ಬೆಂಗಳೂರು: ಕರ್ನಾಟಕ ರಾಜ್ಯ ಕೃಷಿ ಮಾರುಕಟ್ಟೆ ಬೋರ್ಡ್ ಹೆಸರಿನಲ್ಲಿ ವಂಚನೆ ಮಾಡಿರುವ ಆರೋಪ ಪ್ರಕರಣದ ಸಂಬಂಧ ಜಾರಿ ನಿರ್ದೇಶನಾಯದಿಂದ ಅರೋಪಿಗಳ ಆಸ್ತಿಯನ್ನು ಜಪ್ತಿ ಮಾಡಿದೆ. ಇಡಿಯಿಂದ ಚಿನ್ನಾಭರಣ ಮತ್ತು ಆಸ್ತಿ ಸೇರಿ 4.98 ಕೋಟಿ ರೂ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ.
ಪ್ರಿವೆನ್ಷನ್ ಆಫ್ ಮನಿ ಲಾಂಡ್ರಿಂಗ್ ಕಾಯ್ದೆಯಡಿ ಆಸ್ತಿಯನ್ನು ಮತ್ತು ಕೆ.ಎಸ್.ಎ.ಬಿ.ಎಂ ಹೆಸರಿನಲ್ಲಿ ಕರೆಂಟ್ ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡಿ ಹಣವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯಾದ ಮೊಹಮ್ಮದ್ ಮುಸ್ತಫಾ, ಕೆ.ಎಸ್.ಎ.ಬಿ.ಎಂ ಆಫೀಸರ್ ಅಂತ ಹೇಳಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಅಕೌಂಟ್ ಓಪನ್ ಮಾಡಿದ್ದ. ಬಳಿಕ ನಕಲಿ ಅಕೌಂಟ್ ಗೆ 50 ಕೋಟಿ ಹಣ ಟ್ರಾನ್ಸ್ ಫರ್ ಮಾಡಿಕೊಂಡಿದ್ದ ಎನ್ನಲಾಗ್ತಿದೆ.
ಉತ್ತರ ಹಳ್ಳಿಯ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಜೈರಾಮ್ ಸಹಾಯ ಪಡೆದು ಈ ಹಣ ವರ್ಗಾವಣೆ ಮಾಡಿಕೊಂಡಿದ್ದ. ನಂತರ 47.15 ಕೋಟಿ ರೂ. ಹಣ ವಿವಿಧ ಅಕೌಂಟ್ ಗಳಿಗೆ ವರ್ಗಾವಣೆ ಮಾಡಿದ್ದ ಎಂದು ತಿಳಿದುಬಂದಿದೆ.
ಬಳಿಕ ಆ ಹಣದಿಂದ ಚಿನ್ನಾಭರಣ ಮತ್ತು ಆಸ್ತಿ ಖರೀದಿಸಿದ್ದ ಆರೋಪಿ, ಐಷಾರಾಮಿ ಜೀವನ ನಡೆಸುತ್ತಿದ್ದ. ಈ ಪ್ರಕರಣದಲ್ಲಿ ವಿಜಯ್, ಆಕಾಶ್, ಮೊಹಮದ್ ಮುಸ್ತಫಾ, ಜೈರಾಮ್ ಸೇರಿ ಹಲವರು ಕೃತ್ಯದಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.