ಬೆಂಗಳೂರು: ಕಳೆದ ಒಂಬತ್ತು ವರ್ಷಗಳಿಂದ ಕೇಂದ್ರ ಸರ್ಕಾರ ಸಿಬಿಐ, ಐಟಿ ಹಾಗೂ ಇಡಿ ಸಂಸ್ಥೆಗಳನ್ನು ದ್ವೇಷದ ರಾಜಕಾರಣಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಲಕ್ಷ್ಮಣ್ ತಿಳಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕೇಂದ್ರ ಸರ್ಕಾರ ತನ್ನ ಪ್ರತಿಪಕ್ಷಗಳ ಪ್ರಬಲ ನಾಯಕರನ್ನು ನಿಯಂತ್ರಿಸಲು ಬಿಜೆಪಿ ಆರ್ಎಸ್ಎಸ್ ನಾಯಕರನ್ನು ಕಳುಹಿಸಿ, ಸಂದಾನ ಮಾಡಿಸಿ ಪಕ್ಷ ಸೇರುವಂತೆ ಆಹ್ವಾನಿಸುತ್ತಾರೆ, ಅದಕ್ಕೆ ಒಪ್ಪದಿದ್ದರೆ ಈ ಸಂಸ್ಥೆಗಳ ಮೂಲಕ ದಾಳಿ ಮಾಡಿಸಲಾಗುವುದು ಎಂದು ಹೇಳುತ್ತಾರೆ. ಇತ್ತೀಚಿಗೆ ನಡೆದ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ 25 ದಿನಗಳ ಅವಧಿಯಲ್ಲಿ 107 ದಾಳಿಗಳು ನಡೆದಿವೆ ಎಂದು ಹೇಳಿದರು.
ಡಿ.ಕೆ. ಶಿವಕುಮಾರ್ ಮೇಲೆ 17 ಬಾರಿ ಐಟಿ ಮತ್ತು ಇಡಿ ಅಧಿಕಾರಿಗಳು ನೊಟೀಸ್ ನೀಡಿದ್ದಾರೆ. ಇತ್ತೀಚೆಗೆ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ಮಾಡಿರುವುದು ಟಿ.ಜೆ ಅಬ್ರಾಹಂ ಎಂಬುವವರು ಮೂರುವರೆ ವರ್ಷಗಳ ಹಿಂದೆ ಲೋಕಾಯುಕ್ತಕ್ಕೆ ನೀಡಿದ್ದ ದೂರನ್ನು ಯಡಿಯೂರಪ್ಪನವರ ಮೂಲಕ ಸಿಬಿಐಗೆ ತನಿಖೆಗಾಗಿ ವರ್ಗಾವಣೆ ಮಾಡಿಸಿದ್ದರು. ಈಗ ಇದ್ದಕ್ಕಿದ್ದಂತೆ ಮತ್ತೆ ಆರಂಭಿಸಿದ್ದಾರೆ.
ಮುಂದಿನ ದಿನಗಳಲ್ಲಿ ಶಿವಕುಮಾರ್ ಅವರ ಮೇಲೆ ನಿರಂತರವಾಗಿ ದಾಳಿ ನಡೆಯಲಿದೆ. ಇಡಿ, ಐಟಿ, ಸಿಬಿಐ ಹಾಗೂ ಎನ್ಐಎ ಕಾರ್ಯವ್ಯಾಪ್ತಿಯೇ ಬೇರೆ. ಆದರೂ ಒಂದೇ ಪ್ರಕರಣದಲ್ಲಿ ಈ ಮೂರು ಸಂಸ್ಥೆಗಳು ಪದೇ ಪದೆ ದಾಳಿ ಮಾಡುತ್ತಲೇ ಇವೆ. ಈ ಅಧಿಕಾರಿಗಳು ಅಧಿಕೃತವಾಗಿ ಎಲ್ಲಿಯೂ ಮಾಹಿತಿ ನೀಡುವುದಿಲ್ಲ. ಬಹಳ ಪ್ರಮುಖ ದಾಖಲೆ ವಶಪಡಿಸಿಕೊಂಡಿದ್ದಾರೆ ಎಂದು ಹೇಳುತ್ತಾರೆ.
ಬಿಜೆಪಿಯ ಕುತಂತ್ರದ ಬಗ್ಗೆ ಅವರೇ ನೀಡಿರುವ ಮಾಹಿತಿ ಪ್ರಕಾರ 2014 ರಿಂದ 2022ರ ಅವಧಿಯಲ್ಲಿ ಒಟ್ಟು 124 ರಾಜಕೀಯ ನಾಯಕರು ಸಿಬಿಐ ದಾಳಿ, ತನಿಖೆಗೆ ಒಳಗಾಗಿದ್ದಾರೆ. ಇದರಲ್ಲಿ 118 ನಾಯಕರು ವಿರೋಧ ಪಕ್ಷದ ನಾಯಕರು. ಇಬ್ಬರು ಬಿಜೆಪಿಯೇತರ, ಇಬ್ಬರು ಬಿಜೆಪಿಯಲ್ಲಿ ಗುರುತಿಸಿಕೊಂಡವರು. ಬಿಜೆಪಿಯ ಯಾವುದೇ ಪ್ರಮುಖ ನಾಯಕರ ಮೇಲೆ ದಾಳಿ ನಡೆದಿಲ್ಲ ಎಂದು ಹೇಳಿದರು. ಇಲ್ಲಿ ದಾಳಿಯ ಶೇಕಡಾವಾರು ಪ್ರಮಾಣ ನೋಡುವುದಾದರೆ, 96%ರಷ್ಟು ವಿರೋಧ ಪಕ್ಷದವರಾಗಿದ್ದಾರೆ.
ಇನ್ನು ಇಡಿ ದಾಳಿ ಪ್ರಕಾರ ಇದುವರೆಗೂ ಈ ಸಂಸ್ಥೆಯಲ್ಲಿ 5400 ಪ್ರಕರಣ ದಾಖಲಾಗಿದ್ದು, ಇದುವರೆಗೂ ಅಪರಾಧಿಗಳು ಎಂದು ಘೋಷಣೆ ಮಾಡಿರುವವರು ಕೇವಲ 23. ಆ ಮೂಲಕ ಶೇ 0.3ಗಿಂತ ಕಡಿಮೆ ಪ್ರಮಾಣದಲ್ಲಿ ಅಪರಾಧಿಗಳ ಘೋಷಣೆಯಾಗಿದೆ. ಇಡಿಯನ್ನು ಯಾವ ಕಾರಣಕ್ಕೆ ಬಳಸಿಕೊಳ್ಳುತ್ತಿದ್ದೀರಿ. ಉಳಿದ ಪ್ರಕರಣಗಳನ್ನು ಬ್ಲಾಕ್ಮೇಲೆ ಮಾಡಲು ಉಳಿಸಿಕೊಂಡಿದ್ದಾರೆ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲೇ ಬೇಕು ಎಂದು ಪಣತೊಟ್ಟಿದ್ದಾರೆ. ಆದರೆ ಜನ ಇವರನ್ನು ಕಿತ್ತಾಕಿ ಕಾಂಗ್ರೆಸ್ ಸರ್ಕಾರ ತರಲು ನಿರ್ಧಾರ ಮಾಡಿದ್ದಾರೆ. ಇವರ ಪ್ರಯತ್ನ ನಡೆಯುವುದಿಲ್ಲ, ಮೈಸೂರಿನಲ್ಲಿ ಶ್ರೀನಿವಾಸ್ ಪ್ರಸಾದ್ ಅವರು ಹೆಚ್.ವಿಶ್ವನಾಥ್ ವಿರುದ್ಧ ನೇರ ಆರೋಪ ಮಾಡಿ ಚುನಾವಣೆ ಸಮಯದಲ್ಲಿ ನಿಮಗೆ 15 ಕೋಟಿ ನೀಡಲಾಗಿತ್ತು. ಅದರಲ್ಲಿ ಕೇವಲ 4-5 ಕೋಟಿ ಖರ್ಚು ಮಾಡಿದ್ದೀರಿ ಎಂದು ಹೇಳಿದ್ದಾರೆ.
17 ಬಂಡಾಯ ಶಾಸಕರಿಗೆ ತಲಾ 15 ಕೋಟಿ ಎಂದು ಲೆಕ್ಕ ಹಾಕಿದರೂ 350 ಕೋಟಿ ಹಣವನ್ನು ಬಳಸಿಕೊಳ್ಳಲಾಗಿದೆ. ಈ ಬಗ್ಗೆ ಐಟಿ, ಇಡಿ ಸುಮೋಟೋ ಪ್ರಕರಣ ಯಾಕೆ ದಾಖಲಿಸಿಲ್ಲ? ಈ ಸಂಸ್ಥೆಗಳು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿವೆ, ಕೆಲ ದಿನಗಳ ಹಿಂದೆ ಪ್ರತಾಪ್ ಸಿಂಹ ನೀಡಿರುವ ಹೇಳಿಕೆ ಬಗ್ಗೆ ಯಾಕೆ ಸುಮೋಟೋ ಪ್ರಕರಣ ದಾಖಲಿಸುತ್ತಿಲ್ಲ? ಎಂದು ಪ್ರಶ್ನಿಸಿದರು.
ಈ ವಿಚಾರವಾಗಿ ಪರಿಷತ್ನಲ್ಲಿ ಚರ್ಚೆ ಮಾಡಲು ಅವಕಾಶ ನೀಡುತ್ತಿಲ್ಲ ಯಾಕೆ? ಉಪಕುಲಪತಿಗಳ ನೇಮಕಾತಿ ವಿಚಾರವಾಗಿ ರಾಜ್ಯದಲ್ಲಿ 35 ವಿವಿಗಳಿದ್ದು ಒಂದೊಂದು ವಿವಿಯ ಉಪಕುಲಪತಿ ನೇಮಕಾತಿ ವಿಚಾರವಾಗಿ ಅವರದೇ ಪಕ್ಷದ ನಾಯಕರೇ ಹೇಳುತ್ತಿದ್ದಾರೆ. ಇವರ ನೇಮಕ ಮಾಡುವವರು ರಾಜ್ಯಪಾಲರು. ಕೆಸೆಟ್ ಸೇರಿದಂತೆ ಪ್ರತಿ ನೇಮಕಾತಿಯಲ್ಲೂ ಅಕ್ರಮ ನಡೆದಿದೆ.
ಕೆಪಿಸಿಸಿ ವಕ್ತಾರ ರಮೇಶ್ ಬಾಬು ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೇಕಾರ ಸಮುದಾಯಕ್ಕೆ ಒಂದು ಯೋಜನೆ ಘೋಷಣೆ ಮಾಡಿ ಕೇಂದ್ರ ಸರ್ಕಾರದ ನೇರ ಹಣ ವರ್ಗಾವಣೆ (ಡಿಬಿಟಿ) ಮೂಲಕ ಸಹಾಯಧನ ನೀಡುವುದಾಗಿ ತಿಳಿಸಿದ್ದಾರೆ. ಮೋದಿ ಅವರ ಸರ್ಕಾರ ಹಣ ದುರ್ಬಳಕೆ ಆಗಬಾರದು ಎಂದು ಈ ಯೋಜನೆ ತರುತ್ತಿದ್ದು, ಹಂತಹಂತವಾಗಿ ಎಲ್ಲ ಇಲಾಖೆಗೆ ಇದನ್ನು ಜಾರಿಗೆ ತರಲಾಗುವುದು ಎಂದು ಹೇಳಿದ್ದರು.
ದುರಂತ ಎಂದರೆ, ಕಳೆದ 3 ವರ್ಷಗಳಿಂದ ಅಂದರೆ 2019-20 ರಿಂದ ಡಿಬಿಟಿ ಮೂಲಕ ಫಲಾನುಭವಿಗಳಿಗೆ ಹಣ ತಲುಪುತ್ತಿಲ್ಲ. ಇದು ಕಾಂಗ್ರೆಸ್ ಪಕ್ಷದ ಹೇಳಿಕೆ ಅಲ್ಲ. ಲೆಕ್ಕಪರಿಶೋಧಕರ ಇಲಾಖೆ ಪ್ರತಿ ವರ್ಷ ಮಾರ್ಚ್ನಲ್ಲಿ ಮಾಡುವ ಆಡಿಟ್ ವರದಿಯಲ್ಲಿ ತಿಳಿಸಿದೆ. ಇಲ್ಲಿ ಅಕ್ರಮ ನಡೆದಿದ್ದು, ಕೋಟ್ಯಂತರ ರೂಪಾಯಿ ಹಣ ದುರ್ಬಳಕೆಯಾಗಿದೆ.
ದಲಿತರು, ರೈತರು, ಅಲ್ಪಸಂಖ್ಯಾತರಿಗೆ, ಕಾರ್ಮಿಕರಿಗೆ ಆಯಾ ಇಲಾಖೆ ಮೂಲಕ ಸಿಗಬೇಕಾದ ಹಣ ಪಾವತಿ ಆಗದೆ ಸುಳ್ಳು ಅಂಕಿ ಅಂಶ ನೀಡಿದ್ದಾರೆ ಎಂದು ತಿಳಿಸಿದೆ. ಪ್ರಮುಖವಾಗಿ ಮೂರು ಇಲಾಖೆ ಅಂಕಿ ಅಂಶಗಳನ್ನು ನೀಡಲಾಗಿದೆ.
ಇನ್ನು ಕೃಷಿ ಇಲಾಖೆ ವರದಿ ಪ್ರಕಾರ ರೈತಸಿರಿ ಯೋಜನೆಯಲ್ಲಿ ಸಿರಿಧಾನ್ಯ ಬೆಳೆಯಲು ಪ್ರತಿ ಹೆಕ್ಟೇರ್ಗೆ ವಾರ್ಷಿಕ 10 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು. ಈ ಹಣ ಡಿಬಿಟಿ ಮೂಲಕ ರೈತರಿಗೆ ತಲುಪಬೇಕಿತ್ತು. ಆದರೆ ಇಲ್ಲಿ ಇದನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. 5516 ಫಲಾನುಭವಿಗಳಿಗೆ ಹಣ ಪಾವತಿ ಮಾಡಿಲ್ಲ ಎಂದು ಹೇಳಿದರು.
ಇನ್ನು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಪ್ರತಿ ಮೂರು ತಿಂಗಳಿಗೆ ಕೇಂದ್ರ ಸರ್ಕಾರ ನೇರವಾಗಿ ರೈತರ ಖಾತೆಗೆ ಹಣ ನೀಡುತ್ತದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ನಾಲ್ಕು ಸಾವಿರ ಹಣವನ್ನು 2 ಸಾವಿರದಂತೆ ಎರಡು ಕಂತಿನಲ್ಲಿ ನೀಡಲಾಗುವುದು. ದುರಂತ ಎಂದರೆ ರಾಜ್ಯದಲ್ಲಿ 92 ಕೋಟಿಯಷ್ಟು ಹಣ ರೈತರಿಗೆ ಪಾವತಿಯಾಗಿಲ್ಲ, 2019-20ರಲ್ಲಿ 2.29 ಲಕ್ಷ ಫಲಾನುಭವಿಗಳಿಗೆ 45.09 ಕೋಟಿ ಪಾವತಿ ಮಾಡದೇ ಮೋಸ ಮಾಡಿದ್ದಾರೆ.
2020-21ರಲ್ಲಿ 2.30 ಲಕ್ಷ ಫಲಾನುಭವಿಗಳಿಗೆ 46.04 ಕೋಟಿ ಧೋಖಾ ಮಾಡಿದ್ದಾರೆ 4.60 ಲಕ್ಷಕ್ಕೂ ಹೆಚ್ಚಿನ ಫಲಾನುಭವಿಗಳಿಗೆ ಹಣ ತಲುಪಿಲ್ಲ. ಇಲ್ಲಿ ಅವ್ಯವಹಾರವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದು ಕೇವಲ 4 ಇಲಾಖೆ ವಿಚಾರ ಮಾತ್ರ. ಒಟ್ಟು 48 ಇಲಾಖೆಗಳಿದ್ದು, ಇಲ್ಲಿ ರೈತರಿಗೆ, ದಲಿತರು, ಕಾರ್ಮಿಕರಿಗೆ ಹಣ ತಲುಪಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ; ವಾದ್ರಾ ಅರ್ಜಿ ತಿರಸ್ಕೃತ, ಬಂಧನ ಭೀತಿ