ಬೆಂಗಳೂರು: ಚೀಟಿ ಹೆಸರಿನಲ್ಲಿ ದಂಪತಿಗಳಿಂದ ನೂರಾರು ಜನ ಅಮಾಯಕರಿಗೆ ಕೋಟ್ಯಂತರ ರೂಪಾಯಿ ಮೋಸ ಮಾಡಿರುವ ಘಟನೆ ಹೊಸಕೆರೆಹಳ್ಳಿಯ ದತ್ತಾತ್ರೇಯ ನಗರದಲ್ಲಿ ಬೆಳಕಿಗೆ ಬಂದಿದೆ. ಹೊಸಕೆರೆಹಳ್ಳಿ ದತ್ತಾತ್ರೇಯ ನಗರದ ನೀಲಾವತಿ ಮತ್ತು ಜ್ಞಾನೇಶ್ ದಂಪತಿ ವಂಚನೆ ಮಾಡಿದ ಆರೋಪಿಗಳು ಎಂಬುದು ತಿಳಿದು ಬಂದಿದೆ. ಚೀಟಿಹಾಕಿ ಮೋಸ ಹೋದವರೇ ದಂಪತಿಯನ್ನು ಗಿರಿನಗರ ಪೊಲೀಸ್ ಠಾಣೆಗೆ ಕರೆತಂದು ತಮ್ಮ ಹಣವನ್ನು ವಾಪಸ್ ಕೊಡಿಸುವಂತೆ ನಿನ್ನೆ ದೂರು ನೀಡಿದ್ದರು.
ಓದಿ: ಬಸ್ನಿಂದ ಕಂಡಕ್ಟರ್ ಬಿದ್ರೂ 5 ಕಿಲೋಮೀಟರ್ ಹೋಗೋವರೆಗೂ ಡ್ರೈವರ್ಗೆ ಗೊತ್ತೇ ಆಗಿಲ್ಲ!!
ಆರೋಪಿಗಳು ಕಳೆದೊಂದು ವರ್ಷದಿಂದ ನೂರಾರು ಜನರನ್ನು ಸೇರಿಸಿಕೊಂಡು ಹೊಸಕೆರೆಹಳ್ಳಿ ದತ್ತಾತ್ರೇಯ ನಗರದಲ್ಲಿ ಚೀಟಿ ವ್ಯವಹಾರ ನಡೆಸುತ್ತಿದ್ದರು. ಕಳೆದ ಆರು ತಿಂಗಳ ಹಿಂದೆ ಚೀಟಿ ಮುಗಿದಿತ್ತು. ಆದರೂ ಸಹ ಮತ್ತೆ ಬಡ್ಡಿ ಕೊಡುವುದಾಗಿ ಜನರನ್ನು ನಂಬಿಸಿದ್ದರು. ಬಳಿಕ ಕಳೆದ ಆರು ತಿಂಗಳಿಂದ ಹಣ ನೀಡದೇ ಇಬ್ಬರು ಪರಾರಿಯಾಗಿದ್ದರು.
ಹಣ ಹಾಕಿದವರು ನೀಲಾವತಿಯವರ ಸ್ವಂತ ಮನೆ ಇದೆ ಎನ್ನುವ ಕಾರಣಕ್ಕೆ ತಾಳ್ಮೆಯಿಂದ ಇದ್ದರು. ಇದರ ನಡುವೆ ಚೀಟಿ ಹಾಕಿದ್ದ ಜನರಿಗೆ ಈಗ ಹೊಸಕೆರೆಹಳ್ಳಿಯಲ್ಲಿದ್ದ ಮನೆಯನ್ನು ಮಾರಾಟ ಮಾಡಿರುವ ವಿಚಾರ ತಿಳಿದು ನೀಲಾವತಿ ಹುಡುಕಿ ಗಿರಿನಗರ ಠಾಣೆಗೆ ನಿನ್ನೆ ಕರೆತಂದಿದ್ದರು. ಠಾಣೆ ಎದುರು ನಿಂತು ನಮ್ಮ ಹಣ ವಾಪಸ್ ಕೊಡಿಸುವಂತೆ ಪಟ್ಟು ಹಿಡಿದಿದ್ದರು. ಈ ಕುರಿತು ಪೊಲೀಸರು ದೂರು ದಾಖಲಿಸಿಕೊಂಡಿದ್ದರು.
ಹೊಸಕೆರೆಹಳ್ಳಿ ದತ್ತಾತ್ರೇಯ ನಗರದಲ್ಲಿ ಚೀಟಿ ವ್ಯವಹಾರ
ಹೊಸಕೆರೆಹಳ್ಳಿ, ಗಿರಿನಗರ ಸುತ್ತಮುತ್ತಲಿನ ನೂರಾರು ಮಂದಿಗೆ ಚೀಟಿ ಹೆಸರಿನಲ್ಲಿ 5 ಕೋಟಿಗೂ ಅಧಿಕ ಹಣ ವಂಚಿಸಿರುವ ಸಂಗತಿ ಬೆಳಕಿಗೆ ಬಂದಿದೆ. ಚೀಟಿ ಹಣ ಹಿಂದಿರುಗಿಸದೇ ತಾವೇ ಬಡ್ಡಿ ನೀಡುವುದಾಗಿ ಹೇಳಿ ವಂಚಿಸುತ್ತಿದ್ದ ದಂಪತಿ ವಿರುದ್ಧ ಇದುವರೆಗೂ 50ಕ್ಕೂ ಅಧಿಕ ಮಂದಿಯಿಂದ ದೂರು ದಾಖಲಾಗಿದೆ. ದಂಪತಿ ಹೊಸಕೆರೆಹಳ್ಳಿಯ ಮನೆಯನ್ನೂ ಖಾಲಿ ಮಾಡಿ ಎಸ್ಕೇಪ್ ಆಗಿದ್ದರು. ಇದೀಗ ಗಿರಿನಗರ ಠಾಣಾ ಪೊಲೀಸರು ವಂಚಕ ದಂಪತಿಯನ್ನು ವಶಕ್ಕೆ ಪಡೆದಿದ್ದಾರೆ.