ಬೆಂಗಳೂರು : ಕೆಟ್ಟು ನಿಂತಿದ್ದ ಬೈಕ್ ರಿಪೇರಿ ಮಾಡಿಸಲು ಮೆಕ್ಯಾನಿಕ್ ಕರೆ ತರುವಷ್ಟರಲ್ಲಿ ಬೈಕ್ ಕಳ್ಳತನ ಮಾಡಿದ್ದ ಆರೋಪಿಯನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಸಯ್ಯದ್ ಮಜರ್ ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ 5.5 ಲಕ್ಷ ರೂ. ಮೌಲ್ಯದ 5 ಬೈಕ್ ಹಾಗೂ ಒಂದು ಆಟೋವನ್ನು ವಶಕ್ಕೆ ಪಡೆಯಲಾಗಿದೆ.
ಜನವರಿ 4ರಂದು ಚಂದ್ರಾಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದಾಗ ವ್ಯಕ್ತಿಯೋರ್ವರ ಬೈಕ್ ಹಾಳಾಗಿತ್ತು. ಹೀಗಾಗಿ, ಬೈಕ್ ಅನ್ನು ರಸ್ತೆ ಪಕ್ಕದಲ್ಲೇ ನಿಲ್ಲಿಸಿ ಮನೆಗೆ ಹೋಗಿ ಮಾರನೆ ದಿನ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿತ್ತು.
ಈ ಕುರಿತಂತೆ ದೂರು ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಬ್ಯಾಟರಾಯನಪುರ, ಕೆಂಗೇರಿ, ಹೊಸಕೋಟೆ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.
ಮನೆ ಕಳ್ಳತನ ಮಾಡ್ತಿದ್ದ ಮೂವರು ಖದೀಮರು ಅಂದರ್ : ನಗರದಲ್ಲಿ ಗಲ್ಲಿ ಗಲ್ಲಿ ಸುತ್ತಾಡಿ ಯಾರು ಇಲ್ಲದಂತಹ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿ, 4.5 ಲಕ್ಷ ಮೌಲ್ಯದ 100 ಗ್ರಾಂ ಚಿನ್ನದ ಸರವನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಆನಂದ್, ಮೊಹಮದ್ ಅಜರ್, ಕ್ಯಾನಿಲಾಲ್ ಎಂಬುವರು ಬಂಧಿತ ಆರೋಪಿಗಳು. ಕಳೆದ ಕೆಲ ದಿನಗಳ ಹಿಂದೆ ಮನೆಯೊಂದರಲ್ಲಿ ವ್ಯಕ್ತಿಯೋರ್ವರು ಚಿನ್ನದ ಸರವನ್ನು ಮನೆಯ ಕಿಟಕಿ ಬಳಿಯ ಟೇಬಲ್ ಮೇಲೆ ಇಟ್ಟು ವಾಯುವಿಹಾರಕ್ಕೆ ಹೋಗಿದ್ದರು.
ಇದೇ ವೇಳೆ ಆರೋಪಿಗಳು ಚಿನ್ನದ ಸರ ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಂಡ ಇನ್ಸ್ಪೆಕ್ಟರ್ ಮನೋಜ್ ಹೂವಳೆ ನೇತೃತ್ವದ ತಂಡ ಖದೀಮರನ್ನು ಬಂಧಿಸಿದೆ.
ಇದನ್ನೂ ಓದಿ: PSI ಹುದ್ದೆ ಕೊಡಿಸುವುದಾಗಿ ಲಕ್ಷಗಟ್ಟಲೆ ಮೋಸ: 12 ಮಂದಿಗೆ ವಂಚಿಸಿ ಪೊಲೀಸರಿಗೆ ಸಿಕ್ಕಿಬಿದ್ದ ಯುವತಿ