ಬೆಂಗಳೂರು: ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ ಎಂದರೆ ಅದು ಗಂಭೀರವಾದ ವಿಷಯವೇ ಆಗಿರಲಿದೆ. ಹಿಂದೆಯೂ ಶಿವಮೊಗ್ಗದಲ್ಲಿ ಇಂತಹ ಘಟನೆಗಳು ನಡೆದಿವೆ. ಹಾಗಾಗಿ ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಹುಬ್ಬಳ್ಳಿ ಡೆವಲಪ್ಮೆಂಟ್ ಫೋರಮ್ ನಿಯೋಗ ಭೇಟಿ ಮಾಡಿತು. ಹುಬ್ಬಳ್ಳಿ ಡೆವಲಪ್ಮೆಂಟ್ ಫೋರಮ್ ಅಧ್ಯಕ್ಷ ಡಾ. ವಿಜಯ ಸಂಕೇಶ್ವರ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಸಚಿವರಾದ ಹಾಲಪ್ಪ ಆಚಾರ್, ಶಂಕರ ಪಾಟೀಲ್ ಮುನೇನಕೊಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ, ಕೆಎಲ್ಇ ತಾಂತ್ರಿಕ ಮಹಾವಿದ್ಯಾಲಯದ ಕುಲಪತಿ ಡಾ. ಅಶೋಕ ಶೆಟ್ಟರ್, ಯುವ ಉದ್ಯಮಿ ಸಂತೋಷ ಹುರುಳಿಕೊಪ್ಪಿ ಮತ್ತು ಇತರರು ನಿಯೋಗದಲ್ಲಿ ಉಪಸ್ಥಿತರಿದ್ದರು.
ಸಿಎಂ ಭೇಟಿ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತನ ಹತ್ಯೆ ಪ್ರಕರಣದ ಬಗ್ಗೆ ಸಂಪೂರ್ಣ ತೆನಿಖೆ ಆಗಬೇಕು. ಈ ಹಿಂದೆಯೂ ಶಿವಮೊಗ್ಗದಲ್ಲಿ ಈ ರೀತಿಯ ಘಟನೆಗಳು ನಡೆದಿವೆ. ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಪೊಲೀಸ್ ಇಲಾಖೆ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ಕೊಲೆ ಹಿಂದೆ ಯಾರು ಇದ್ದಾರೆ ಅನ್ನೋದನ್ನ ಪತ್ತೆ ಹಚ್ಚಬೇಕು ಎಂದರು.
ಕೆಲ ಮುಸ್ಲಿಂ ಗೂಂಡಾಗಳು ಕೊಲೆ ಹಿಂದೆ ಇದ್ದಾರೆ ಎಂಬ ಸಚಿವ ಈಶ್ವರಪ್ಪ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಜೋಶಿ, ಈಶ್ವರಪ್ಪ ಹೇಳಿಕೆ ಕೊಟ್ಟಿದ್ದಾರೆ ಅಂದರೆ ಅದು ಗಂಭೀರವಾದ ಸಂಗತಿ. ಆ ದಿಕ್ಕಿನತ್ತ ತನಿಖೆ ಮಾಡಬೇಕು. ಎಲ್ಲಾ ಗೂಂಡಾಗಳನ್ನ ಬಂಧಿಸಿ ಒಳಗೆ ಹಾಕಬೇಕು ಎಂದು ಒತ್ತಾಯಿಸಿದರು.
ಹಿಜಾಬ್ ವಿಚಾರ ಕುರಿತು ಹೈಕೋರ್ಟ್ ನ ಮಧ್ಯಂತರ ತೀರ್ಪುನ್ನ ಎಲ್ಲರೂ ಪಾಲನೆ ಮಾಡಬೇಕು. ಯಾರು ಮಧ್ಯಂತರ ತೀರ್ಪನ್ನ ಪಾಲನೆ ಮಾಡುವುದಿಲ್ಲವೋ ಅವರ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು, ಎಲ್ಲಾ ರೀತಿಯ ಸಂಬಾಳಿಸುವ ಪ್ರಯತ್ನವನ್ನ ರಾಜ್ಯ ಸರ್ಕಾರ ಮಾಡಿದೆ. ಈಗ ಈ ಸಮಯ ಮುಗಿದಿದೆ. ಹೈಕೋರ್ಟ್ ತೀರ್ಪನ್ನ ಪಾಲನೆ ಮಾಡೋದಿಲ್ಲ ಅಂದರೆ ಇದು ಉದ್ಧಟತನ. ಈ ಉದ್ಧಟತನವನ್ನ ಸರ್ಕಾರ ಸಹಿಸೋದಿಲ್ಲ. ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪನ್ನ ಯಾರು ಪಾಲಿಸೋದಿಲ್ಲವೋ ಅವರನ್ನ ಜೈಲಿಗೆ ಹಾಕಬೇಕು ಎಂದು ಸಚಿವ ಜೋಶಿ ಗರಂ ಆದರು.
ಗೃಹ ಇಲಾಖೆ ವಿಫಲವಾಗಿದೆ ಎಂಬ ಕಾಂಗ್ರೆಸ್ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಒಂದು ಕೊಲೆಯಾಗಿದೆ ಅಂತ ಸರ್ಕಾರ ವಿಫಲವಾಗಿದೆ, ಗೃಹ ಸಚಿವರು ವಿಫಲವಾಗಿದ್ದಾರೆ ಅಂತ ಹೇಳೋದಲ್ಲ. ಇದರ ತನಿಖೆಯನ್ನ ಸಂಪೂರ್ಣವಾಗಿ ಮಾಡಬೇಕು. ತಪ್ಪಿತಸ್ಥರನ್ನ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಅಹೋರಾತ್ರಿ ಧರಣಿ ಮಾಡುತ್ತಿದೆ. ಧರಣಿ ಮಾಡುವ ಹಕ್ಕು ಅವರಿಗೆ ಇದೆ, ಧರಣಿ ಮಾಡಲಿ. ಆದರೆ ಯಾಕೆ ಹೋರಾಟ ಮಾಡುತ್ತಿದ್ದಾರೆ..? ಕಾಂಗ್ರೆಸ್ ಗೆ ಹೈಕೋರ್ಟ್ ತೀರ್ಪಿನ ಬಗ್ಗೆ ಒಂದು ಸ್ಪಷ್ಟತೆ ಇಲ್ಲ. ಹೈಕೋರ್ಟ್ ತೀರ್ಪು ಪಾಲನೆ ಮಾಡಬೇಕಾ, ಮಾಡಬಾರದ ಅನ್ನೋ ಸ್ಪಷ್ಟತೆ ಇಲ್ಲ. ಕಾಂಗ್ರೆಸ್ಗೆ ಇವತ್ತು ಬೇರೆ ಯಾವುದೇ ವಿಷಯ ಇಲ್ಲ. ಅವರಿಗೆ ಹಿಜಾಬ್ ವಿಚಾರದಲ್ಲಿ ಮುಸಲ್ಮಾನರ ಪರವಾಗಿ ಮಾಥನಾಡಬೇಕಾ ಅಥವಾ ವಿರುದ್ಧ ತೆಗೆದುಕೊಳ್ಳಬೇಕಾ ಅನ್ನೋ ಗೊಂದಲದಲ್ಲಿದ್ದಾರೆ. ಕಾಂಗ್ರೆಸ್ ಪಾರ್ಟಿ ರಾಷ್ಟ್ರಮಟ್ಟದಲ್ಲಿ ಒಂದು ಕನ್ಫ್ಯೂಸ್ಡ್ ಪಾರ್ಟಿ, ಕನ್ಫೂಷನ್ ಲೀಡರ್ಸ್. ಈಗ ಇಲ್ಲೂ ಅದೇ ಆಗಿದೆ ಎಂದು ಜೋಶಿ ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಪ್ರತಿದಿನ ಜಗಳವಾಡುತ್ತಿದ್ದಾರೆ. ಕಾಂಗ್ರೆಸ್ ಹೈಕೋರ್ಟ್ ತೀರ್ಮಾನ ಪಾಲನೆ ಮಾಡಬೇಕು ಎಂದು ಬಾಯಿಬಿಟ್ಟು ಹೇಳಲಿ ನೋಡೋಣ. ಹೇಳಿದರೆ ಮುಸ್ಲಿಂ ವೋಟ್ ಕೈತಪ್ಪುತ್ತವೆ ಅನ್ನೋ ಭಯ ಕಾಂಗ್ರೆಸ್ನವರಿಗಿದೆ. ಹಿಜಾಬ್ ವಿಚಾರದಲ್ಲಿ ಅವರ ನಿಲುವು ಏನು ಅನ್ನೋದನ್ನ ಮೊದಲು ತಿಳಿಸಲಿ ಎಂದು ಸವಾಲೆಸೆದರು.