ಬೆಂಗಳೂರು: ಲಂಚ ಸ್ವೀಕಾರ ಪ್ರಕರಣದಲ್ಲಿ ನ್ಯಾಯಾಂಗದ ಬಂಧನದಲ್ಲಿದ್ದ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಪ್ರಕಟಿಸಿದೆ. ಮಾರ್ಚ್ 27ರಂದು ಲೋಕಾಯುಕ್ತ ಪೊಲೀಸರಿಂದ ಬಂಧನವಾಗಿದ್ದ ಮಾಡಾಳ್ ವಿರೂಪಾಕ್ಷಪ್ಪಗೆ ಐದು ಷರತ್ತುಗಳನ್ನ ವಿಧಿಸುವ ಮೂಲಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ. ಜಯಂತ ಕುಮಾರ್ ಆದೇಶ ಪ್ರಕಟಿಸಿದ್ದಾರೆ.
ಷರತ್ತುಗಳೇನು?: 5 ಲಕ್ಷ ಬಾಂಡ್, ಇಬ್ಬರ ಶ್ಯೂರಿಟಿ, ಮೂರು ವಾರಕ್ಕೊಮ್ಮೆ ಲೋಕಾಯುಕ್ತ ಪೊಲೀಸರ ಮುಂದೆ ಹಾಜರಾಗಬೇಕು, ತನಿಖಾಧಿಕಾರಿಗಳ ವಶಕ್ಕೆ ಪಾಸ್‌ಪೋರ್ಟ್ ನೀಡಬೇಕು, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮಕ್ಕೆ ಭೇಟಿ ನೀಡುವಂತಿಲ್ಲ, ಸಾಕ್ಷ್ಯಾಧಾರ ನಾಶಪಡಿಸುವಂತಿಲ್ಲವೆಂದು ಷರತ್ತು ವಿಧಿಸಿ ಜಾಮೀನು ಮಂಜೂರುಗೊಳಿಸಲಾಗಿದೆ.
ಪ್ರಕರಣವೇನು?: ಚನ್ನಗಿರಿ ಕ್ಷೇತ್ರ ಶಾಸಕರೂ ಆಗಿರುವ ಮಾಡಾಳ್ ವಿರುಪಾಕ್ಷಪ್ಪ ಅವರು ಕೆಎಸ್‌ಡಿಎಲ್‌ನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ರಾಸಾಯನಿಕಗಳನ್ನು ಪೂರೈಕೆಗಾಗಿ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರಿಗೆ ಕಾರ್ಯದೇಶ ನೀಡಲು 80 ಲಕ್ಷ ರೂಪಾಯಿಗಳ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಕೇಳಿ ಬಂದಿತ್ತು. ಇದರ ಮುಂದುವರಿದ ಭಾಗವಾಗಿ 40 ಲಕ್ಷ ರೂಪಾಯಿಗಳನ್ನು ಮಾಡಾಳ್ ವಿರುಪಾಕ್ಷಪ್ಪ ಮಗ ಮಾಡಾಳ್ ಪ್ರಶಾಂತ್ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಲಂಚದ ರೂಪದಲ್ಲಿ ಸ್ವೀಕರಿಸುತ್ತಿದ್ದ ಹಣ ವಶಕ್ಕೆ ಪಡೆದು ಪ್ರಶಾಂತ್ ಅವರನ್ನು ಬಂಧಿಸಿದ್ದರು.
ಇದಾದ ಬಳಿಕ ವಿರುಪಾಕ್ಷಪ್ಪ ಮತ್ತವರ ಮಗನ ಬೆಂಗಳೂರಿನ ಕಚೇರಿಗಳು ಹಾಗೂ ಮನೆ ಮತ್ತು ಚೆನ್ನಗಿರಿಯ ಮನೆಗಳ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ಕೋಟ್ಯಂತರ ರೂಪಾಯಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದರು.
ಜಾಮೀನು ಅರ್ಜಿ ಕಾಯ್ದಿರಿಸಿದ್ದ ನಾಯಾಲಯ: ಅರ್ಜಿದಾರ ವಿರೂಪಾಕ್ಷಪ್ಪ ಮಾಡಾಳ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ. ವಿ. ನಾಗೇಶ್, ಕರ್ನಾಟಕ ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷರಾಗಿದ್ದ ಅರ್ಜಿದಾರರಿಗೆ ಟೆಂಡರ್ ಕರೆಯುವ ಅಧಿಕಾರವಿಲ್ಲ. ಅಧಿಕಾರಿಗಳಿಗೆ ಹಣ ಸಿಕ್ಕಿದೆ ಎನ್ನಲಾದ ಸ್ಥಳವು ಶಾಸಕರಿಗೆ ಸೇರಿಲ್ಲ. ಸುಪ್ರೀಂಕೋರ್ಟ್ ಆದೇಶದ ಪ್ರಕಾರವೂ ಬಂಧನವಾಗಿಲ್ಲ. ಈಗಾಗಲೇ ಲೋಕಾಯುಕ್ತ ತನಿಖಾಧಿಕಾರಿಗಳು ತನಿಖೆ ಮುಕ್ತಾಯಗೊಳಿಸಿದ್ದಾರೆ. ಹೀಗಾಗಿ ಮಾಡಾಳ್ ಅವರಿಗೆ ಜಾಮೀನು ನೀಡಬೇಕು ಎಂದು ಮನವಿ ಮಾಡಿಕೊಂಡರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಶೇಷ ಅಭಿಯೋಜಕ ಸಂತೋಷ್ ನಾಗರಾಳೆ, ದಾಳಿ ವೇಳೆ ಹಣ ಸಿಕ್ಕಿರುವ ಮನೆಗೆ ವಿರೂಪಾಕ್ಷಪ್ಪ ಮಾಡಾಳ್ ಅವರೇ ಮಾಲೀಕರಾಗಿದ್ದಾರೆ. ಹಣ ದೊರೆತ ಕೊಠಡಿಯಲ್ಲಿ ತಂಗುತ್ತಿದ್ದರು ಎಂದು ಪ್ರಶಾಂತ್ ಮಾಡಾಳ್ ಪತ್ನಿ ಹೇಳಿಕೆ ನೀಡಿದ್ದಾರೆ. ಸುಪ್ರೀಂಕೋರ್ಟ್ ನಿಯಮಾವಳಿ ಪ್ರಕಾರವೇ ಆರೋಪಿತನನ್ನು ಬಂಧಿಸಲಾಗಿದೆ. ತನಿಖೆ ಪ್ರಗತಿ ಹಂತದಲ್ಲಿದೆ. ಈ ಹಂತದಲ್ಲಿ ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಜಾಮೀನು ಅರ್ಜಿಯನ್ನು ತಿರಸ್ಕರಿಸಬೇಕು ಎಂದು ವಾದ ಮಂಡಿಸಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಲಯವು ಏಪ್ರಿಲ್ 15ಕ್ಕೆ ಆದೇಶ ಕಾಯ್ದಿರಿಸಿತ್ತು.
ಓದಿ: ಮಾಡಾಳ್ ಜಾಮೀನು ಅರ್ಜಿ: ಏಪ್ರಿಲ್ 15ಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಾಲಯ