ಬೆಂಗಳೂರು: ಕಾಟಾಚಾರಕ್ಕೆ ಹನ್ನೊಂದು ಬಾರಿ ಕೇಂದ್ರ ಸರ್ಕಾರ ರೈತರ ಜೊತೆ ಸಭೆ ಮಾಡಿದೆ. ಒಂದು ಬಾರಿಯೂ ಮೋದಿ ರೈತರ ಜೊತೆ ಮಾತನಾಡಲಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬೆಂಗಳೂರಿನ ತಮ್ಮ ಸರ್ಕಾರಿ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಮೋದಿ ಪ್ರತಿಷ್ಠೆಗೆ ಬಿದ್ದಿದ್ದಾರೆ. ಅಂಬಾನಿ, ಅದಾನಿಗೆ ಮಾತು ಕೊಟ್ಟಿದ್ದಾರೆ. ಹೀಗಾಗಿ ಕಾಯ್ದೆ ವಾಪಸ್ ಪಡೆಯುತ್ತಿಲ್ಲ. ಕೇಂದ್ರ ಸರ್ಕಾರದ ಇಂಟೆಲಿಜೆನ್ಸ್ ಏನ್ ಮಾಡ್ತಿತ್ತು. ಇವರ ಇಂಟೆಲಿಜೆನ್ಸ್ ವೀಕ್ ಆಗಿದೆ ಎಂದು ಆರೋಪಿಸಿದರು.
ಪ್ರಧಾನಿ ಮೋದಿ ಒಂದು ಬಾರಿಯಾದರೂ ರೈತರ ಜೊತೆಗೆ ಮಾತಾಡಿದ್ದಾರಾ? ಪ್ರಧಾನಿಯಾಗಿ ಪ್ರತಿಷ್ಠೆಗೆ ತಗೊಂಡಿದ್ದಾರೆ. 56 ಇಂಚಿನ ಎದೆ ಇದ್ದರೆ ಸಾಲದು , ಹೃದಯ ಇರಬೇಕು, ಜನರ ಕಣ್ಣೀರನ್ನು ಒರೆಸುವ ಮನಸ್ಸು ಇರಬೇಕು. ಅದಾನಿ, ಅಂಬಾನಿ ಡಿಕ್ಟೆಟ್ ಮಾಡಿ ಈ ಕಾಯಿದೆ ಮಾಡಿಸಿದ ಹಾಗೆ ಇದೆ ಎಂದರು.
ಬಿ ಸಿ ಪಾಟೀಲ್ ರೈತರ ಭಯೋತ್ಪಾದಕರು ಎಂದ ವಿಚಾರ ಮಾತನಾಡಿ, ಬಿ ಸಿ ಪಾಟೀಲ್ ಬೇಜವಾಬ್ದಾರಿಯಿಂದ ಮಾತಾಡಬಾರದು. ಸರ್ಕಾರ ಹತಾಸೆಯಿಂದ ಹೇಳಿರುವ ಮಾತು ಅದು. ಗುಪ್ತಚರ ಇಲಾಖೆ ಇವರ ಬಳಿ ಇದೆ. ಗುಪ್ತಚರ ಇಲಾಖೆ ಏನು ಮಾಡುತ್ತಿದೆ. ಯಾರು ಭಯೋತ್ಪಾದಕರು ಎಂದು ಹೇಳಲಿ. ಖಲಿಸ್ತಾನದವರು ಯಾರು ಅಂತ ಹೇಳಲಿ. ಖಲಿಸ್ತಾನ್ನಿಂದ ಯಾರು ಬಂದಿದ್ರು ಅಂತ ಹೇಳಲಿ. ಬಾಯಿಗೆ ಬಂದ ಹಾಗೆ ಮಾತನಾಡಬಾರದು. ಇದು ಸರ್ಕಾರದ ವೈಫಲ್ಯದ ವಿರುದ್ಧ ಕಿಡಿಕಾರಿದರು.
ಇಂದು ಶಿವಮೊಗದಲ್ಲಿ ಸ್ಫೋಟ ನಡೆದ ಸ್ಥಳಕ್ಕೆ ಹೋಗ್ತೀನಿ. ಅಲ್ಲಿ ಆರು ಜನ ಸತ್ತಿದ್ದಾರೆ, ಸರ್ಕಾರದ ನೆಗ್ಲಿಜೆನ್ಸ್ ಇದೆ. ಹೀಗಾಗಿ ಸ್ಥಳಕ್ಕೇ ಹೋಗಿ ಪರಿಶೀಲಿಸುವೆ. ಕ್ರಷರ್ ಲೈಸೆನ್ಸ್ ಇರೋರಿಂದ ಕೂಡ ನೆಗ್ಲಿಜೆನ್ಸ್ ಆಗಿದೆ. ಅಧಿವೇಶನದಲ್ಲಿ ಸ್ಫೋಟದ ವಿಚಾರ ಪ್ರಸ್ತಾಪಿಸುವೆ. ಯಾಕೆ ಅನುಮಾನಾನಾ..? ಎಂದು ಕೇಳಿದರು.
ಇನ್ನು ಸಭಾಪತಿ ಆಯ್ಕೆ ವಿಚಾರ ಮಾತನಾಡಿ, ಜೆಡಿಎಸ್ ಸೆಕ್ಯುಲರ್ ಬಣ್ಣ ಬಯಲಾಗಿದೆ ಎಂದಷ್ಟೇ ಹೇಳಿದರು.