ಬೆಂಗಳೂರು: ವಾರಾಂತ್ಯ ಬಂದರೆ ಸಾಕು ಕಲರ್ಸ್ ಕನ್ನಡ ವೀಕ್ಷಕರಿಗೆ ಒಂದು ರೀತಿಯ ಟೆನ್ಷನ್. ಅದಕ್ಕೆ ಕಾರಣವಿದೆ. ಯಾಕೆಂದರೆ ಆ ದಿನ ದೊಡ್ಮನೆಯಿಂದ ಓರ್ವ ಸ್ಪರ್ಧಿ ಹೊರ ಬರುತ್ತಾರೆ. ಅಂದಹಾಗೆ ಈ ವಾರ ದೊಡ್ಮನೆಯಿಂದ ಹೊರಬಲಿರುವ ಸ್ಪರ್ಧಿ ಚೈತ್ರಾ ಕೊಟ್ಟೂರು ಎನ್ನಲಾಗುತ್ತಿದೆ.
ದೊಡ್ಮನೆಯಲ್ಲಿ ನಾಲ್ಕು ವಾರಗಳ ಕಾಲ ಇದ್ದು, ಚೈತ್ರಾ ತಮ್ಮ ಹುಟ್ಟುಹಬ್ಬವನ್ನು ಬಿಗ್ ಮನೆಯಲ್ಲೇ ಆಚರಿಸಿಕೊಂಡಿದ್ದಾರೆ. ಯುವ ಬರಹಗಾರ್ತಿಯಾಗಿ ಗುರುತಿಸಿಕೊಂಡಿರುವ ಚೈತ್ರಾ ನಟಿಯೂ ಹೌದು. ಸೂಜಿದಾರ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಗಮನ ಸೆಳೆದಿರುವ ಚೈತ್ರಾ, ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಕನ್ನಡದ ಹೆಸರಾಂತ ನಿರ್ದೇಶಕ ಯೋಗರಾಜ್ ಭಟ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿರುವ ಇವರು, ಸಿನಿಮಾಗಳಲ್ಲಿ ನಟಿಸುವುದು ಮಾತ್ರವಲ್ಲದೇ ಹಾಡು, ಸಂಭಾಷಣೆಯನ್ನು ಕೂಡಾ ಬರೆದಿದ್ದಾರೆ.
ಸೂಜಿದಾರ ಸಿನಿಮಾದಲ್ಲಿ ಚೈತ್ರಾ ಕೇವಲ ನಟಿಯಾಗಿ ಕಾಣಿಸಿಕೊಂಡಿಲ್ಲ. ಬದಲಿಗೆ ಆ ಚಿತ್ರಕ್ಕೆ ಸಂಭಾಷಣೆ ಬರೆದಿರುವ ಇವರು, ಅದಕ್ಕಾಗಿ ಒಂದು ಹಾಡನ್ನು ಕೂಡಾ ಬರೆದಿದ್ದಾರೆ. ಸೂಜಿದಾರ ಚಿತ್ರದ ನಟನೆಗಾಗಿ 2018-2019ನೇ ಸಾಲಿನ ಅತ್ಯುತ್ತಮ ಪೋಷಕ ನಟಿ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಇನ್ನು ಕಳೆದ ವಾರ ನಡೆದ ನಾಮಿನೇಶನ್ ಪ್ರಕ್ರಿಯೆಯಲ್ಲಿ ಚೈತ್ರಾ ಕೊಟ್ಟೂರು, ಭೂಮಿ ಶೆಟ್ಟಿ, ಚಂದನ್ ಆಚಾರ್, ಪ್ರಿಯಾಂಕಾ, ದೀಪಿಕಾ ದಾಸ್, ರಾಜು ತಾಳಿಕೋಟೆ ಮತ್ತು ಶೈನ್ ಶೆಟ್ಟಿ ನಾಮಿನೇಟ್ ಆಗಿದ್ದರು. ನಾಲ್ಕನೇ ವಾರದಲ್ಲಿ ಚೈತ್ರಾ ಕೊಟ್ಟೂರು ದೊಡ್ಮನೆಯಿಂದ ಹೊರಬರಲಿದ್ದಾರೆ ಎನ್ನಲಾಗುತ್ತಿದೆ. ಆದ್ರೂ ಇದು ಖಚಿತವಲ್ಲದ ಕಾರಣ ಇವತ್ತಿನ ಎಪಿಸೋಡ್ನಲ್ಲಿ ಇದಕ್ಕೆ ಸ್ಪಷ್ಟ ಉತ್ತರ ಸಿಗಲಿದೆ.