ಬೆಂಗಳೂರು : ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆ್ಯಕ್ಸಿಜನ್ ಕೊರತೆಯಿಂದಾಗಿ 24 ಕೋವಿಡ್ ಸೋಂಕಿತರು ಮೃತಪಟ್ಟಿದ್ದ ಪ್ರಕರಣದ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿರುವ ನಿವೃತ್ತ ನ್ಯಾ.ಎ.ಎನ್. ವೇಣುಗೋಪಾಲಗೌಡ ನೇತೃತ್ವದ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಉನ್ನತ ಸಮಿತಿ ಇಂದು ಹೈಕೋರ್ಟ್ಗೆ ವರದಿ ಸಲ್ಲಿಸಿದೆ.
ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಪಿಐಎಲ್ಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಹಾಗೂ ಹಿರಿಯ ನ್ಯಾ. ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠಕ್ಕೆ ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿಯನ್ನು ಸಮಿತಿ ಸಲ್ಲಿಸಿದೆ.
ಹೈಕೋರ್ಟ್ ನಿರ್ದೇಶನದಂತೆ ವರದಿ ಸಲ್ಲಿಸಿದ್ದು, ಅದನ್ನು ಬಹಿರಂಗಪಡಿಸುವ ಕುರಿತು ನ್ಯಾಯಾಲಯ ನಾಳೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಮೇ 5 ರಂದು ನ್ಯಾ.ಎ.ಎನ್.ವೇಣುಗೋಪಾಲಗೌಡ ನೇತೃತ್ವದ ಸಮಿತಿಗೆ ಪ್ರಕರಣದ ತನಿಖೆ ನಡೆಸಲು ಹೈಕೋರ್ಟ್ ನಿರ್ದೇಸಿಸಿತ್ತು.
ಇದೇ ವೇಳೆ ಚಾಮರಾಜನಗರ ಮತ್ತು ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿನ ಆ್ಯಕ್ಸಿಜನ್ ಪೂರೈಕೆಗೆ ಸಂಬಂಧಿಸಿದ ದಾಖಲೆಗಳನ್ನು ಜಪ್ತಿ ಮಾಡಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿತ್ತು.
ಅದರಂತೆ, ನ್ಯಾ.ವೇಣುಗೋಪಾಲಗೌಡ, ನ್ಯಾ.ಕೆ.ಎನ್. ಕೇಶವ ನಾರಾಯಣ, ನಿವೃತ್ತ ಐಪಿಎಸ್ ಅಧಿಕಾರಿ ಎಸ್.ಟಿ.ರಮೇಶ್ ಅವರನ್ನೊಳಗೊಂಡ ಸಮಿತಿ ಚಾಮರಾಜನಗರ, ಮೈಸೂರಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದ ನಂತರ ತನಿಖಾ ವರದಿ ಸಿದ್ಧಪಡಿಸಿದೆ.
ಇಂದಿನ ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಹೈಕೋರ್ಟ್ ಸ್ವತಃ ಕಾನೂನು ಪ್ರಾಧಿಕಾರದ ಸಮಿತಿಗೆ ತನಿಖೆ ಮಾಡಲು ಆದೇಶಿಸಿದ ಹಿನ್ನೆಲೆಯಲ್ಲಿ ಘಟನೆಯ ಬಗ್ಗೆ ತನಿಖೆ ನಡೆಸಿ ಪ್ರಾಥಮಿಕ ವರದಿ ಸಲ್ಲಿಸಲು ನಿಯೋಜಿಸಿದ್ದ ಹಿರಿಯ ಐಎಎಸ್ ಅಧಿಕಾರಿಯನ್ನು ತಡೆಹಿಡಿಯಲಾಗಿದೆ.
ಸದ್ಯ ಅವರು ತನಿಖೆ ನಡೆಸುತ್ತಿಲ್ಲ. ನ್ಯಾಯಾಲಯದ ನಿರ್ದೇಶದನಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಹಾಗಿದ್ದಲ್ಲಿ ಸರ್ಕಾರದಿಂದ ತನಿಖೆ ಸ್ಥಗಿತಗೊಳಿಸಿರುವ ಕುರಿತು ಮೆಮೋ ಸಲ್ಲಿಸಿ, ಆ ಬಳಿಕ ನ್ಯಾಯಾಂಗ ತನಿಖೆ ಮುಂದುವರಿಸುವ ಬಗ್ಗೆ ನ್ಯಾಯಾಲಯ ಆದೇಶ ಹೊರಡಿಸಲಿದೆ ಎಂದು ಹೇಳಿ ತಿಳಿಸಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.