ಬೆಂಗಳೂರು : ಇಂದು ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿರುವುದರಿಂದ ಸುಗಮ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ಈ ಹಿನ್ನೆಲೆ ಇಂದಿನಿಂದ ನಾಳೆಯವರೆಗೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಂಚಾರಿ ಪೊಲೀಸರು ವಾಹನ ಸವಾರರಲ್ಲಿ ಮನವಿ ಮಾಡಿದ್ದಾರೆ. ಇಂದು ಮಧ್ಯಾಹ್ನ ಟೌನ್ ಹಾಲ್ ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿಯಾಗಲಿದ್ದಾರೆ. ಈ ಕಾರಣದಿಂದ ಇಲ್ಲಿನ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಪರ್ಯಾಯ ಮಾರ್ಗ ಬಳಸಲು ಮನವಿ : ಇನ್ನು ಬಳ್ಳಾರಿ ರಸ್ತೆ, ಮೇಖ್ರಿ ಸರ್ಕಲ್, ಕಾವೇರಿ ಥಿಯೇಟರ್ ಜಂಕ್ಷನ್, ರೇಸ್ ಕೋರ್ಸ್, ಟೌನ್ ಹಾಲ್, ತಾಜ್ ವೆಸ್ಟ್ ಎಂಡ್, ಲಾಲ್ ಬಾಗ್ ರಸ್ತೆ, ಮಿನರ್ವ ಸರ್ಕಲ್, ಜೆಸಿ ರಸ್ತೆ, ಎನ್ ಆರ್ ಸರ್ಕಲ್, ಮೈಸೂರು ಬ್ಯಾಂಕ್, ಪ್ಯಾಲೇಸ್ ರಸ್ತೆ, ಸಿಐಡಿ ಜಂಕ್ಷನ್, ಬಸವೇಶ್ವರ ಜಂಕ್ಷನ್, ಅಲಿ ಅಸ್ಕರ್ ರಸ್ತೆ, ಇನ್ ಪ್ಯಾಂಟ್ರಿ ರಸ್ತೆ, ಕಾಫಿ ಬೋರ್ಡ್ ಜಂಕ್ಷನ್, ಮಣಿಪಾಲ್ ಜಂಕ್ಷನ್, ಎಂ.ಜಿ ರಸ್ತೆ, ಟ್ರಿನಿಟಿ ಸರ್ಕಲ್, ಇಂದಿರಾನಗರ 100 ಅಡಿ ರಸ್ತೆ, ಕಮಾಂಡ್ ಹಾಸ್ಪಿಟಲ್, ದೊಮ್ಮಲೂರು ಹೆಚ್ ಎಎಲ್ ಏರ್ಪೋರ್ಟ್ ರಸ್ತೆಯಲ್ಲಿ ವಾಹನ ನಿಲುಗಡೆ ನಿರ್ಬಂಧಿಸಲಾಗಿದೆ. ವಾಹನ ಸವಾರರಿಗೆ ಸಾಧ್ಯವಾದಷ್ಟು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಟ್ರಾಫಿಕ್ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
ಬಳ್ಳಾರಿಗೆ ಆಗಮಿಸಲಿರುವ ಅಮಿತ್ ಶಾ : ಗುರುವಾರ ಬೆಳಗ್ಗೆ 10 ಗಂಟೆಗೆ ದೆಹಲಿ ನಿವಾಸದಿಂದ ರಸ್ತೆ ಮೂಲಕ ಏರ್ಪೋರ್ಟ್ ಗೆ ಪ್ರಯಾಣಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ 10:15ಕ್ಕೆ ವಾಯುಪಡೆ ವಿಶೇಷ ವಿಮಾನದ ಮೂಲಕ ರಾಜ್ಯಕ್ಕೆ ಬರಲಿದ್ದಾರೆ. 12:50ಕ್ಕೆ ಹುಬ್ಬಳ್ಳಿ ಏರ್ಪೋರ್ಟ್ ತಲುಪಲಿದ್ದು, 12:55ಕ್ಕೆ ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ ಮೂಲಕ ಸಂಡೂರಿಗೆ ಪ್ರಯಾಣಿಸಲಿದ್ದಾರೆ. ಮಧ್ಯಾಹ್ನ 1:25ಕ್ಕೆ ಸಂಡೂರು ಹೆಲಿಪ್ಯಾಡ್ ತಲುಪಲಿದ್ದಾರೆ. 1:30 ಕ್ಕೆ ಹೆಲಿಪ್ಯಾಡ್ ನಿಂದ ರಸ್ತೆ ಮೂಲಕ ಇಲ್ಲಿನ ಸಾರ್ವಜನಿಕ ಸಮಾವೇಶದ ಸ್ಥಳಕ್ಕೆ ತೆರಳಲಿರುವರು. ಮಧ್ಯಾಹ್ನ 1:30 ರಿಂದ 2:30 ರವರೆಗೆ ಬಿಜೆಪಿ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದು, ಸುಮಾರು 2 ಲಕ್ಷ ಜನರು ಸಮಾವೇಶದಲ್ಲಿ ಸೇರುವ ಸಾಧ್ಯತೆ ಇದೆ ಬಿಜೆಪಿ ನಾಯಕರು ಹೇಳಿದ್ದಾರೆ.
ರಾಜ್ಯ ಬಿಜೆಪಿ ನಾಯಕರ ಜೊತೆ ಮಹತ್ವದ ಸಭೆ : ಮಧ್ಯಾಹ್ನ 2:30ಕ್ಕೆ ಸಂಡೂರಿನಿಂದ ತೋರಣಗಲ್ನ ಖಾಸಗಿ ಹೋಟೆಲ್ಗೆ ಅಮಿತ್ ಶಾ ತೆರಳಲಿದ್ದಾರೆ. ಬಳಿಕ ಮಧ್ಯಾಹ್ನ 3 ಗಂಟೆಗೆ ಬಳ್ಳಾರಿ, ಕೊಪ್ಪಳ, ವಿಜಯನಗರ, ರಾಯಚೂರು ಜಿಲ್ಲೆಗಳ ನಾಯಕರ ಜೊತೆಗಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸುಮಾರು 1 ಗಂಟೆ ಬಿಜೆಪಿ ನಾಯಕರ ಜತೆಗೆ ಅಮಿತ್ ಶಾ ಸಭೆ ನಡೆಸಲಿದ್ದು, ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. 4 ಜಿಲ್ಲೆಯ ಜಿಲ್ಲಾಧ್ಯಕ್ಷರು, ಪ್ರಮುಖ ನಾಯಕರು ಸಭೆಯಲ್ಲಿರಲಿದ್ದಾರೆ.
ಇದನ್ನೂ ಓದಿ : ನಾಳೆ ಬಳ್ಳಾರಿಗೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ.. ರಾಜ್ಯ ನಾಯಕರೊಂದಿಗೆ ಮಹತ್ವದ ಸಭೆ