ಬೆಂಗಳೂರು: ದೇಶದಲ್ಲಿ ಸಂಭವನೀಯ ಕೋವಿಡ್ 3ನೇ ಅಲೆಯ ನಿರ್ವಹಣೆಗೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 1,500 ಕೋಟಿ ರೂ. ನೆರವು ದೊರೆತಿದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಾಜ್ಯದಲ್ಲಿ 3ನೇ ಅಲೆಯ ನಿರ್ವಹಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ಜಯನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಯುನೈಟೆಡ್ ಆಸ್ಪತ್ರೆಯಲ್ಲಿ ಕೊರೊನಾ ಲಸಿಕಾ ವಿತರಣೆ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ಅವರು ಮಾತನಾಡಿದರು. ಯುವ ವೈದ್ಯರ ತಂಡ ಕಲಬುರಗಿಯಲ್ಲಿ ಅತ್ಯುತ್ತಮ ಸೇವೆಯನ್ನು ಸಲ್ಲಿಸಿ ಬೆಂಗಳೂರಿನಲ್ಲಿಯೂ ಆಸ್ಪತ್ರೆಯನ್ನು ಪ್ರಾರಂಭಿಸಿರುವುದು ಸಂತಸದ ವಿಷಯ. ಕೊರೊನಾ ಸಾಂಕ್ರಾಮಿಕ ಹೆಚ್ಚಾಗಿದ್ದಾಗ ರಾಜ್ಯದಲ್ಲಿ ಆರೋಗ್ಯ ಸೌಲಭ್ಯಗಳ ಕೊರತೆ ಉಂಟಾಗಿತ್ತು. ಆ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳು ನೀಡಿದ ಸಹಕಾರ ಬಹಳ ಶ್ಲಾಘನೀಯ ಎಂದರು.
ಕಲಬುರಗಿ ಜಿಲ್ಲಾ ಕೇಂದ್ರದಲ್ಲಿ ಯುನೈಟೆಡ್ ಆಸ್ಪತ್ರೆ ಸಾವಿರಾರು ಕೊರೊನಾ ಪೀಡಿತರಿಗೆ ಉತ್ತಮ ಚಿಕಿತ್ಸೆ ನೀಡಿದೆ. ರಾಜ್ಯ ಸರ್ಕಾರ ದೇಶದಲ್ಲೇ ರಾಜ್ಯವನ್ನು ಆರೋಗ್ಯ ಕ್ಷೇತ್ರದಲ್ಲಿ ಮಾದರಿ ರಾಜ್ಯವನ್ನಾಗಿಸಲು ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದೆ. ಈ ವಿಷಯದಲ್ಲಿ ಸಫಲತೆಯನ್ನು ಪಡೆಯಲು ಖಾಸಗಿ ಆಸ್ಪತ್ರೆಗಳ ಸಹಕಾರ ಬಹಳ ಅಗತ್ಯ.
ಕೇಂದ್ರ ಸರ್ಕಾರ ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ಮುಂದಿನ ಸಂಭವನೀಯ 3ನೇ ಅಲೆಯನ್ನು ನಿರ್ವಹಿಸುವ ನಿಟ್ಟಿನಲ್ಲಿ 23 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಈ ಹಣದಲ್ಲಿ ರಾಜ್ಯಕ್ಕೆ 1,500 ಕೋಟಿ ರೂ.ಗಳ ನೆರವು ದೊರೆಯಲಿದ್ದು, ರಾಜ್ಯದಲ್ಲಿ ಮಕ್ಕಳ ವಿಭಾಗದ ಸಾಮರ್ಥ್ಯವನ್ನು ಹೆಚ್ಚಿಸಲು ಬಳಸಿಕೊಳ್ಳಲಾಗುವುದು ಎಂದು ಸಚಿವ ಸುಧಾಕರ್ ಹೇಳಿದರು.
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಜಯನಗರ ಭಾಗದಲ್ಲಿ ಮತ್ತೊಂದು ನೂತನ ಆಸ್ಪತ್ರೆ ಪ್ರಾರಂಭವಾಗುತ್ತಿರುವುದು ಬಹಳ ಸಂತಸದ ವಿಷಯ. ಕೊರೊನಾ ಸಂಕಷ್ಟ ಕಾಲದಲ್ಲಿ ಆಸ್ಪತ್ರೆ ಸೌಲಭ್ಯಗಳ ದೊರೆಯದೇ ಇದ್ದಂತಹ ಸಂದರ್ಭದಲ್ಲಿ ಇದರ ಮಹತ್ವವನ್ನು ನಾವು ತಿಳಿದುಕೊಂಡಿದ್ದೇವೆ. ಹೆಲ್ತ್ ಕಾರ್ಡ್‌ಗಳ ಮೂಲಕ ಹಾಗೂ ನಿರ್ದಿಷ್ಟ ದರವನ್ನು ನಿಗದಿಪಡಿಸುವ ಮೂಲಕ ಉತ್ತಮ ಸೇವೆಯನ್ನು ನೀಡುವ ಭರವಸೆಯನ್ನು ಇಲ್ಲಿನ ವೈದ್ಯಕೀಯ ಮಂಡಳಿ ನೀಡಿರುವುದು ಸಂತಸದ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಮುಗಳಖೋಡ-ಜಿಡಗಾ ಮಠದ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಶ್ರೀ, ಮುರುಘರಾಜೇಂದ್ರ ಸ್ವಾಮೀಜಿ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಯುನೈಟೆಡ್ ಆಸ್ಪತ್ರೆಯ ಸಿಎಂಡಿ ಡಾ.ವಿಕ್ರಮ್ ಸಿದ್ದಾರೆಡ್ಡಿ, ಮಾಜಿ ಕೇಂದ್ರ ಸಚಿವೆ ರಾಣಿ ಸತೀಶ್, ಮಾಜಿ ಸಚಿವ ಪಿಜಿಆರ್ ಸಿಂಧ್ಯಾ, ಶಾಸಕ ಪಿ. ರಾಜೀವ, ಯುನೈಟೆಡ್ ಆಸ್ಪತ್ರೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಶಾಂತಕುಮಾರ್ ಮುರುಡಾ, ಆಸ್ಪತ್ರೆಯ ನಿರ್ದೇಶಕರಾದ ಡಾ. ವೀಣಾ ವಿಕ್ರಮ್ ಸಿದ್ಧಾರೆಡ್ಡಿ ಹಾಗೂ ಡಾ. ರಾಜೀವ್ ಬಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ: ಕೋವಿಡ್ 2ನೇ ಅಲೆ ಪರಿಣಾಮ: 23 ಸಾವಿರ ಕೋಟಿ ರೂ. ತುರ್ತು ಪ್ಯಾಕೇಜ್ ಘೋಷಿಸಿದ ಕೇಂದ್ರ ಸರ್ಕಾರ