ಬೆಂಗಳೂರು: ಕೊರೊನಾ ಸಾಂಕ್ರಾಮಿಕ ಸೋಂಕಿನ ನಡುವೆಯು ಹಲವು ಪರೀಕ್ಷೆಗಳನ್ನ ನಡೆಸಿ ಯಶಸ್ವಿಯಾಗಿರುವ ಸರ್ಕಾರ ಇದೀಗ ವೃತ್ತಿಪರ ಕೋರ್ಸ್ಗಳಿಗೆ ನಡುವೆಯು ಸಿಇಟಿ ಪರೀಕ್ಷೆಯನ್ನ ನಡೆಸುತ್ತಿದೆ.
ಇಂದಿನಿಂದ ಆರಂಭವಾಗಿರುವ ಪರೀಕ್ಷೆಯಲ್ಲಿ ಮೊದಲ ದಿನ ಜೀವ ವಿಜ್ಞಾನ ಹಾಗೂ ಗಣಿತ ಪರೀಕ್ಷೆ ನಡೆಯಲಿದೆ. ಬೆಳಗ್ಗೆ 10-30ಕ್ಕೆ ಪರೀಕ್ಷೆ ಆರಂಭವಾಗಲಿದ್ದು, ಎರಡು ಸೆಕ್ಷನ್‌ಗಳಲ್ಲಿ ನಡೆಯಲಿದೆ. ಪರೀಕ್ಷಾರ್ಥಿಗಳು ಪರೀಕ್ಷೆಯ ಅರ್ಧ ಗಂಟೆಗೂ ಮುನ್ನ ಕೇಂದ್ರಕ್ಕೆ ಆಗಮಿಸಬೇಕಿದೆ.
ರಾಜ್ಯದಲ್ಲಿ ಒಟ್ಟು 2,01,816 ಅಭ್ಯರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದು, ಈ ಪೈಕಿ ಕೋವಿಡ್ ಪಾಸಿಟಿವ್ ಇರುವ 12 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. 12 ಸೋಂಕಿತ ವಿದ್ಯಾರ್ಥಿಗಳ ಪೈಕಿ 10 ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಹಾಗೂ ಕೋಲಾರ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ತಲಾ ಒಬ್ಬ ವಿದ್ಯಾರ್ಥಿ ಸಿಇಟಿ ಬರೆಯುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ರಾಜ್ಯಾದ್ಯಂತ 530 ಪರೀಕ್ಷಾ ಕೇಂದ್ರಗಳ ಪೈಕಿ 86 ಕೇಂದ್ರಗಳು ಬೆಂಗಳೂರಿನಲ್ಲೇ ಇವೆ. ಉಳಿದ ಜಿಲ್ಲೆಗಳಲ್ಲಿ ಒಟ್ಟು 444 ಕೇಂದ್ರಗಳಿವೆ. ಪ್ರತಿ ಪರೀಕ್ಷಾ ಕೇಂದ್ರದ ಪ್ರತಿ ಕೊಠಡಿಯಲ್ಲಿ 24 ಅಭ್ಯರ್ಥಿಗಳು ಪರೀಕ್ಷೆ ಬರೆಯುವಂತೆ ಹಾಗೂ ಪ್ರತಿ ಒಂದು ಬೆಂಚಿನಲ್ಲಿ ಇಬ್ಬರು ಅಭ್ಯರ್ಥಿಗಳು ಕುಳಿತುಕೊಳ್ಳುವಂತೆ, ಎರಡು ಬೆಂಚ್ ನಡುವೆ ಮೂರು ಅಡಿ ಅಂತರ ಕಾಪಾಡಿಕೊಳ್ಳಲು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಕ್ರಮ ವಹಿಸಲಾಗಿದೆ.
ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಥರ್ಮಲ್ ಸ್ಕ್ಯಾನರ್, ಹ್ಯಾಂಡ್ ಸ್ಯಾನಿಟೈಸರ್ ಅಳವಡಿಸಲಾಗಿದೆ. ಬೆಂಗಳೂರಿನಲ್ಲಿರುವ ಸಿಇಟಿ ಪರೀಕ್ಷಾ ಕೇಂದ್ರಗಳಿಗೆ ಬಿಬಿಎಂಪಿ ವತಿಯಿಂದ ಸ್ಯಾನಿಟೈಸ್ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ 100 ಮಾಸ್ಕ್‌ಗಳನ್ನು ಸ್ವಯಂ ಸೇವಾ ಸಂಸ್ಥೆಯಿಂದ ಪರೀಕ್ಷೆ ನಡೆಯುವ ಎರಡು ದಿನಗಳಂದು ವಿತರಿಸಲಿದ್ದಾರೆ.
ಗಡಿಭಾಗದ ವಿದ್ಯಾರ್ಥಿಗಳಿಗೆ ಆರ್‌ಟಿಪಿಸಿಆರ್ ನೆಗಟಿವ್ ರಿಪೋರ್ಟ್ ಕಡ್ಡಾಯವಲ್ಲ:
ಮುಖ್ಯವಾಗಿ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತಿದ್ದು, ಕೆಇಎ ಗಡಿಭಾಗದ ವಿದ್ಯಾರ್ಥಿಗಳಿಗೆ ಆರ್‌ಟಿಪಿಸಿಆರ್ ನೆಗಟಿವ್ ರಿಪೋರ್ಟ್ ಕಡ್ಡಾಯವಲ್ಲ. ಬದಲಿಗೆ ಅಲ್ಲಿನ ಜಿಲ್ಲಾಡಳಿತವೇ ಎಲ್ಲವನ್ನೂ ನೋಡಿಕೊಳ್ಳಲಿದೆ.
ಗಡಿ ಜಿಲ್ಲೆಗಳಲ್ಲಿ ಅಭ್ಯರ್ಥಿಗಳು ಮತ್ತು ಪೋಷಕರು ಸಿಇಟಿ ಪರೀಕ್ಷಾ ಕೇಂದ್ರಕ್ಕೆ ತಲುಪಲು ಅನುಕೂಲವಾಗಲು ಸಿಇಟಿ ಪರೀಕ್ಷೆಯ ಪ್ರವೇಶ ಪತ್ರವನ್ನು ಪರಿಗಣಿಸಿ ಅವಕಾಶ ನೀಡಲು ಎಲ್ಲ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ. ಗಡಿ ಪ್ರದೇಶದಲ್ಲಿ ಬಹಳಷ್ಟು ಎಚ್ಚರಿಕೆ ವಹಿಸಲಾಗಿದೆ. ರೋಗದ ಲಕ್ಷಣ ಹೊಂದಿದ್ದರೆ ಅವರಿಗೆ ಐಸೋಲೇಷನ್ ರೂಮ್ನಲ್ಲಿ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ.
ಸಿಇಟಿ ಪರಿಷ್ಕ್ರತ ವೇಳಾಪಟ್ಟಿ :
28/08/2021
1) ಬೆಳಗ್ಗೆ 10.30 ರಿಂದ 11.50 ರವರೆಗೆ ಜೀವಶಾಸ್ತ್ರ
2) ಮಧ್ಯಾಹ್ನ 2.30 ರಿಂದ 3.50 ರವರೆಗೆ ಗಣಿತ
29/08/2021 - ಭೌತವಿಜ್ಞಾನ, ರಸಾಯನ ವಿಜ್ಞಾನ
30/08/2021 - ಕನ್ನಡ
ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ಸೈಟ್ kea.kar.nic.inನಲ್ಲಿ ಪರೀಕ್ಷೆಯ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಸಿಇಟಿ - 2021 ಅಭ್ಯರ್ಥಿಗಳಿಗೆ ನೀಡಲಾಗಿರುವ ಸೂಚನೆಗಳು ಪ್ರಾಧಿಕಾರದ ವೆಬ್ಸೈಟ್ನಲ್ಲಿ ಲಭ್ಯವಿದೆ.
ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳು/ಉತ್ತರಗಳು ಇಂಗ್ಲೀಷ್ ಮತ್ತು ಕನ್ನಡ ಭಾಷೆಯಲ್ಲಿ ಮುದ್ರಿತವಾಗಿದ್ದು, ವಿದ್ಯಾರ್ಥಿಗಳು ಸೂಕ್ಷ್ಮವಾಗಿ ಗಮನಿಸಿಕೊಳ್ಳಬೇಕು.
ಭದ್ರತೆಗೆ ಹೆಚ್ಚು ಒತ್ತು :
ಒಟ್ಟು 530 ವೀಕ್ಷಕರು, 1,060 ವಿಶೇಷ ಜಾಗೃತ ದಳದ ಸದಸ್ಯರು, 530 ಪ್ರಶ್ನೆ ಪತ್ರಿಕೆ ಪಾಲಕರು, ಸುಮಾರು 8,409 ಕೊಠಡಿ ಮೇಲ್ವಿಚಾರಕರು ಸೇರಿ ಒಟ್ಟು 20,415 ಅಧಿಕಾರಿ/ಸಿಬ್ಬಂದಿ ಪರೀಕ್ಷ ಕರ್ತವ್ಯ ನಿರ್ವಹಿಸಲಿದ್ದಾರೆ. ಪರೀಕ್ಷಾ ದಿನಗಳಂದು ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ/ಖಜಾನೆಗಳಿಗೆ ಹೆಚ್ಚಿನ ಪೊಲೀಸ್ ಭದ್ರತೆ ನೀಡಲಾಗಿದೆ.
ಇದನ್ನೂ ಓದಿ : ಆಗಸ್ಟ್ 28-29ರಂದು ಸಿಇಟಿ ಪರೀಕ್ಷೆ: ಪ್ರಾಧಿಕಾರದ ವೆಬ್ಸೈಟ್ನಲ್ಲಿ ಪ್ರವೇಶ ಪತ್ರ ಲಭ್ಯ