ಬೆಂಗಳೂರು : ಕೊರೊನಾ ಭೀತಿಯಲ್ಲಿ ಸ್ಥಗಿತಗೊಂಡಿದ್ದ ಹೈಕೋರ್ಟ್ ಇಂದಿನಿಂದ ಆರಂಭವಾಗಿದೆ. ಆದರೆ, ನ್ಯಾಯಾಲಯದ ಆವರಣ ಪ್ರವೇಶಿಸುವ ವೇಳೆ ಮಿತಿ ಮೀರಿದ ಜನಜಂಗುಳಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನಿಯಮ ಉಲ್ಲಂಘಿಸಿದ್ದಕ್ಕೆ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೈಕೋರ್ಟ್ ಆರಂಭವಾದ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ವಕೀಲರು ಬೆಳಗ್ಗೆಯಿಂದಲೇ ಬರಲಾರಂಭಿಸಿದ್ದರು. ಆದರೆ, ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೋರ್ಟ್ ಆವರಣ ಪ್ರವೇಶಿಸಲು ಸಾಲಿನಲ್ಲಿ ನಿಂತಿದ್ದರು. ಮಧ್ಯಾಹ್ನದ ಹೊತ್ತಿಗೆ ಈ ವಿಚಾರ ತಿಳಿದು ಹೈಕೋರ್ಟ್ ಪ್ರವೇಶದ್ವಾರಕ್ಕೆ ಆಗಮಿಸಿದ ಮುಖ್ಯ ನ್ಯಾಯಮೂರ್ತಿಗಳು, ಸನ್ನಿವೇಶ ಗಮನಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳದ ವಕೀಲರು ಮತ್ತು ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಸಿಜೆ, 'ನಿನ್ನೆ ಒಂದೇ ದಿನ ರಾಜ್ಯದಲ್ಲಿ 300 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯವಾಗಿವೆ. ಛತ್ತೀಸ್ಗಢ ಹಾಗೂ ದೆಹಲಿ ಹೈಕೋರ್ಟ್‌ಗಳು ಕಲಾಪ ಆರಂಭ ಮಾಡಿದ್ದರೂ ಕೊರೊನಾ ಭೀತಿಯಲ್ಲಿ ಮತ್ತೆ ಸ್ಥಗಿತಗೊಂಡಿವೆ ಎಂದರು.
ನಂತರ ಮಾತು ಮುಂದುವರೆಸಿ, ಪ್ರಸ್ತುತ ದೇಶದಲ್ಲೆಲ್ಲೂ ಹೈಕೋರ್ಟ್‌ಗಳು ಕೆಲಸ ಮಾಡುತ್ತಿಲ್ಲ. ಹಾಗಿದ್ದೂ, ನಮ್ಮ ನ್ಯಾಯಮೂರ್ತಿಗಳು ಜೀವ ಪಣಕ್ಕಿಟ್ಟು ಕಲಾಪ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ವಕೀಲರು ಸಹಕಾರ ನೀಡದಿದ್ದರೆ ಹೇಗೆಂದು ಪ್ರಶ್ನಿಸಿದ್ದಾರೆ. ಸಾಮಾಜಿಕ ಅಂತರ ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಪಾಲಿಸದಿದ್ದರೆ ಕಲಾಪ ಸ್ಥಗಿತಗೊಳಿಸುವುದಾಗಿ ಎಚ್ಚರಿಸಿದ್ದಾರೆ. ಇದೇ ವೇಳೆ ಸಿಬ್ಬಂದಿ ಮತ್ತು ವಕೀಲರನ್ನು ಹೊರತುಪಡಿಸಿ ಅನುಮತಿ ಇಲ್ಲದ ಯಾರಿಗೂ ಒಳ ಬಿಡದಂತೆ ಭದ್ರತಾ ಸಿಬ್ಬಂದಿಗೆ ಸೂಚಿಸಿದ್ದಾರೆ.
ಹನ್ನೆರಡು ಪೀಠಗಳಲ್ಲಷ್ಟೇ ಕಲಾಪ : ಮುಖ್ಯ ನ್ಯಾಯಮೂರ್ತಿ ಸೂಚನೆ ಮೇರೆಗೆ ಹೈಕೋರ್ಟ್‌ನಲ್ಲಿ ಇಂದಿನಿಂದ 3 ವಿಭಾಗೀಯ ಪೀಠ ಮತ್ತು 9 ಏಕಸದಸ್ಯ ಪೀಠಗಳು ಸೇರಿ ಒಟ್ಟು 12 ಕೋರ್ಟ್ಗಳು ಮಾತ್ರ ಕಲಾಪ ಆರಂಭಿಸಿವೆ. ಬೆಳಗ್ಗೆ ಬರೀ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆದರೆ, ಮಧ್ಯಾಹ್ನ ತೆರೆದ ನ್ಯಾಯಾಲಯಗಳಲ್ಲಿ ಕಲಾಪ ನಡೆದಿದೆ. ಖುದ್ದು ವಾದ ಮಂಡಿಸಿದ ವಕೀಲರಿಗೆ 15 ರಿಂದ 20 ನಿಮಿಷಗಳಿಗಷ್ಟೇ ವಾದ ಮಂಡನೆಗೆ ಅವಕಾಶ ನೀಡಲಾಗಿದೆ. ಕೋರ್ಟ್ ಹಾಲ್‌ಗಳ ಒಳಗೆ ಎಸಿ ಬದಲು ಫ್ಯಾನ್ ಬಳಕೆ ಮಾಡಲಾಗಿದೆ.