ಬೆಂಗಳೂರು: ಬಾಂಗ್ಲಾ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ನಗರ ಪೂರ್ವ ವಿಭಾಗದ ಪೊಲೀಸರ ತನಿಖೆ ಮುಕ್ತಾಯ ಹಂತದಲ್ಲಿದ್ದು, ಇನ್ನೊಂದು ವಾರದಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ. ಸಂತ್ರಸ್ತೆ ಸೇರಿದಂತೆ ಎಲ್ಲರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಕೊರೊನಾ ವಕ್ಕರಿಸಿದ್ದರಿಂದ ಆರೋಪಿ ಸಾಗರ್ ಮೊಹಮ್ಮದ್ ಬಾಬಾ ಶೇಕ್ನನ್ನು ವಿಚಾರಣೆಗೆ ಒಳಪಡಿಸಲು ಸಾಧ್ಯವಾಗಿರಲಿಲ್ಲ. ಸೋಂಕಿನಿಂದ ಗುಣಮುಖನಾಗಿದ್ದು ಇನ್ನೆರಡು ದಿನಗಳಲ್ಲಿ ಈತನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ. ಬಾಕಿ ಉಳಿದಿರುವ ಎಫ್ಎಸ್ಎಲ್ ಹಾಗೂ ಡಿಎನ್ಎ ವರದಿ ಬಂದ ಬಳಿಕ ಇನ್ನೊಂದು ವಾರದಲ್ಲಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ತಯಾರಿ ನಡೆಸುತ್ತಿದ್ದಾರೆ.
ಪ್ರಕರಣದಲ್ಲಿ ಒಟ್ಟು 12 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಹಣಕಾಸು ವೈಷಮ್ಯದಿಂದಲೇ ಸಂತ್ರಸ್ತೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಬಾಂಗ್ಲಾದಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದಾಗಿ ತನಿಖಾಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾರೆ. ಕೃತ್ಯ ನಡೆದ ದಿನದಂದು ಎಲ್ಲಾ ಆರೋಪಿಗಳು ಒಂದೇ ಕಡೆ ಇರುವುದು ಟವರ್ ಲೊಕೇಷನ್ ಮೂಲಕ ಗೊತ್ತಾಗಿದೆ. ಜಪ್ತಿ ಮಾಡಿಕೊಂಡ ಆರೋಪಿಗಳ ಮೊಬೈಲ್ಗಳನ್ನು ರಿಟ್ರೀವ್ ಮಾಡಿದಾಗ ಸಂತ್ರಸ್ತೆಯ ವಿಡಿಯೋ ಹಾಗೂ ಇನ್ನಿತರೆ ಸಹಚರರೊಂದಿಗೆ ಫೋನ್ನಲ್ಲಿ ಮಾತನಾಡಿರುವುದು ಗೊತ್ತಾಗಿದೆ. ಆರೋಪಿಗಳ ಫಿಂಗರ್ ಪ್ರಿಂಟ್ ಸಹ ಮ್ಯಾಚ್ ಆಗಿದೆ. ಇನ್ನಿತರೆ ತಾಂತ್ರಿಕ ತನಿಖೆ ನಡೆಸಿದಾಗ ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: C M Udasi Funeral: ಉದಾಸಿ ಅಂತ್ಯಕ್ರಿಯೆಗೆ ವಿರಕ್ತಮಠದಲ್ಲಿ ಸಕಲ ಸಿದ್ಧತೆ
ಪ್ರಕರಣ ಸಂಬಂಧ ಕೃತ್ಯ ಬೆಳಕಿಗೆ ಬಂದ ದಿನದಂದು ಆರೋಪಿಗಳು ವಾಸವಾಗಿದ್ದ ರಾಮಮೂರ್ತಿನಗರ ಚನ್ನಸಂದ್ರದ ಮನೆಗೆ ಎಫ್ಎಸ್ಎಲ್ ಅಧಿಕಾರಿಗಳು ತೆರಳಿ ಶೋಧ ನಡೆಸಿ ಮದ್ಯದ ಬಾಟಲ್, ಹಾಸಿಗೆ ದಿಂಬು ಸೇರಿದಂತೆ 17 ರೀತಿಯ ವಸ್ತುಗಳ ಸ್ಯಾಂಪಲ್ ಸಂಗ್ರಹಿಸಿದ್ದರು. ಇದರ ವರದಿ ಇನ್ನಷ್ಟೇ ಬರಬೇಕಿದೆ. ಮತ್ತೊಂದೆಡೆ ಎಲ್ಲಾ ಆರೋಪಿಗಳ ಡಿಎನ್ಎ ಪರೀಕ್ಷೆ ನಡೆಸಲು ಮುಂದಾಗಿದ್ದು, ಕೋರ್ಟ್ ಅನುಮತಿ ನೀಡಿದ ಬಳಿಕ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಗಂಭೀರ ಪ್ರಕರಣ ಆಗಿರುವುದರಿಂದ ಹಾಗೂ ನಗರ ಪೊಲೀಸ್ ಆಯುಕ್ತರೇ ಖುದ್ದು ಜವಾಬ್ದಾರಿ ವಹಿಸಿಕೊಂಡಿರುವುದರಿಂದ ಡಿಎನ್ಎ ಪರೀಕ್ಷಾ ವರದಿ ಬೇಗನೇ ಬರುವ ಸಾಧ್ಯತೆಯಿದೆ. ಮತ್ತೊಂದೆಡೆ ಎಫ್ಎಸ್ಎಲ್ ರಿಪೋರ್ಟ್ ತ್ವರಿತವಾಗಿ ನೀಡುವಂತೆ ಖುದ್ದು ನಗರ ಪೂರ್ವ ವಿಭಾಗದ ಡಿಸಿಪಿ ಡಾ.ಶರಣಪ್ಪ ಅವರು ವಿಧಿವಿಜ್ಞಾನ ತಜ್ಞರಿಗೆ ಮನವಿ ಮಾಡಿದ್ದಾರೆ.
300ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆ:
ಬಂಧನಕ್ಕೆ ಒಳಗಾದ 12 ಮಂದಿ ಆರೋಪಿಗಳ ಪೈಕಿ ಪ್ರಮುಖ ಆರೋಪಿ ರಿದಯ್ ಬಾಬುಗೆ ಕೊರೊನಾ ಸೋಂಕು ಕಂಡುಬಂದಿದ್ದರಿಂದ ವಿಚಾರಣೆ ನಡೆಸದೆ ಪ್ರತ್ಯೇಕವಾಗಿ ಇರಿಸಲಾಗಿತ್ತು. ಇದೀಗ ಗುಣಮುಖರಾಗಿರುವ ಸಾಗರ್ ಮೊಹಮ್ಮದ್ ಬಾಬಾ ಶೇಕ್ ನನ್ನು ಇನ್ನೆರಡು ದಿನಗಳ ಬಳಿಕ ತನಿಖಾಧಿಕಾರಿಗಳು ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ. ಎಫ್ಎಸ್ಎಲ್ ವರದಿ ಬಂದರೆ ಇನ್ನೊಂದು ವಾರದಲ್ಲಿ 300ಕ್ಕೂ ಅಧಿಕ ಪುಟಗಳ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
12 ಮಂದಿ ಅರೆಸ್ಟ್ :
ಪ್ರಕರಣದಲ್ಲಿ ಈವರೆಗೂ 12 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ರಿದಯ್ ಬಾಬು, ಸಾಗರ್ ಮೊಹಮ್ಮದ್ ಬಾಬಾ ಶೇಕ್, ನುಸ್ರತ್, ಕಾಜಲ್ ಶೋಬಜ್ ಮತ್ತು ರುಪ್ಸನಾ ಹಾಗೂ ದಾಲೀಮ್, ಜಮಾಲ್ ಮತ್ತು ಅಜೀಂ, ಅಕಿಲ್, ರಫ್ಸನ್ ಹಾಗೂ ಈತನ ಪತ್ನಿ ತಾನ್ಯಾ ಎಂಬುವರನ್ನು ಜೂ.14 ರವರೆಗೆ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.