ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಲ್ಲಿ ವಂಚನೆ ಮಾಡಲು ಯತ್ನಿಸಿದ ಪ್ರಕರಣ ನಿನ್ನೆಯಷ್ಟೇ ಬೆಳಕಿಗೆ ಬಂದಿತ್ತು. ಈ ಸಂಬಂಧ ನಕಲಿ ಬ್ಯಾಂಕ್ ಅಧಿಕಾರಿ ಅರುಣಾ ಕುಮಾರಿಯನ್ನು ಮೈಸೂರಿನ ಹೆಬ್ಬಾಳ ಪೊಲೀಸರು ವಶಕ್ಕೆ ಪಡೆದಿದ್ದು, ಇಂದು ಕೋರ್ಟ್ಗೆ ಹಾಜರುಪಡಿಸುವ ಸಾಧ್ಯತೆ ಹೆಚ್ಚಿದೆ.
ಏನಿದು ಘಟನೆ: ಮೈಸೂರಿನ ನಿಮ್ಮ ಕೆಲ ಸ್ನೇಹಿತರು ನಿಮ್ಮ ಶ್ಯೂರಿಟಿಯಲ್ಲಿ 25 ಕೋಟಿ ರೂ. ಸಾಲಕ್ಕೆ ಅರ್ಜಿ ಹಾಕಿದ್ದಾರೆ. ಇದರ ಬಗ್ಗೆ ಮಾಹಿತಿ ಪಡೆಯಲು ಬಂದಿದ್ದೇನೆ ಎಂದು ನಿರ್ಮಾಪಕ ಉಮಾಪತಿ ಹಾಗೂ ಶ್ರೀನಿವಾಸ ಗೌಡ ಜೊತೆ ದರ್ಶನ್ ಬಳಿ ಲೋನ್ ವಿಚಾರವಾಗಿ ಮಾತನಾಡಲು ತೆರಳಿದ್ದ ಮಹಿಳೆ ಅರುಣಾ ಕುಮಾರಿ, ತಾನು ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದಾಳೆ. ನಂತರ ವಿಷಯ ತಿಳಿದ ದರ್ಶನ್ ಸ್ನೇಹಿತರು, ಲೋನ್‌ಗೆ ಯಾರೂ ಅರ್ಜಿ ಹಾಕಿಲ್ಲ ಎಂದು ಮೈಸೂರಿನ ಹೆಬ್ಬಾಳ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯನ್ನು ಹೆಬ್ಬಾಳ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಹರ್ಷ ಮೆಲಂಟಾ ದೂರಿನಲ್ಲಿ ಏನಿದೆ: ನಟ ದರ್ಶನ್ ಆಸ್ತಿ ಪತ್ರ ಮತ್ತು ಸಹಿಯನ್ನು ನಕಲು ಮಾಡಿ, ಅದರ ಆಧಾರದ ಮೇಲೆ ಬ್ಯಾಂಕಿನಲ್ಲಿ ರೂ.25 ಕೋಟಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿರುವ ದಾಖಲಾತಿ ಸೃಷ್ಟಿಸಲಾಗಿದೆ. ಈ ವಿಚಾರ ತಿಳಿದ ನಟ ದರ್ಶನ್ ಅವರು ಭಾನುವಾರದಂದ ತಮ್ಮ ಸ್ನೇಹಿತರಾದ ದೂರುದಾರ ಹರ್ಷ ಮಲೆಂಟಾ, ನಿರ್ಮಾಪಕ ಉಮಾಪತಿ ಜೊತೆ ಮೈಸೂರಿನ ಎನ್.ಆರ್.ಉಪ ವಿಭಾಗದ ಎಸಿಪಿ ಕಚೇರಿಗೆ ಆಗಮಿಸಿದ್ದರು. ಜೂ.16ರಂದು ನಿರ್ಮಾಪಕ ಉಮಾಪತಿ ಅವರು ಹರ್ಷ ಮಲೆಂಟಾಗೆ ಕರೆ ಮಾಡಿ, ಕೆನರಾ ಬ್ಯಾಂಕಿನ ಮಾನ್ಯೇಜರ್ ಅರುಣಾ ಕುಮಾರಿ ನನಗೆ ಸಿಕ್ಕಿದ್ದು, ನೀನು ರೂ.25 ಕೋಟಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದೀಯಾ? ಅದರ ಭದ್ರತೆಗಾಗಿ ನಿನ್ನ ಆಸ್ತಿ ಮತ್ತು ದರ್ಶನ್ ಆಸ್ತಿ ಪತ್ರಗಳನ್ನು ನಕಲು ಮಾಡಿ ಸಲ್ಲಿಸಿದ್ದೀಯಾ ಎಂದು ಕೇಳಿದ್ದಾರೆ.
ಇದನ್ನು ಓದಿ: ನಟ ದರ್ಶನ್ ಹೆಸರಲ್ಲಿ ವಂಚನೆ ಯತ್ನ: ಆರೋಪಿ ಅರುಣಾ ಕುಮಾರಿ ಇಂದು ಕೋರ್ಟ್ಗೆ?
ಗಾಬರಿಯಾದ ಹರ್ಷ ಬ್ಯಾಂಕಿನ ಅಧಿಕಾರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಅದೇ ದಿನ ಅರುಣಾ ಕುಮಾರಿ, ಮಧುಕೇಶವ ಮತ್ತು ನಂದೀಶ ಎಂಬುವವರೊಂದಿಗೆ ಮೈಸೂರಿಗೆ ಬಂದು, ಕೆಲವು ಆಸ್ತಿಪತ್ರಗಳ ಝೆರಾಕ್ಸ್ ಪ್ರತಿಯನ್ನು ಹರ್ಷ ಮಲೆಂಟಾ ಅವರಿಗೆ ತೋರಿಸಿದ್ದಾರೆ. ನೀವು ಗಣ್ಯವ್ಯಕ್ತಿಯೊಬ್ಬರ ಆಸ್ತಿ ಪತ್ರವನ್ನು ಫೋರ್ಜರಿ ಮಾಡಿದ್ದು, ಅದನ್ನು ಮಾಧ್ಯಮಗಳ ಮುಂದೆ ಹೇಳುವುದಾಗಿ ಬೆದರಿಸಿ ರೂ.25 ಲಕ್ಷಕ್ಕಾಗಿ ಬೇಡಿಕೆ ಇರಿಸಿದ್ದಾರೆ. ಜೂ.17ರಂದು ಬೆಂಗಳೂರಿನಲ್ಲಿರುವ ಕೆನರಾ ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಬಂದಿದ್ದ ಮಹಿಳೆ ನಕಲಿ ಬ್ಯಾಂಕ್ ಮ್ಯಾನೇಜರ್ ಎಂಬುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಹರ್ಷ ಮಲೆಂಟಾ ಜು.3ರಂದು ಮೈಸೂರಿನ ಹೆಬ್ಬಾಳ ಠಾಣೆಯಲ್ಲಿ ಅರುಣ ಕುಮಾರಿ, ಮಧುಕೇಶವ ಮತ್ತು ನಂದೀಶ ಎಂಬುವವರ ವಿರುದ್ಧ ದೂರು ನೀಡಿದ್ದಾರೆ.
ಇನ್ನು ಜುಲೈ 11 ರಂದು ದರ್ಶನ್ ದಿಢೀರ್ ಆಗಿ ಎಸಿಪಿ ಕಚೇರಿಯಲ್ಲಿ ವಿಚಾರಣೆ ಮುಗಿಸಿ ಬಂದ ಬಳಿಕ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಪ್ರಕರಣ ಸಂಬಂಧ ದರ್ಶನ್ ಹೇಳಿಕೆ: ನನ್ನ ಡಾಕ್ಯುಮೆಂಟ್ ಫೋರ್ಜರಿ ಆಗಿದೆ ಎಂದು ಒಂದು ತಿಂಗಳ ಹಿಂದೆಯೇ ನನ್ನ ಗಮನಕ್ಕೆ ಬಂದಿತ್ತು. ಈ ಸಂಬಂಧ ವಿಚಾರಣೆಗೆ ಬಂದಿದ್ದೆ. ನಕಲಿ ಬ್ಯಾಂಕ್ ಮ್ಯಾನೇಜರ್ ಅವರನ್ನು ಯಾರು ಪರಿಚಯ ಮಾಡಿದ್ರು? ಹೇಗೆ ಪರಿಚಯ ಮಾಡಿದ್ರು ಅಂತಾ ಎಲ್ಲವೂ ಗೊತ್ತಾಗಲಿದೆ. ಪೊಲೀಸರು ತನಿಖೆಯಲ್ಲಿ ಬಾಯ್ಬಿಡುಸ್ತಾರೆ. ಈ ತರ ಮೋಸ ಮಾಡುವವರು ಯಾರಾದರೂ ಸರಿ ನಾನು ಬಿಡಲ್ಲ. ನಾನು ಅಂತವರ ರೆಕ್ಕೆ ಕಟ್ ಮಾಡಲ್ಲ, ತಲೆಯನ್ನೇ ಕಟ್ ಮಾಡುವವನು ಎಂದು ಖಡಕ್ ಆಗಿ ವಾರ್ನ್ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಡಿಸಿಪಿ ಪ್ರದೀಪ್ ಗುಂಟಿ, ನಟ ದರ್ಶನ್ ಅವರನ್ನು ನಾವು ವಿಚಾರಣೆಗೆ ಕರೆದಿಲ್ಲ. ಆದರೆ, ಅವರೇ ದೂರುದಾರರೊಂದಿಗೆ ಬಂದಿದ್ದರು. ಮಹಿಳೆಯೊಬ್ಬರು ಬ್ಯಾಂಕ್ ಲೋನ್ ಕೊಡಿಸುವುದಾಗಿ ವಂಚಿಸಲು ಯತ್ನಿಸಿದ್ದಾರೆ ಎಂದು ಹರ್ಷ ಅವರು ದೂರು ನೀಡಿದ್ದಾರೆ. ಈ ಸಂಬಂಧ ನಾವು ದೂರುದಾರರಾದ ಹರ್ಷ ಅವರನ್ನು ವಿಚಾರಣೆಗೆ ಬರುವಂತೆ ಕರೆದಿದ್ದೆವು. ಬೇರೆ ಯಾರನ್ನೂ ವಿಚಾರಣೆಗೆ ಕರೆದಿಲ್ಲ, ಅವರೊಂದಿಗೆ ಸ್ನೇಹಿತರು ಬಂದಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಸದ್ಯ ಪೊಲೀಸರು ನಕಲಿ ಬ್ಯಾಂಕ್ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ.