುತ್ತಿದೆ ಎಂದು ವರದಿಯಲ್ಲಿ ನಮೂದಿಸಲಾಗಿದೆ.
ಈ ಹಿಂದೆ ಸೆಂಟ್ರಲ್ ಜೈಲಿನಲ್ಲಿ ಕಾರ್ಯ ನಿರ್ವಹಿಸಿದ್ದ ಸೋಮಶೇಖರ್ ಗೆ ಎರಡು ದಿನದಲ್ಲಿ ಕಂಪ್ಲೀಟ್ ರಿಪೋರ್ಟ್ ಕೊಡುವಂತೆ ಸೂಚಿಸಲಾಗಿದೆ. ಮುಖ್ಯಮಂತ್ರಿ ,ಗೃಹ ಸಚಿವರು ಮತ್ತು ಕಾರಾಗೃಹ ಇಲಾಖೆ ಎಡಿಜಿಪಿಗೆ ವರದಿ ಕೊಡಲು ತನಿಖಾಧಿಕಾರಿಗಳಿಗೆ ಸೂಚಿಸಲಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ