ಬೆಂಗಳೂರು: ನಗರದಲ್ಲಿ ಸಂಘಟಿತ ಹಾಗೂ ಅಸಂಘಟಿತ ವಲಯದ ಕೆಲ ಕಾರ್ಮಿಕರು ಕೆಂಪು ಬಾವುಟ ಹಾರಿಸಿ ಕಾರ್ಮಿಕರ ದಿನಾಚರಣೆ ಆಚರಿಸಿದ್ದಾರೆ. ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (CITU) ಹಾಗೂ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (AICCTU) ಸದಸ್ಯರು ತಮ್ಮ ಕೆಲಸದ ಜಾಗದಲ್ಲಿ ಫಲಕಗಳನ್ನು ಪ್ರದರ್ಶಿಸಿ ಕಾರ್ಮಿಕರ ದಿನಾಚರಣೆ ಆಚರಿಸಿದರು.
ಸಿಐಟಿಯು ಕರ್ನಾಟಕದ ಅಧ್ಯಕ್ಷ್ಯೆ ಎಸ್.ವರಲಕ್ಷ್ಮಿ ಮಾತನಾಡಿ, 134ನೇ ಕಾರ್ಮಿಕ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು. ಕಾರ್ಮಿಕ ದಿನಾಚರಣೆ ಸಾಕಷ್ಟು ಕ್ರಾಂತಿಕಾರಿ ಹಿನ್ನೆಲೆ, ತ್ಯಾಗ ಬಲಿದಾನಗಳನ್ನು ಒಳಗೊಂಡಿದೆ. ಕೊರೊನಾ ಹಿನ್ನೆಲೆ ಮನೆಗಳಲ್ಲಿಯೇ ಮೇ ದಿನಾಚರಣೆ ಆಚರಿಸಿದ್ದಾರೆ ಎಂದರು.
ಲಾಕ್ಡೌನ್ ಜಾರಿ ಮಾಡಿ 38 ದಿನಗಳು ಕಳೆದಿವೆ. ದಿನನಿತ್ಯದ ಕೂಲಿಯಿಂದ ಬದುಕುತ್ತಿದ್ದ ಅಸಂಘಟಿತ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ಕೃಷಿ ಕಾರ್ಮಿಕರು ವಲಸೆ ಕಾರ್ಮಿಕರು ಅತ್ಯಂತ ಕಷ್ಟಕ್ಕೆ ಒಳಪಟ್ಟಿದ್ದಾರೆ. ದೇಶದ ಜಿಡಿಪಿಗೆ ಶೇ. 66ರಷ್ಟು ಆದಾಯದ ಮೂಲ ಕೊಡುವ ಅಸಂಘಟಿತ ಕ್ಷೇತ್ರ ಇಂದು ಬರಿಗೈಯಲ್ಲಿ ಪರದಾಡುವಂತಾಗಿದೆ.
ಆಟೋ, ಟ್ಯಾಕ್ಸಿ, ಸಾರಿಗೆ ವಿಭಾಗದ ಕಾರ್ಮಿಕರು ಕೂಡಾ ಕೆಲಸ ಇಲ್ಲದೆ ಕುಳಿತಿದ್ದಾರೆ. ಕೇಂದ್ರ ಸರ್ಕಾರ ಕಾರ್ಮಿಕರ ಕೈ ಹಿಡಿಯಬೇಕು. ಆದ್ರೆ ಕೇಂದ್ರ ಸರ್ಕಾರ ವಿಶೇಷವಾದ ಪ್ಯಾಕೇಜ್ ಘೋಷಣೆ ಮಾಡಿಲ್ಲ. ಕೇವಲ ಕಟ್ಟಡ ಕಾರ್ಮಿಕರಿಗೆ 1 ತಿಂಗಳಿಗೆ ಮಾತ್ರ 2 ಸಾವಿರ ರೂಪಾಯಿ ಘೋಷಣೆ ಮಾಡಿದ್ದಾರೆ. ಆದ್ರೆ ಬೇರೆ ಕ್ಷೇತ್ರದ ಕಾರ್ಮಿಕರಿಗೆ ಪರಿಹಾರ ನೀಡಿಲ್ಲ. ಕಾರ್ಮಿಕರು ಬದುಕು ನಡೆಸಲು ತಿಂಗಳಿಗೆ 7,500 ರೂಪಾಯಿಯಾದರೂ ಕೇಂದ್ರ ಸರ್ಕಾರ ಘೋಷಣೆ ಮಾಡಬೇಕು.
ಆದ್ರೆ ದೇಶದ ಶ್ರೀಮಂತರು, ಉದ್ಯಮಿಗಳ ಸಾಲ ಮನ್ನಾ ಮಾಡಿದೆ. ಸುಮಾರು 60 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ನಾಡು ಕಟ್ಟುವ ಕಾರ್ಮಿಕರಿಗೆ ಸರ್ಕಾರ ಸಹಾಯ ಮಾಡಲೇಬೇಕು. ಕಾರ್ಖಾನೆಯ ಕಾರ್ಮಿಕರಿಗೆ ವೇತನ ಕೊಟ್ಟಿಲ್ಲ. ಎಲ್ಲಾ ಗುತ್ತಿಗೆ, ಹೊರ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆಯದೆ ಸಂಬಳ ನೀಡಬೇಕು. ಕೊರೊನಾ ತಡೆಗೆ ದುಡಿಯುತ್ತಿರುವವರಿಗೆ ಲಾಲ್ ಸಲಾಂ ಹೇಳುತ್ತೇವೆ ಎಂದರು.