ಬೆಂಗಳೂರು : ಮೇ 3ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಅಂದು ಮಧ್ಯಾಹ್ನ ಮುಖ್ಯಮಂತ್ರಿಗಳ ಸರ್ಕಾರಿ ನಿವಾಸದಲ್ಲಿ ಭೋಜನ ಮಾಡಲಿದ್ದಾರೆ. ಇದೇ ವೇಳೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಅಮಿತ್ ಶಾ ಪ್ರವಾಸದ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಮೇ 3ರ ಬೆಳಗ್ಗೆ 10ಕ್ಕೆ ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿರುವ ಬಸವಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. 10.30ಕ್ಕೆ ಆರ್‌ಬಿಐ ಎದುರು ನೃಪತುಂಗ ವಿವಿಗೆ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ. ಬಳಿಕ ಬಳ್ಳಾರಿಯಲ್ಲಿನ ಫೊರೆನ್ಸಿಕ್ ಲ್ಯಾಬ್‌ನ ವರ್ಚುವಲ್ನಲ್ಲಿ ಉದ್ಘಾಟಿಸಲಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಯಲಹಂಕದಲ್ಲಿ ಕೇಂದ್ರದ ಗೃಹ ಸಚಿವಾಲಯದ ಡಿಆರ್ಸಿ ಕೇಂದ್ರದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 2 ಗಂಟೆಯಿಂದ 3ರವರೆಗೆ ಸಿಎಂ ಅವರ ಸರ್ಕಾರಿ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಅಮಿತ್ ಶಾ ಮಧ್ಯಾಹ್ನದ ಭೋಜನ ಮಾಡಲಿದ್ದಾರೆ.
ಸಂಜೆ 4-5 ಗಂಟೆ ವೇಳೆಗೆ ಬಿಜೆಪಿ ಕಚೇರಿಗೆ ಗೃಹ ಸಚಿವರು ಭೇಟಿ ನೀಡಲಿದ್ದಾರೆ. ಸಂಜೆ 5.30ರಿಂದ 7 ಗಂಟೆ ಸಮಯದಲ್ಲಿ ಖೇಲೋ ಇಂಡಿಯಾ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ 8.15ರ ವೇಳೆಗೆ ಹೆಚ್ಎಎಲ್ ಮೂಲಕ ಶಾ ವಿಶೇಷ ವಿಮಾನದಲ್ಲಿ ದೆಹಲಿಗೆ ವಾಪಸಾಗಲಿದ್ದಾರೆ.
ಭೋಜನದ ವೇಳೆ ಸಂಪುಟ ವಿಸ್ತರಣೆ ಚರ್ಚೆ : ಸಿಎಂ ನಿವಾಸದಲ್ಲಿ ಭೋಜನದ ವೇಳೆ ಸಂಪುಟ ವಿಸ್ತರಣೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಇದೇ ವೇಳೆ ರಾಜ್ಯದಲ್ಲಿನ ಪ್ರಸ್ತುತ ಬೆಳವಣಿಗೆ, ಸಂಪುಟ ವಿಸ್ತರಣೆ ಮಾಡಬೇಕೋ?, ಪುನಾರಚಿಸಬೇಕೋ ಎಂಬ ಬಗ್ಗೆ ಸಮಾಲೋಚನೆ ನಡೆಯಲಿದೆ. ಈ ವೇಳೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ದೆಹಲಿಗೆ ಹೋಗ್ತಾ ಇದೀನಿ, ಚೀಫ್ ಜಸ್ಟೀಸ್ ಜೊತೆ ಸಂವಾದ ಇದೆ ಎಂದ ಸಿಎಂ.. ಸಚಿವಾಕಾಂಕ್ಷಿಗಳಿಗೆ ನಿರಾಶೆ!?