ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿತಂಡವಾದ ಮುಂದಿಡುತ್ತಿರುವುದನ್ನು ನೋಡಿದರೆ ಅವರು ಸಿದ್ದರಾಮಯ್ಯನವರೋ?, ಸುಳ್ಳರಾಮಯ್ಯನವರೋ ಎಂಬ ಅನುಮಾನ ಮೂಡುತ್ತಿದೆ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ.
ನರೇಂದ್ರ ಮೋದಿ ಪ್ರಧಾನಿಯಾಗಿ 8 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿದ ಆರೋಪಗಳನ್ನು ಜೋಶಿ ಖಂಡಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಿದ್ದರಾಮಯ್ಯನವರು, ಅಂಕಿ-ಅಂಶ, ವಾಸ್ತವಗಳನ್ನೇ ಮರೆಮಾಚಿ ಸುಳ್ಳಿನ ಕಂತೆಯಂತಿರುವ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ ಎಂದಿದ್ದಾರೆ.
ಇಡೀ ದೇಶದ ಭದ್ರತೆಯನ್ನು ಯುಪಿಎ ಸರ್ಕಾರ ಮರೆತಿದ್ದಾಗ, ಸಬ್ಸಿಡಿಗಳಿಂದಲೇ ಸಾಲ ಕೂಪದಲ್ಲಿ ಮುಳುಗಿದ್ದಾಗ ದೇಶವನ್ನ ಸರಿದಾರಿಯಲ್ಲಿ ನಡೆಯುವಂತೆ ಮಾಡಿದ್ದು ಇದೇ ಪ್ರಧಾನಿ ನೇತೃತ್ವದ ಎನ್‌ಡಿಎ ಸರ್ಕಾರ. ನಿತ್ಯವೂ ಶತಕೋಟಿ ರೂಪಾಯಿ ಮೊತ್ತದಲ್ಲಿ ಭ್ರಷ್ಟಾಚಾರ, ಹಗರಣಗಳನ್ನೇ ನಡೆಸುತ್ತಿದ್ದ ಯುಪಿಎ ಸರ್ಕಾರ ಕಾಲದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿ ತ್ವರಿತವಾಗಿ ಕಾರ್ಯವೆಸಗುವಂತೆ ಮಾಡಿದ್ದು ನಮ್ಮ ಸರ್ಕಾರದ ಹೆಗ್ಗಳಿಕೆ ಎಂದು ಸಚಿವ ಜೋಶಿ ಸಮರ್ಥಿಸಿಕೊಂಡಿದ್ದಾರೆ.
ಬೇರಾವ ಸರ್ಕಾರಗಳೂ ಅನುದಾನ ಕೊಟ್ಟಿಲ್ಲ: ದೇಶ 21ನೇ ಶತಮಾನದತ್ತ ದಾಪುಗಾಲಿಕ್ಕುತ್ತಿದ್ದರೂ, ಇನ್ನೂ ಬ್ರಿಟಿಷ್ ಕಾಲದ ನೀತಿಗಳು, ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುವ ಕೆಟ್ಟ ಆರ್ಥಿಕ ನೀತಿಗಳನ್ನೇ ಸಿದ್ದರಾಮಯ್ಯ ಅಭಿವೃದ್ಧಿ ಎಂದು ಹೇಳುತ್ತಿದ್ದಾರೆ. ರಾಜ್ಯಕ್ಕೆ ಈಗಿನ ಕೇಂದ್ರ ಸರ್ಕಾರ ಕೊಟ್ಟಷ್ಟು ಅನುದಾನ, ಬೆಂಬಲಗಳನ್ನು ಹಿಂದಿನ ಬೇರಾವ ಸರ್ಕಾರಗಳೂ ಕೊಟ್ಟಿಲ್ಲ ಎಂದು ಜೋಶಿ ತಿಳಿಸಿದ್ದಾರೆ.
ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರಿ ಯೋಜನೆಗಳಲ್ಲಿ ರಾಜ್ಯದ ಬೆಳವಣಿಗೆಯ ಕುರಿತಾಗಿ ಅವರು ಅಂಕಿ ಅಂಶಗಳನ್ನು ತೆರೆದಿಟ್ಟಿದ್ದಾರೆ. ಜೀವನಜ್ಯೋತಿ ಬಿಮಾ ಯೋಜನೆಯಲ್ಲಿ 49.95 ಲಕ್ಷ ನೋಂದಣಿಯಾಗಿದ್ದು, 741.42 ಕೋಟಿ ಕ್ಲೇಮು ಆಗಿದೆ. ಸುರಕ್ಷಾ ಬಿಮಾದಲ್ಲಿ 1.1 ಕೋಟಿ ನೋಂದಣಿಯಾಗಿದ್ದು, 144.12 ಕೋಟಿ ಕ್ಲೇಮು ಆಗಿದೆ. ಹಾಗೆಯೇ ಅಟಲ್ ಪಿಂಚಣಿ ಯೋಜನೆಯಲ್ಲಿ 22.06 ಲಕ್ಷ ಚಂದಾದಾರರಿದ್ದು ಯಶಸ್ವಿ ಯೋಜನೆಯಾಗಿದೆ ಎಂದಿದ್ದಾರೆ.
ಪ್ರಧಾನ ಮಂತ್ರಿ ಜನಧನ್ ಯೋಜನೆ ಆರಂಭಿಸಿದಾಗ ಬಡವರಿಗೆ ಬ್ಯಾಂಕ್ ಖಾತೆ ನಿರ್ವಹಣೆ ಸಾಧ್ಯವೇ..? ಅದರಿಂದೇನು ಪ್ರಯೋಜನ ಎಂದು ಹೀಗಳೆದವರು ಇದೇ ಕಾಂಗ್ರೆಸ್ಸಿಗರು. ಆದರೆ, ಇದು 1.56 ಕೋಟಿ ಖಾತೆಗಳು ಈ ಯೋಜನೆಯಡಿ ತೆರೆಯಲಾಗಿದ್ದು, ಖಾತೆಗಳಲ್ಲಿ 5,821 ಕೋಟಿ ರೂ. ಇದೆ. ಮಹಿಳೆಯರ ಹೆಸರಿನಲ್ಲಿ 87.38 ಲಕ್ಷ ಖಾತೆಗಳಿದ್ದು, ಜನ್‌ಧನ್ ಯೋಜನೆ ಅತ್ಯಂತ ಯಶಸ್ವಿಯಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ಬಡಬಡಿಸುವ ಸಿದ್ದರಾಮಯ್ಯವನರು ಅಂಕಿ-ಅಂಶಗಳನ್ನು ನೋಡುವ ಗೋಜಿಗೆ ಹೋಗಿಲ್ಲ. ಕೇವಲ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಉಚಿತವಾಗಿ ವ್ಯಾಕ್ಸಿನ್ ವಿತರಣೆ: ಕೋವಿಡ್ ಮಹಾಮಾರಿ ಜಗತ್ತನ್ನೇ ನರಳುವಂತೆ ಮಾಡಿದ್ದಾಗ 200 ಕೋಟಿ ವ್ಯಾಕ್ಸಿನ್ಗಳನ್ನು ತನ್ನ ಪ್ರಜೆಗಳಿಗೆ ಉಚಿತವಾಗಿ ನೀಡಿದ್ದು ಭಾರತ ಮಾತ್ರ. ಯುರೋಪ್‌ನ ಹಲವು ರಾಷ್ಟ್ರಗಳ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚು ವ್ಯಾಕ್ಸಿನ್ನ್ನು ಭಾರತ, ತನ್ನ ಪ್ರಜೆಗಳಿಗೆ ಉಚಿತವಾಗಿ ನೀಡಿದೆ. ಕೋವಿಡ್‌ನಂತ ತುರ್ತು ಸಂದರ್ಭದಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಮೂಲಕ ದೇಶದ ಜನರಿಗೆ ಉಚಿತ ಆಹಾರವನ್ನು ಒದಗಿಸುವ ಕೆಲಸವನ್ನೂ ಎನ್‌ಡಿಎ ಸರ್ಕಾರ ಮಾಡಿದೆ. ಹಿಂದೆಂದೂ ಕಂಡು ಕೇಳರಿಯದ ರೀತಿಯ ಅತಿ ಸಂಕೀರ್ಣ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದು ಇದೇ ಮೋದಿ ಸರ್ಕಾರ. ಆದರೆ, ಇದನ್ನು ಸಿದ್ದರಾಮಯ್ಯ ಮರೆತಿದ್ದಾರೆ ಎಂದು ಟೀಕಿಸಿದ್ದಾರೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಅದು ಕರ್ನಾಟಕಕ್ಕೆ ಕೊಟ್ಟ ಕೊಡುಗೆ ಏನು..? ತನ್ನ ಸಾಧನೆ ಏನು..? ಅಂತ ಮೊದಲು ಸಿದ್ದರಾಮಯ್ಯನವರು ಹೇಳಲಿ. ಯುಪಿಎ ಅವಧಿಯಲ್ಲಿ ಒಂದು ಕುಟುಂಬ ಅಭಿವೃದ್ಧಿಯಾಗಿದ್ದು ಬಿಟ್ಟರೆ ಬೇರೇನೂ ಆಗಿಲ್ಲ ಎಂದೂ ಕಿಡಿಕಾರಿದ್ದಾರೆ.
ಜನರೂ ಬುದ್ಧಿವಂತರು: ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿರುವ ಕೇಂದ್ರ ಸರ್ಕಾರವನ್ನು ಪ್ರತಿ ಪಕ್ಷವಾಗಿ ವಿರೋಧಿಸುವುದೇ ನಮ್ಮ ಕೆಲಸ ಎಂಬ ಕಾರಣಕ್ಕೆ ವಿರೋಧಿಸುವ ಚಾಳಿ ಬೇಡ. ಸತ್ಯಾಂಶಗಳನ್ನು ತಿಳಿದುಕೊಳ್ಳದೇ ತಮ್ಮ ಮಗನ ವಯಸ್ಸಿನ ನಕಲಿ ಗಾಂಧಿ, ಅಪ್ರಬುದ್ಧ ರಾಜಕಾರಣಿ ರಾಹುಲ್ ಗಾಂಧಿಯವರನ್ನು ಮೆಚ್ಚಿಸಲು ಸಿದ್ದರಾಮಯ್ಯ ಗುಲಾಮಗಿರಿ ಮಾಡುತ್ತಿದ್ದಾರೆ. ವಿಚಿತ್ರ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಸೇರಿದಂತೆ ಅದರ ನಾಯಕರು ಹೇಳುತ್ತಿರುವ ಸುಳ್ಳುಗಳನ್ನು, ದಾರಿತಪ್ಪಿಸುವ ಹೇಳಿಕೆಗಳನ್ನು ಪರಾಮರ್ಶಿಸುವಷ್ಟು ಈಗ ಜನರು ಬುದ್ಧಿವಂತರಾಗಿದ್ದಾರೆ ಎಂದು ಕೇಂದ್ರ ಸಚಿವ ಜೋಶಿ ಹೇಳಿದ್ದಾರೆ.
ಇದನ್ನೂ ಓದಿ: ಮೋದಿ ಕುರಿತ 'ವರುಷ ಎಂಟು, ಅವಾಂತರಗಳು ನೂರೆಂಟು' ಪುಸ್ತಕ ಬಿಡುಗಡೆಗೊಳಿಸಿದ ಸಿದ್ದರಾಮಯ್ಯ