ಬೆಂಗಳೂರು: ನಗರದ ಬೆಡ್ ಬ್ಲಾಕಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳನ್ನು ದಾಖಲು ಮಾಡಲಾಗಿತ್ತು. ನಂತರ ಒಂದು ಕೇಸ್ ಠಾಣೆ ವ್ಯಾಪ್ತಿಯ ಕಾರಣಕ್ಕೆ ಹೆಚ್ಎಸ್ಆರ್ ಲೇಔಟ್ಗೆ ವರ್ಗಾವಣೆ ಮಾಡಲಾಗಿತ್ತು. ಈ ಎರಡು ಕೇಸ್‌ಗಳ ತನಿಖೆಯನ್ನು ಸಿಸಿಬಿ ನಡೆಸುತ್ತಿದ್ದು, ಎರಡು ಪ್ರತ್ಯೇಕ ಪ್ರಕರಣಗಳ ಪೈಕಿ ಒಂದು ಕೇಸ್ ಮೇಲೆ ಚಾರ್ಜ್ಶೀಟ್ ಸಲ್ಲಿಸಲಾಗಿದೆ.
ಒಂದನೇ ಎಸಿಸಿಎಂಎಂ ನ್ಯಾಯಾಲಯಕ್ಕೆ ಸಿಸಿಬಿ ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ. ಪ್ರಕರಣದ ತನಿಖೆಯನ್ನು ಸಿಸಿಬಿ ಇನ್ಸ್ಪೆಕ್ಟರ್ ಶ್ರೀಧರ್ ಪೂಜಾರ್ ನಡೆಸುತ್ತಿದ್ದು, ಕೇಸ್‌ನಲ್ಲಿ ಒಟ್ಟು ಮೂವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಆಪ್ತ ಬಾಬು, ರೋಹಿತ್ ಮತ್ತು ನೇತ್ರಾವತಿ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಮೂವರು ಸೇರಿ ಹಣ ಪಡೆದು ಬೆಡ್ ಬ್ಲಾಕ್ ಮಾಡಿಸಿ ಕೊಟ್ಟಿದ್ದರು ಎಂಬುದು ತನಿಖೆಯಲ್ಲಿ ದೃಢವಾಗಿದೆ. ಇದಲ್ಲದೇ ತನಿಖೆಯಲ್ಲಿ ಮೂವರು ರೋಗಿಗಳಿಂದ ಹಣ ಪಡೆದು ಬೆಡ್ ಕೊಡಿಸಿರುವುದಕ್ಕೆ ಸಾಕ್ಷ್ಯ ಕೂಡ ಲಭ್ಯವಾಗಿದೆ. ಆನ್‌ಲೈನ್ ಟ್ರಾನ್ಸಾಕ್ಷನ್‌ಗಳಾದ ಗೂಗಲ್ ಪೇ, ಫೋನ್ ಪೇ ಮೂಲಕ ಹಣ ವರ್ಗಾವಣೆ ಕೂಡ ನಡೆದಿದೆ ಎಂದು ಉಲ್ಲೇಖಿಸಲಾಗಿದೆ.
ಆರೋಪಿಗಳು ರೋಗಿ ನಂಬರ್ 1ರಿಂದ 80 ಸಾವಿರ, ರೋಗಿ ನಂ. 2ರಿಂದ 25 ಸಾವಿರ, ರೋಗಿ ನಂ. 3ರಿಂದ 20 ಸಾವಿರ ಹಣ ಪಡೆದಿದ್ದರು. ಇದೀಗ ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿ, ಮೂವರ ವಿರುದ್ಧ ಸಾಕ್ಷಿ ಸಹಿತ ಒಟ್ಟು 250 ಪುಟಗಳ ಚಾರ್ಜ್ಶೀಟನ್ನು ಎಸಿಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಇದನ್ನೂ ಓದಿ: ಬಾಗಲಕೋಟೆ: ಒಂದೇ ಕುಟುಂಬದ ನಾಲ್ವರು ಕೋವಿಡ್ಗೆ ಬಲಿ
ಮತ್ತೊಂದು ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಜಯನಗರದಲ್ಲಿ ದಾಖಲಾಗಿದ್ದ ಕೇಸ್ ಮೇಲೆ ನಡೆಸುತ್ತಿದ್ದಾರೆ. ಈ ಕೇಸ್‌ನಲ್ಲಿ ನಗರದಲ್ಲಿ ನಡೆದಿರೋ ಸಂಪೂರ್ಣ ಬೆಡ್ ಬ್ಲಾಕ್ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ನಗರದ ಹಲವು ಪ್ರತಿಷ್ಠಿತ ಅಸ್ಪತ್ರೆಗೆಗಳಲ್ಲಿ ನಡೆದಿರೋ ಅಕ್ರಮದ ತನಿಖೆ ಪ್ರಗತಿಯಲ್ಲಿದೆ. ಇನ್ನು ಎರಡನೇ ಪ್ರಕರಣದಲ್ಲಿ ಇದುವರೆಗೂ 8 ಜನರನ್ನು ಅರೆಸ್ಟ್ ಮಾಡಲಾಗಿದೆ.