ಬೆಂಗಳೂರು : ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಬಹುಕೋಟಿ ವಂಚನೆ ಮಾಡಿರುವ ಪ್ರಕರಣವನ್ನು ಸಿಸಿಬಿ ತನಿಖೆ ನಡೆಸುತ್ತಿದೆ. ಈ ನಡುವೆ ಪ್ರಕರಣದ ದೂರದಾರನಿಗೆ 5 ಕೋಟಿ ಹಣ ಎಲ್ಲಿಂದ ಬಂದಿದೆ ಎಂಬ ಬಗ್ಗೆ ತನಿಖೆ ನಡೆಸುವಂತೆ ವಕೀಲರೊಬ್ಬರು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ.
ಬಹುಕೋಟಿ ವಂಚನೆ ಪ್ರಕರಣದ ದೂರುದಾರ ಗೋವಿಂದ ಬಾಬು ಪೂಜಾರಿ ತಮ್ಮ ದೂರಿನಲ್ಲೇ 5 ಕೋಟಿ ನಗದು ಹಣವನ್ನು ನೀಡಿರುವುದಾಗಿ ಉಲ್ಲೇಖ ಮಾಡಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದ ಹಣವು ಹವಾಲ ಮಾರ್ಗದಿಂದ ಬಂದಿರುವ ಅನುಮಾನ ವ್ಯಕ್ತಪಡಿಸಿರುವ ವಕೀಲ ನಟರಾಜ್ ಶರ್ಮಾ ಅವರು ಗೋವಿಂದ ಪೂಜಾರಿ ವಿರುದ್ಧ ಇಡಿಗೆ ದೂರು ನೀಡಿದ್ದಾರೆ.
ಈ ಪ್ರಕರಣವನ್ನು ಇಡಿ ತನಿಖೆ ಮಾಡಿ ಹಣದ ಬಗ್ಗೆ ವಿಚಾರಣೆ ನಡೆಸಬೇಕು. ಬ್ಯಾಂಕ್ನಿಂದ ಸಾಲ ಪಡೆದಿರುವುದಾಗಿ ಗೋವಿಂದ್ ಪೂಜಾರಿ ಹೇಳಿದ್ದಾರೆ.. ಹಣವನ್ನು ಸಾಲ ಪಡೆದು ಈ ರೀತಿ ಬಳಸಿಕೊಳ್ಳೋದು ಸಹ ತಪ್ಪು. ಅವರು ಮುಂಬೈನಲ್ಲಿ ಉದ್ಯಮ ಮಾಡುತ್ತಿರುವುದರಿಂದ ಇದು ಹವಾಲ ವಹಿವಾಟು ಎಂದು ಅನುಮಾನ ವ್ಯಕ್ತಪಡಿಸಿರುವ ವಕೀಲರು, ಇಂದು ಇಡಿಗೆ ದೂರು ನೀಡಿದ್ದಾರೆ.
ಚೈತ್ರಾ ಕುಂದಾಪುರ ಹಾಗೂ ಬಜರಂಗ ದಳಕ್ಕೂ ಸಂಬಂಧ ಇಲ್ಲ : ಚೈತ್ರಾ ಕುಂದಾಪುರ ಬಜರಂಗದಳ ಸಂಘಟನೆಯವರು ಅಲ್ಲ. ಅವಳಿಗೂ ಬಜರಂಗದಳ ಸಂಘಟನೆಗೆ ಯಾವುದೇ ಸಂಬಂಧವಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಕೆ ಉತ್ತಮ ವಾಗ್ಮಿ ಎಂಬ ಕಾರಣಕ್ಕೆ ನಾವು ಭಾಷಣಕ್ಕೆ ಮಾತ್ರ ಕರೆಸಿಕೊಳ್ಳುತ್ತಿದ್ದೆವು. ಇಂತಹ ಘಟನೆಗಳಿಗೆ ನಮ್ಮ ಸಂಘಟನೆ ಆಸ್ಪದ ಕೊಡುವುದಿಲ್ಲ. ಈ ಪ್ರಕರಣದ ಬಗ್ಗೆ ಎರಡು ತಿಂಗಳ ಹಿಂದೆಯೇ ನನ್ನ ಗಮನಕ್ಕೆ ಬಂದಿತ್ತು. ಗುರುಪುರ ವಜ್ರದೇಹಿ ಮಠದ ಸ್ವಾಮೀಜಿಗಳು ನನ್ನೊಂದಿಗೆ ಈ ವಿಚಾರವನ್ನು ತಿಳಿಸಿದ್ದರು. ನಿಮ್ಮ ಪಾತ್ರವಿಲ್ಲವೆಂದ ಮೇಲೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಸ್ವಾಮೀಜಿಯವರಿಗೆ ಹೇಳಿದ್ದೆ. ಈ ರೀತಿ ಪ್ರಕರಣಗಳು ಎಲ್ಲಿ ಕೂಡ ಆಗಬಾರದು ಎಂದು ಹೇಳಿದರು.
ಸೆ.25ರಿಂದ ರಾಜ್ಯಾದ್ಯಂತ ಶೌರ್ಯ ಜಾಗರಣ ರಥಯಾತ್ರೆ : ಯುವ ಪೀಳಿಗೆಗೆ ಪೂರ್ವಜರ ಶೌರ್ಯ, ಪರಾಕ್ರಮ, ಬಲಿದಾನಗಳನ್ನು ನೆನಪಿಸುವ ಉದ್ದೇಶದಿಂದ ಬಜರಂಗದಳವು ಸೆ.25ರಿಂದ ರಾಜ್ಯಾದ್ಯಂತ ಶೌರ್ಯ ಜಾಗರಣ ರಥಯಾತ್ರೆ ನಡೆಸಲಿದೆ ಎಂದು ಶರಣ್ ಪಂಪ್ ವೆಲ್ ಹೇಳಿದರು.
ಶೌರ್ಯ ಜಾಗರಣ ರಥ ಯಾತ್ರೆಯು ಚಿತ್ರದುರ್ಗದಲ್ಲಿ ಸೆ.25ರಂದು ಉದ್ಘಾಟನೆಯಾಗಿ ಅ.10ರಂದು ಉಡುಪಿಯಲ್ಲಿ ಸಮಾರೋಪವಾಗಲಿದೆ. ರಥಯಾತ್ರೆಯು ದಾವಣಗೆರೆ, ಶಿವಮೊಗ್ಗ, ಸಾಗರ, ಶೃಂಗೇರಿ, ಬಾಳೆಹೊನ್ನೂರು, ಚಿಕ್ಕಮಗಳೂರು, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಮಂಡ್ಯ, ಮೈಸೂರು, ಕೊಡಗು, ಸುಳ್ಯ, ಪುತ್ತೂರು, ಮಂಗಳೂರು ಮೂಲಕ ಉಡುಪಿಗೆ ಬರಲಿದೆ. ಪ್ರತೀ ಜಿಲ್ಲೆಗಳಲ್ಲಿ ಸಾವಿರಾರು ಯುವಕರನ್ನು ಸೇರಿಸಿ ಸಾರ್ವಜನಿಕ ಸಭೆಗಳನ್ನು ನಡೆಸಲಾಗುತ್ತದೆ ಎಂದು ಹೇಳಿದರು.
ಅ.6ರಂದು ಕೊಡಗಿನಿಂದ ಸುಳ್ಯಕ್ಕೆ ಶೌರ್ಯ ರಥಯಾತ್ರೆ ಆಗಮಿಸುತ್ತದೆ. ಸುಳ್ಯದಲ್ಲಿ ಬೃಹತ್ ಕಾರ್ಯಕ್ರಮದ ಮೂಲಕ ರಥವನ್ನು ಸ್ವಾಗತಿಸಲಾಗುತ್ತದೆ. ಅ.7ಕ್ಕೆ ಪುತ್ತೂರಿಗೆ ರಥವು ಪ್ರವೇಶಿಸಿ ಅಲ್ಲಿ ಬೃಹತ್ ಸಭೆ ನಡೆಯಲಿದೆ. ಅ.9ರಂದು ಮಂಗಳೂರಿನ ಕದ್ರಿ ಮೈದಾನದಲ್ಲಿ ಬೃಹತ್ ಸಭೆ ನಡೆಯಲಿದೆ. ಅ.10ರಂದು ಉಡುಪಿಗೆ ಶೌರ್ಯ ರಥಯಾತ್ರೆ ಪ್ರವೇಶಿಸಿ ಹಿಂದೂ ಸಮಾವೇಶ ನಡೆಯಲಿದೆ. ರಾಜ್ಯಾದ್ಯಂತ 2,500 ಬಜರಂಗದಳದ ಶಾಖೆ ಇವೆ. ಈ ಬಾರಿ ನಮಗೆ 5000 ಶಾಖೆಗಳಿಗೆ ವಿಸ್ತರಿಸುವ ಗುರಿಯಿದೆ ಎಂದು ಅವರು ಹೇಳಿದರು.