ಚಂದ್ರಯಾನ-3 ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಚಂದ್ರನ ಕಕ್ಷೆಯನ್ನು ಪ್ರವೇಶಿಸಿದೆ. ಎಲ್ಲವೂ ಅಂದುಕೊಂಡ ರೀತಿಯಲ್ಲೇ ಮುಂದುವರಿದರೆ, ಚಂದ್ರಯಾನ-3 ಆಗಸ್ಟ್ 24 ಮತ್ತು 24ರ ನಡುವೆ ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಇಳಿಯಲಿದೆ. ಜುಲೈ 14ರಂದು ಉಡಾವಣೆಗೊಂಡ ಬಳಿಕ, ಇಸ್ರೋ ಬಾಹ್ಯಾಕಾಶ ನೌಕೆಯನ್ನು ಭೂಮಿಯಿಂದ ದೂರಕ್ಕೆ, ಬೇರೆ ಬೇರೆ ಕಕ್ಷೆಗಳಿಗೆ ಬದಲಿಸುತ್ತಾ ಬಂದಿದೆ. ಈ ಕುರಿತು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ ಗಿರೀಶ್ ಲಿಂಗಣ್ಣ ಅವರು ನೀಡಿರುವ ವಿವರಣೆ ಹೀಗಿದೆ..
ಭಾನುವಾರ ರಾತ್ರಿ ಚಂದ್ರಯಾನ-3ರ ಕಕ್ಷೆಯನ್ನು ಯಶಸ್ವಿಯಾಗಿ ಎತ್ತರಿಸಿದ ಬಳಿಕ ಇಸ್ರೋ ತನ್ನ ಮುಂದಿನ ಹೆಜ್ಜೆಯೆಂದರೆ ಆಗಸ್ಟ್ 9ರಂದು ಅದರ ಕಕ್ಷೆಯನ್ನು ಇಳಿಸುವುದು ಎಂದಿದೆ. ಕಕ್ಷೆಯನ್ನು ಇಳಿಸುವುದೆಂದರೆ, ಇಸ್ರೋ ಚಂದ್ರಯಾನ-3ರ ಪಥದಲ್ಲಿ ಇನ್ನಷ್ಟು ಹೊಂದಾಣಿಕೆ ಮಾಡಿ, ಚಂದ್ರನ ಮೇಲೆ ಇಳಿಯುವ ಸಲುವಾಗಿ ಅದನ್ನು ಚಂದ್ರನಿಗೆ ಇನ್ನಷ್ಟು ಸನಿಹಕ್ಕೆ ಒಯ್ಯಲಿದೆ. ಇದು ಒಂದು ರೀತಿ ಗುರಿಯ ಸನಿಹಕ್ಕೆ ಒಯ್ಯುವ ಸಲುವಾಗಿ ಒಂದು ಕಾರಿನ ಪಥವನ್ನು ಸರಿಹೊಂದಿಸುವಂತಿರುತ್ತದೆ.
ಇಸ್ರೋ ಟ್ವೀಟ್ ಮೂಲಕ ನೀಡಿರುವ ಮಾಹಿತಿಯ ಪ್ರಕಾರ, ಚಂದ್ರಯಾನ-3 ಬಾಹ್ಯಾಕಾಶ ನೌಕೆ ಇಂಜಿನ್ ಅನ್ನು ವಿರುದ್ಧ ದಿಕ್ಕಿನಲ್ಲಿ ಉರಿಸುವ ಮೂಲಕ ತಾನು ಈ ಮೊದಲು ಅಂದುಕೊಂಡ ನಡೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ಚಂದ್ರನ ಮೇಲ್ಮೈಗೆ ಇನ್ನಷ್ಟು ಸನಿಹಕ್ಕೆ ತೆರಳಿದೆ. ಈಗ ಚಂದ್ರಯಾನ-3 ಚಂದ್ರನ ಮೇಲ್ಮೈಯಿಂದ ಅಂದಾಜು 170 ಕಿಲೋಮೀಟರ್ (105 ಮೈಲಿ) ಎತ್ತರದಲ್ಲಿದೆ. ಚಂದ್ರನ ಸುತ್ತಲಿನ ಅದರ ಪಥ 4,313 ಕಿಲೋಮೀಟರ್ (2,682 ಮೈಲಿ) ವಿಸ್ತಾರ ಹೊಂದಿದೆ. ಇದು ಒಂದು ರೀತಿ ಭೂಮಿಯಿಂದ ಒಂದಷ್ಟು ನಿರ್ದಿಷ್ಟ ಎತ್ತರದಲ್ಲಿ, ಚಂದ್ರನ ಸುತ್ತಲೂ ವೃತ್ತಾಕಾರದ ಪಥದಲ್ಲಿ ಸಂಚರಿಸುತ್ತಾ, ಈ ಚಲನೆಯಲ್ಲಿ ಸುದೀರ್ಘ ವ್ಯಾಪ್ತಿಯನ್ನು ಹೊಂದಿರುವಂತೆ ತೋರುತ್ತದೆ.
ಮುಂದಿನ ಯೋಜನೆಯಾಗಿ, ಬಾಹ್ಯಾಕಾಶ ನೌಕೆಯನ್ನು ಚಂದ್ರನ ಮೇಲ್ಮೈಗೆ ಇನ್ನಷ್ಟು ಹತ್ತಿರ ತರುವ ಕಾರ್ಯವನ್ನು ಆಗಸ್ಟ್ 9 ರಂದು, ಭಾರತೀಯ ಕಾಲಮಾನದಂತೆ ಮಧ್ಯಾಹ್ನ 1:00 ಮತ್ತು 2:00ರ ನಡುವೆ ನೆರವೇರಿಸಲು ಉದ್ದೇಶಿಸಲಾಗಿದೆ. ಈ ಮೊದಲಿನ ರೀತಿಯಲ್ಲಿಯೇ, ಬಾಹ್ಯಾಕಾಶ ನೌಕೆಯ ಪಥವನ್ನು ಹೊಂದಿಸಲು, ಅದನ್ನು ಚಂದ್ರನಿಗೆ ಇನ್ನಷ್ಟು ಸನಿಹ ಒಯ್ಯಲು ಇನ್ನೊಂದು ಚಲನೆಯನ್ನು ನಡೆಸಲಾಗುತ್ತದೆ. ಇದು ಒಂದು ರೀತಿ ಬಾಹ್ಯಾಕಾಶ ನೌಕೆಯ ಸ್ಥಾನವನ್ನು ಕೊಂಚ ಸರಿಪಡಿಸಿ, ಚಂದ್ರನ ಮೇಲ್ಮೈಗೆ ಆ ಸಮಯಕ್ಕೆ ಸರಿಯಾಗಿ ಇನ್ನಷ್ಟು ಸನಿಹ ಕೊಂಡೊಯ್ಯುವ ಪ್ರಕ್ರಿಯೆಯಾಗಿದೆ ಎಂದು ಇಸ್ರೋದ ಟ್ವೀಟ್ ವಿವರಿಸಿದೆ.
ಚಂದ್ರಯಾನ-3 ಸೆರೆಹಿಡಿದ ಚಂದ್ರನ ವಿಸ್ಮಯಕಾರಿ ವಿಡಿಯೋ ಬಿಡುಗಡೆಗೊಳಿಸಿದ ಇಸ್ರೋ : ಚಂದ್ರಯಾನ-3 ಚಂದ್ರನ ಕಕ್ಷೆಯನ್ನು ತಲುಪಿದ ಒಂದು ದಿನದ ಬಳಿಕ, ಇಸ್ರೋ ಚಂದ್ರಯಾನ-3 ಸೆರೆಹಿಡಿದಿರುವ ಚಂದ್ರನ ವೀಡಿಯೋವನ್ನು ಬಿಡುಗಡೆಗೊಳಿಸಿದೆ. ಇಸ್ರೋ ಈ ವಿಡಿಯೋಗೆ 'ಚಂದ್ರಯಾನ-3 ಯೋಜನೆ: ಲೂನಾರ್ ಆರ್ಬಿಟ್ ಇನ್‌ಸರ್ಷನ್ ಪ್ರಕ್ರಿಯೆಯ ವೇಳೆಯಲ್ಲಿ ಚಂದ್ರ ಕಾಣಿಸಿದ ರೀತಿ' ಎಂಬ ತಲೆಬರಹ ನೀಡಿ ಪ್ರಕಟಿಸಿದೆ. ಈ ವೀಡಿಯೋ ಚಂದ್ರನನ್ನು ನೀಲಿ ಮಿಶ್ರಿತ ಹಸಿರು ಬಣ್ಣದಲ್ಲಿರುವಂತೆ ತೋರಿಸಿದ್ದು, ಚಂದ್ರನ ಮೇಲ್ಮೈಯ ಅಸಂಖ್ಯಾತ ಕುಳಿಗಳೂ ಕಾಣಿಸಿವೆ. ಭಾನುವಾರ ರಾತ್ರಿಯ ಇನ್ನೊಂದು ಮಹತ್ವದ ಕುಶಲ ಚಲನೆಗೆ ಕೆಲವು ಗಂಟೆಗಳ ಮೊದಲು ಈ ವಿಡಿಯೋವನ್ನು ಬಿಡುಗಡೆಗೊಳಿಸಲಾಗಿದೆ.
ಚಂದ್ರಯಾನ-3 ಯೋಜನೆ: ಚಂದ್ರ ಅನ್ವೇಷಣಾ ಯೋಜನೆಯ ಹಂತಗಳು : ಭಾರತದ ಮೂರನೇ ಮಾನವ ರಹಿತ ಚಂದ್ರ ಅನ್ವೇಷಣಾ ಯೋಜನೆಯಾದ ಚಂದ್ರಯಾನ-3 ಚಂದ್ರನ ಕಕ್ಷೆಯನ್ನು ಭಾನುವಾರ ಯಶಸ್ವಿಯಾಗಿ ಪ್ರವೇಶಿಸಿದೆ. ಇದು ಆಗಸ್ಟ್ 23-24ರಂದು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ನಡೆಸುವ ನಿರೀಕ್ಷೆಗಳಿವೆ.
- ಜುಲೈ 14ರಂದು, ಎಲ್‌ವಿಎಂ3 ಎಂ4 ಉಡಾವಣಾ ವಾಹನ ಚಂದ್ರಯಾನ-3ರನ್ನು ಯಶಸ್ವಿಯಾಗಿ ಅದರ ಕಕ್ಷೆಗೆ ಉಡಾವಣೆಗೊಳಿಸಿತು.
- ಜುಲೈ 15ರಂದು, ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಮೊದಲ ಕಕ್ಷೆ ಎತ್ತರಿಸುವಿಕೆ ನಡೆಸಲಾಯಿತು. ಇದನ್ನು 'ಅರ್ತ್‌ಬೌಂಡ್ ಫೈರಿಂಗ್ - 1' ಎಂದು ಕರೆಯಲಾಗಿದ್ದು, ಬೆಂಗಳೂರಿನ ಇಸ್ರೋ ಘಟಕದಲ್ಲಿ ನೆರವೇರಿಸಲಾಯಿತು. ಇದರಲ್ಲಿ ಬಾಹ್ಯಾಕಾಶ ನೌಕೆಯ ಇಂಜಿನ್‌ಗಳನ್ನು ಉರಿಸಿ, ಅದು ಭೂಮಿಯಿಂದ ಇನ್ನಷ್ಟು ಎತ್ತರಕ್ಕೆ ಚಲಿಸುವಂತೆ ಮಾಡಲಾಯಿತು. ಈ ನಡೆಯ ಬಳಿಕ, ಚಂದ್ರಯಾನ-3 ಭೂಮಿಯಿಂದ ಗರಿಷ್ಠ 41,762 ಕಿಲೋಮೀಟರ್ ದೂರ ಮತ್ತು ಕನಿಷ್ಠ 173 ಕಿಲೋಮೀಟರ್ ದೂರ ಹೊಂದಿತ್ತು. ಇದು ಬಾಹ್ಯಾಕಾಶ ನೌಕೆಗೆ ಭೂಮಿಯ ಸುತ್ತಲೂ ಸಮರ್ಪಕವಾದ ಪಥದಲ್ಲಿರಲು ನೆರವಾಯಿತು.
- ಜುಲೈ 17ರಂದು, ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಎರಡನೇ ಕಕ್ಷೆ ಎತ್ತರಿಸುವ ಪ್ರಕ್ರಿಯೆ ನಡೆಸಲಾಯಿತು. ಈ ಸಂದರ್ಭದಲ್ಲಿ ಬಾಹ್ಯಾಕಾಶ ನೌಕೆಯ ಸ್ಥಾನ ಭೂಮಿಗಿಂತ ಗರಿಷ್ಠ ದೂರದ ಬಿಂದುವಿನಲ್ಲಿ 41,603 ಕಿಲೋಮೀಟರ್ ಮತ್ತು ಕನಿಷ್ಠ ದೂರದ ಬಿಂದು 226 ಕಿಲೋಮೀಟರ್ ಆಗಿತ್ತು.
- ಜುಲೈ 22ರಂದು, ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ನಾಲ್ಕನೇ ಕಕ್ಷೆ ಎತ್ತರಿಸುವಿಕೆ ನೆರವೇರಿತು. ಇದನ್ನು 'ಅರ್ತ್ ಬೌಂಡ್ ಪೆರಿಜೀ ಫೈರಿಂಗ್' ಎಂದು ಕರೆಯಲಾಯಿತು. ಈ ಹಂತದಲ್ಲಿ, ಬಾಹ್ಯಾಕಾಶ ನೌಕೆಯ ಭೂಮಿಯಿಂದ ಗರಿಷ್ಠ ದೂರದ ಬಿಂದು 71,351 ಕಿಲೋಮೀಟರ್ ದೂರದಲ್ಲಿದ್ದರೆ, ಕನಿಷ್ಠ ಬಿಂದು 223 ಕಿಲೋಮೀಟರ್ ದೂರದಲ್ಲಿತ್ತು. ಈ ಹೆಜ್ಜೆಯಲ್ಲಿ, ಬಾಹ್ಯಾಕಾಶ ನೌಕೆ ಭೂಮಿಗೆ ಅತ್ಯಂತ ಸನಿಹದ ಬಿಂದುವಿನಲ್ಲಿದ್ದಾಗ ಅದರ ಇಂಜಿನ್‌ಗಳನ್ನು ಉರಿಸಲಾಯಿತು. ಇದನ್ನು 'ಪೆರಿಜೀ' ಎಂದು ಕರೆಯಲಾಗುತ್ತದೆ. ಈ ಉರಿಯುವಿಕೆಯನ್ನು ಪೆರಿಜೀ ಬಿಂದುವಿನಲ್ಲಿ ನಡೆಸುವುದರಿಂದ, ಬಾಹ್ಯಾಕಾಶ ನೌಕೆ ಭೂಮಿಯ ಗುರುತ್ವಾಕರ್ಷಣಾ ಬಲದ ಸಹಾಯ ಪಡೆದು, ಅದು ಹೆಚ್ಚಿನ ವೇಗ ಪಡೆದು, ತನ್ನ ಕಕ್ಷೆಯನ್ನು ಸುಲಭವಾಗಿ ಎತ್ತರಿಸಲು ಸಾಧ್ಯವಾಯಿತು. ಇದರಿಂದ ಬಾಹ್ಯಾಕಾಶ ನೌಕೆ ತನ್ನ ಅವಶ್ಯಕ ಪಥವನ್ನು ಹೊಂದಿ, ಚಂದ್ರನನ್ನು ಸುಲಭವಾಗಿ ಮತ್ತು ನಿಖರವಾಗಿ ತಲುಪಲು ಸಾಧ್ಯವಾಗುತ್ತದೆ.
- ಜುಲೈ 25ರಂದು ಇನ್ನೊಂದು ಕಕ್ಷೆ ಎತ್ತರಿಸುವ ಪ್ರಕ್ರಿಯೆ ನೆರವೇರಿಸಲಾಯಿತು.
- ಆಗಸ್ಟ್ 1ರಂದು, ಚಂದ್ರಯಾನ-3ನ್ನು ಟ್ರಾನ್ಸ್ ಲೂನಾರ್ ಕಕ್ಷೆಯಲ್ಲಿ ಅಳವಡಿಸಲಾಯಿತು. ಈ ಸಮಯದಲ್ಲಿ, ಅದರ ಕಕ್ಷೆ ಭೂಮಿಗೆ ಸನಿಹದ ಬಿಂದುವಿನಲ್ಲಿ 288 ಕಿಲೋಮೀಟರ್ ದೂರ ಮತ್ತು ದೂರದ ಬಿಂದುವಿನಲ್ಲಿ ಅತ್ಯುತ್ತಮವಾದ 3,69,328 ಕಿಲೋಮೀಟರ್ ದೂರದಲ್ಲಿತ್ತು.
ವಿವರಣೆ : ನಾವು ಚಂದ್ರಯಾನ-3ನ್ನು ಟ್ರಾನ್ಸ್ ಲೂನಾರ್ ಕಕ್ಷೆಯಲ್ಲಿ ಜೋಡಿಸಲಾಯಿತು ಎನ್ನುವಾಗ, ಅದನ್ನು ಚಂದ್ರನ ಕಡೆಗೆ ಕೊಂಡೊಯ್ಯುವ ಪಥದಲ್ಲಿ ಜಾಗರೂಕವಾಗಿ ಅಳವಡಿಸಲಾಗಿದೆ ಎಂದರ್ಥ. ಇದೊಂದು ಅತ್ಯಂತ ಮಹತ್ವದ ಮೈಲಿಗಲ್ಲಾಗಿದ್ದು, ಚಂದ್ರಯಾನ-3ಕ್ಕೆ ಭೂಮಿಯಿಂದ ಚಂದ್ರನೆಡೆಗೆ ಸಾಗಲು ಟ್ರಾನ್ಸ್ ಲೂನಾರ್ ಕಕ್ಷೆ ಅತ್ಯವಶ್ಯಕವಾಗಿದೆ. ಈ ಕಕ್ಷೆಯನ್ನು ತಲುಪುವ ಮೂಲಕ, ಬಾಹ್ಯಾಕಾಶ ನೌಕೆ ಚಂದ್ರನೆಡೆಗಿನ ತನ್ನ ಪಯಣವನ್ನು ಆರಂಭಿಸಿ, ಯೋಜನೆಯ ಮುಂದಿನ ಹಂತಗಳಿಗೆ ಸಿದ್ಧತೆ ನಡೆಸಬಹುದು. ಇದರಲ್ಲಿ ಚಂದ್ರನ ಮೇಲ್ಮೈಗೆ ಅತ್ಯಂತ ಸನಿಹಕ್ಕೆ ತೆರಳುವುದು ಮತ್ತು ಕ್ರಮೇಣ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ನಡೆಸುವುದೂ ಸೇರಿವೆ. ಟ್ರಾನ್ಸ್ ಲೂನಾರ್ ಕಕ್ಷೆಯಲ್ಲಿ ಯಶಸ್ವಿಯಾಗಿ ಜೋಡಿಸಿರುವುದು ಚಂದ್ರನನ್ನು ಅನ್ವೇಷಿಸುವ ಯೋಜನೆಯ ಗುರಿ ಸಾಧನೆಯೆಡೆಗೆ ಇನ್ನೊಂದು ಮಹತ್ವದ ಹೆಜ್ಜೆಯಾಗಿದೆ.
- ಆಗಸ್ಟ್ 5ರಂದು, ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಕಕ್ಷೆಯನ್ನು ಪ್ರವೇಶಿಸಿತು. ಈ ಕಕ್ಷೆ ಚಂದ್ರನ ಅತ್ಯಂತ ಸನಿಹದ ಬಿಂದುವಿನಲ್ಲಿ 164 ಕಿಲೋಮೀಟರ್ ದೂರದಲ್ಲಿದ್ದರೆ, ಅತ್ಯಂತ ದೂರದ ಬಿಂದುವಿನಲ್ಲಿ 18,074 ಕಿಲೋಮೀಟರ್ ದೂರದಲ್ಲಿದೆ. ಯೋಜನೆ ಉದ್ದೇಶಿಸಿದ ರೀತಿಯಲ್ಲೇ ಈ ಕಕ್ಷೆಯನ್ನು ಪ್ರವೇಶಿಸಿದೆ.
ವಿವರಣೆ : ಚಂದ್ರಯಾನ-3 ಚಂದ್ರನ ಕಕ್ಷೆಗೆ ಪ್ರವೇಶಿಸಿದೆ ಎಂದರೆ, ಬಾಹ್ಯಾಕಾಶ ನೌಕೆ ಈಗ ಚಂದ್ರನ ಸುತ್ತಲೂ ಸುತ್ತುತ್ತಿದೆ ಎಂದರ್ಥ. ಈ ರೀತಿ ಚಂದ್ರಯಾನ-3 ಇರುವ ಕಕ್ಷೆ ಅದು ಚಂದ್ರನ ಮೇಲ್ಮೈಗೆ ಅತ್ಯಂತ ಸನಿಹ ಮತ್ತು ದೂರದ ಬಿಂದುಗಳಲ್ಲಿ ಎಷ್ಟು ದೂರದಲ್ಲಿದೆ ಎಂದು ತಿಳಿಸುತ್ತದೆ.
ಲೂನಾರ್ ಆರ್ಬಿಟ್ ಇನ್‌ಸರ್ಷನ್ (ಚಂದ್ರನ ಕಕ್ಷೆಗೆ ಜೋಡಿಸುವಿಕೆ) ಎನ್ನುವುದು ಅತ್ಯಂತ ಚಂದ್ರಯಾನ-3ರ ಪಾಲಿಗೆ ಅತ್ಯಂತ ಮಹತ್ವದ ನಡೆಗಳಲ್ಲಿ ಒಂದಾಗಿದೆ. ಇದು ಬಾಹ್ಯಾಕಾಶ ನೌಕೆಗೆ ಚಂದ್ರನ ಸುತ್ತಲೂ ಚಲಿಸಲು ಅವಕಾಶ ಹೊಂದಿ, ಮುಂದಿನ ಹಂತಗಳಿಗೆ ಸರಿಯಾದ ಸ್ಥಾನ ಹೊಂದಲು, ವೈಜ್ಞಾನಿಕ ಅನ್ವೇಷಣೆಗಳನ್ನು ನಡೆಸಲು, ಚಂದ್ರನ ಮೇಲ್ಮೈ ಮ್ಯಾಪಿಂಗ್ ನಡೆಸಲು, ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ನಡೆಸುವ ಪ್ರಯತ್ನ ಮಾಡಲು ಪೂರಕವಾಗಿದೆ. ಇದನ್ನು ಯಶಸ್ವಿಯಾಗಿ ನೆರವೇರಿಸಲು ಸಾಕಷ್ಟು ಲೆಕ್ಕಾಚಾರಗಳ ಅಗತ್ಯವಿದ್ದು, ನಿಖರವಾದ ಸಮಯದಲ್ಲಿ ನಡೆಸಿ, ಬಾಹ್ಯಾಕಾಶ ನೌಕೆಯನ್ನು ಚಂದ್ರನ ಗುರುತ್ವಾಕರ್ಷಣಾ ಬಲ ಹಿಡಿದಿಟ್ಟು, ಚಂದ್ರನ ಸರಿಯಾದ ಕಕ್ಷೆಗೆ ಸೇರಿಸುವಂತೆ ಮಾಡಲಾಗುತ್ತದೆ. ಚಂದ್ರನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು, ತನ್ನ ಗುರಿಗಳನ್ನು ಸಾಧಿಸಲು ಚಂದ್ರಯಾನ-3 ಚಂದ್ರನ ಕಕ್ಷೆಯನ್ನು ಪ್ರವೇಶಿಸುವುದು ಅತ್ಯವಶ್ಯಕವಾಗಿದೆ.
ಲೂನಾರ್ ಆರ್ಬಿಟ್ ಇನ್‌ಸರ್ಷನ್ ನಂತರದ ಹಂತಗಳೇನು? : ಆಗಸ್ಟ್ 6, ಭಾನುವಾರ ರಾತ್ರಿ 11 ಗಂಟೆಯ ವೇಳೆಗೆ ಚಂದ್ರಯಾನ-3 ಇನ್ನೊಂದು ಮಹತ್ವದ ಚಲನೆಯನ್ನು ಕೈಗೊಂಡಿತು. ಅದಾದ ಬಳಿಕ, ಆಗಸ್ಟ್ 17ರ ತನಕ ಇನ್ನೂ ಮೂರು ಮಹತ್ವದ ಹೆಜ್ಜೆಗಳನ್ನು ಚಂದ್ರಯಾನ-3 ಕೈಗೊಳ್ಳಲಿದೆ. ಅದಾದ ಬಳಿಕ, ರೋವರ್ ಪ್ರಗ್ಯಾನ್ ಅನ್ನು ಒಳಗಡೆ ಇಟ್ಟುಕೊಂಡಿರುವ ವಿಕ್ರಮ್ ಲ್ಯಾಂಡಿಂಗ್ ಮಾಡ್ಯುಲ್ ಪ್ರೊಪಲ್ಷನ್ ಮಾಡ್ಯುಲ್‌ನಿಂದ ಬಿಡುಗಡೆಯಾಗಲಿದೆ. ಲ್ಯಾಂಡರ್ ಕಕ್ಷೆ ಕಡಿತದ ಹೆಜ್ಜೆಗಳಿಗೆ ಒಳಗಾಗಿ, ಅಂತಿಮವಾಗಿ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿಯಲಿದೆ. ಇದು ಆಗಸ್ಟ್ 23 ಅಥವಾ 24ರಂದು ನೆರವೇರುವ ನಿರೀಕ್ಷೆಗಳಿವೆ.
ಆಗಸ್ಟ್ 1ರಂದು ಮಹತ್ವದ ಮೈಲಿಗಲ್ಲು ಸೃಷ್ಟಿಸಿದ ಇಸ್ರೋ : ಆಗಸ್ಟ್ 1ರಂದು, ಇಸ್ರೋ ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಮೂಲಕ ಸ್ಲಿಂಗ್ ಶಾಟ್ ಮನೂವರ್ ನಡೆಸಿ, ಮಹತ್ತರ ಸಾಧನೆ ನಿರ್ಮಿಸಿತು. ಸ್ಲಿಂಗ್ ಶಾಟ್ ನಡೆ ಬಾಹ್ಯಾಕಾಶ ನೌಕೆಯನ್ನು ಭೂಮಿಯ ಕಕ್ಷೆಯಿಂದ ಯಶಸ್ವಿಯಾಗಿ ಚಂದ್ರನ ಕಡೆ ಚಲಿಸುವಂತೆ ಮಾಡಿತು. ಈ ಹೆಜ್ಜೆಯ ಬಳಿಕ, ಚಂದ್ರಯಾನ-3 ಭೂಮಿಯ ಕಕ್ಷೆಯನ್ನು ಬಿಟ್ಟು, ಚಂದ್ರನ ಕಡೆಗೆ ತನ್ನ ಪ್ರಯಾಣ ಆರಂಭಿಸಿತು. ಸರಳವಾಗಿ ಹೇಳುವುದಾದರೆ, ಸ್ಲಿಂಗ್ ಶಾಟ್ ಮನೂವರ್ ಎಂದರೆ ಹೆಚ್ಚಿನ ವೇಗ ಪಡೆದು, ಇನ್ನಷ್ಟು ಎತ್ತರದ ಸ್ಥಾನಕ್ಕೆ ಜಿಗಿಯಲು ಒಂದು ಉಯ್ಯಾಲೆಯ ಸಹಾಯ ಪಡೆಯುವ ರೀತಿಯಲ್ಲಿ ಕಾರ್ಯಾಚರಿಸುತ್ತದೆ. ಇದು ಬಾಹ್ಯಾಕಾಶ ನೌಕೆಗೆ ಹೆಚ್ಚಿನ ವೇಗ ಸಂಪಾದಿಸಿ, ತನ್ನ ಗುರಿಯೆಡೆಗೆ ಚಲಿಸಲು ನೆರವಾಗಿದೆ.
ಇಸ್ರೋ ಗ್ರ್ಯಾವಿಟಿ ಅಸಿಸ್ಟ್ ಅಥವಾ ಸ್ವಿಂಗ್ ಬೈ ಎಂದೂ ಕರೆಯಲ್ಪಡುವ ಸ್ಲಿಂಗ್ ಶಾಟ್ ಮನೂವರ್ ನಡೆಸಿ, ಬಾಹ್ಯಾಕಾಶ ನೌಕೆಯ ವೇಗವನ್ನು ಹೆಚ್ಚಿಸಿ, ಅದರ ಪಥವನ್ನು ಇನ್ನಷ್ಟು ಸಮರ್ಥವಾಗಿ ಬದಲಾಯಿಸಿತು. ಯಾವುದಾದರೂ ಆಕಾಶಕಾಯದ, ಸಾಮಾನ್ಯವಾಗಿ ಗ್ರಹದ (ಭೂಮಿ) ಗುರುತ್ವಾಕರ್ಷಣೆಯನ್ನು ಬಳಸಿ, ಬಾಹ್ಯಾಕಾಶ ನೌಕೆ ಹೆಚ್ಚಿನ ಇಂಧನವನ್ನು ದಹಿಸದೆಯೇ ವೇಗವನ್ನು ಗಳಿಸಬಲ್ಲದು. ಇದು ಇಂಧನ ಉಳಿಸಲು ಮತ್ತು ಬಾಹ್ಯಾಕಾಶ ನೌಕೆ ತನ್ನ ಗುರಿಯಾದ ಚಂದ್ರನನ್ನು ಕಡಿಮೆ ಇಂಧನದಲ್ಲಿ ತಲುಪಲು ನೆರವಾಗುತ್ತದೆ. ಸ್ಲಿಂಗ್ ಶಾಟ್ ಮನೂವರ್ ಆಕಾಶಕಾಯಗಳ ಗುರುತ್ವಾಕರ್ಷಣಾ ಬಲವನ್ನು ಬಳಸಿಕೊಂಡು, ಬಾಹ್ಯಾಕಾಶ ನೌಕೆಯನ್ನು ಅದರ ಉದ್ದೇಶಿತ ಪಥದಲ್ಲಿ ಜೋಡಿಸುವ ಸಲುವಾಗಿ ಕಡಿಮೆ ವೆಚ್ಚದಾಯಕ ಮಾರ್ಗವಾಗಿದೆ.
- ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ