ದೊಡ್ಡಬಳ್ಳಾಪುರ : ಚಂದ್ರಶೇಖರ್ ಆಜಾದ್ ಹುಟ್ಟುಹಬ್ಬದ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಘಟಕ ರಕ್ತದಾನ ಶಿಬಿರ ಆಯೋಜನೆ ಮಾಡಿದೆ. ಇದಕ್ಕೆ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಚಾಲನೆ ನೀಡಿದರು.
ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ಬಳಿಕ ಬಿಜೆಪಿ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ನಾಯಕತ್ವ ಬದಲಾವಣೆ ನಮ್ಮಲ್ಲಿಲ್ಲ, ಯುಡಿಯೂರಪ್ಪ ಅವರೇ ಮುಂದಿನ ಮೂರು ವರ್ಷಗಳವರೆಗೂ ಮುಖ್ಯಮಂತ್ರಿಗಳಾಗಿ ಇರ್ತಾರೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ. ಬದಲಾವಣೆ ಅನ್ನೋದು ಕೇವಲ ಊಹಾಪೋಹಗಳಷ್ಟೇ ಎಂದರು.
ಸಂಪುಟ ವಿಸ್ತರಣೆ ಮತ್ತು ಪುನಾರಚನೆ ಮಾಡುವುದು ರಾಷ್ಟ್ರೀಯ ಕಾಂಗ್ರೆಸ್ ಮುಖಂಡರು ರಾಜ್ಯದ ಮುಖಂಡರು ಅದನ್ನು ತೀರ್ಮಾನ ಮಾಡ್ತಾರೆ ಅಂತಾ ಬಾಯಿತಪ್ಪಿ ಹೇಳಿದರು.
ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರುವ ಬಗ್ಗೆ ರಮೇಶ್ ಕುಮಾರ್ ಸ್ವಾಗತಿಸದ ಬಗ್ಗೆ ಮಾತನಾಡಿದ ಎಂಟಿಬಿ, ಯಾವುದೇ ಪಕ್ಷಕ್ಕೆ ಹೋಗಲಿ, ಜೆಡಿಎಸ್ ಆಯ್ತು, ಬಿಜೆಪಿ ಆಯ್ತು, ಪಕ್ಷೇತರ ಆಯ್ತು, ಈಗ ಕಾಂಗ್ರೆಸ್ ಪಕ್ಷಕ್ಕೆ ಅರ್ಜಿ ಹಾಕಿದ್ದಾರೆ. ಒಂದೊಂದು ಚುನಾವಣೆಯಲ್ಲಿ ಒಂದೊಂದು ಪಕ್ಷ ಬದಲಾಯಿಸ್ತಾರೆ ಎಂದರು.
40 ವರ್ಷ ಒಂದೇ ಪಕ್ಷದಲ್ಲಿ ಇದ್ದವನು ನಾನು, ಅಧಿಕಾರಕ್ಕಾಗಿ ಪಕ್ಷ ಬಿಟ್ಟು ಹೋದವನಲ್ಲ. ಸಾರ್ವಜನಿಕ ಸೇವೆ ಮಾಡ್ಬೇಕು, ತಾಲೂಕಿನ ಅಭಿವೃದ್ಧಿ ಮಾಡ್ಬೇಕು, ಪಕ್ಷ ಕಟ್ಟಿ ಬೆಳೆಸಬೇಕು, ಕಾರ್ಯಕರ್ತರಿಗೆ ಶಕ್ತಿ ತುಂಬುವ ಮೂಲಕ ಪಕ್ಷ ಗಟ್ಟಿಗೊಳಿಸುವ ಉದ್ದೇಶ ನನ್ನದು ಎಂದರು.