ಬೆಂಗಳೂರು: ರಾಜ್ಯ ಸಂಪುಟ ವಿಸ್ತರಣೆ ಬಿಜೆಪಿ ಹೈಕಮಾಂಡ್ ಒಪ್ಪಿಗೆ ಪಡೆಯಲು ನವದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಭಾಗಶಃ ಯಶಸ್ಸು ಸಿಕ್ಕಿದೆ ಎಂದು ತಿಳಿದು ಬಂದಿದೆ.
ಸಂಪುಟ ವಿಸ್ತರಣೆಗೆ ಸೀಮಿತವಾಗಿ ಸಮ್ಮತಿ ನೀಡಿದ್ದು, ಸರ್ಕಾರ ರಚನೆಗೆ ಕಾರಣರಾದವರ ಸೇರ್ಪಡೆಗೆ ಮಾತ್ರ ಈಗ ಅವಕಾಶ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಸಚಿವಾಕಾಂಕ್ಷಿಗಳ ಪಟ್ಟಿಯೊಂದಿಗೆ ದೆಹಲಿಗೆ ತೆರಳಿರುವ ಸಿಎಂ ಸಚಿವರ ಪಟ್ಟಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾಗೆ ನೀಡಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆ ಕುರಿತು ಪ್ರಸ್ತಾಪವನ್ನು ಇರಿಸಿದ್ದರು. ಆದರೆ ಈ ಹಂತದಲ್ಲಿ ಸಂಪುಟ ಪುನಾರಚನೆ ಬೇಡ ಎಂದಿರುವ ಜೆ.ಪಿ ನಡ್ಡಾ ಸಂಪುಟ ವಿಸ್ತರಣೆಗೆ ಬಹುತೇಕ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.
ಸರ್ಕಾರ ರಚನೆಗೆ ಕಾರಣರಾದವರ ವಿಚಾರದಲ್ಲಿ ಹೈಕಮಾಂಡ್ ಮಧ್ಯ ಪ್ರವೇಶ ಮಾಡಿಲ್ಲ. ಎಂಟಿಬಿ ನಾಗರಾಜ್ ಹಾಗೂ ಆರ್.ಶಂಕರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಒಪ್ಪಿಗೆ ನೀಡಿದೆ. ಇವರೊಂದಿಗೆ ಹಿರಿಯ ಬಿಜೆಪಿ ಶಾಸಕ ಉಮೇಶ್ ಕತ್ತಿ ಸೇರ್ಪಡೆಗೆ ಸಿಎಂ ಪಟ್ಟು ಹಿಡಿದಿದ್ದಾರೆ. ಹಿರಿಯ ಅನುಭವಿ ರಾಜಕಾರಣಿ, ಈಗಾಗಲೇ ಎರಡು ಬಾರಿ ಅವಕಾಶ ಕೈತಪ್ಪಿದೆ. ಈ ಬಾರಿ ಅಂತಹ ಬೆಳವಣಿಗೆಯಾಗಬಾರದು ಅವಕಾಶ ಕಲ್ಪಿಸಿ ಎಂದು ಜೆ.ಪಿ ನಡ್ಡಾ ಅವರಿಗೆ ಸಿಎಂ ಮನವಿ ಮಾಡಿದ್ದಾರೆ.
ಸಿಎಂ ಮನವಿ ಆಲಿಸಿರುವ ಜೆಪಿ ನಡ್ಡಾ ಈ ಬಗ್ಗೆ ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆಸಿ ನಂತರ ಅಂತಿಮಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಪಕ್ಷದ ಮೂಲಗಳ ಪ್ರಕಾರ ಬೆಳಗ್ಗೆ ಸಿಎಂ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿರುವ ಜೆಪಿ ನಡ್ಡಾ ನಿರ್ಧಾರವನ್ನು ನಾಳೆ ಸಂಜೆ ತಿಳಿಸಲಿದ್ದಾರೆ ಎನ್ನಲಾಗುತ್ತಿದೆ.
ಸಿಎಂ ಬಿಎಸ್ವೈ ಬೆಂಗಳೂರಿಗೆ ಬಂದ ನಂತರ ಪಟ್ಟಿಯನ್ನು ಕಳಿಸಿಕೊಡಲಾಗುತ್ತದೆ ಎನ್ನಲಾಗುತ್ತಿದೆ. ಅಧಿವೇಶನಕ್ಕೆ ಮುನ್ನ ಸಂಪುಟ ವಿಸ್ತರಣೆ ಮಾಡಿ ಸಮಸ್ಯೆ ಸೃಷ್ಠಿಸಿಕೊಳ್ಳಬೇಡಿ ಎಂದು ಹೈಕಮಾಂಡ್ ಹೇಳಿದ್ರೂ, ಭಾನುವಾರವೇ ಸಂಪುಟ ವಿಸ್ತರಣೆಗೆ ಸಿಎಂ ಉತ್ಸುಕರಾಗಿದ್ದಾರೆ. ಆದರೆ ಅಧಿವೇಶನಕ್ಕೆ ಮುನ್ನವೇ ಸಂಪುಟ ವಿಸ್ತರಣೆ ಆಗಲಿದೆಯೋ ಇಲ್ವೋ ಅಧಿವೇಶನದ ನಂತರ ವಿಸ್ತರಣೆ ಆಗಲಿದೆಯೋ,ಯಾರೆಲ್ಲ ಸಂಪುಟಕ್ಕೆ ಸೇರ್ಪಡೆ ಆಗಲಿದ್ದಾರೆ ಎನ್ನುವುದು ಹೈಕಮಾಂಡ್ ನಿರ್ಧಾರದ ಮೇಲೆ ನಿಂತಿದೆ.