ಬೆಂಗಳೂರು: ರೈತರ ಪ್ರತಿಭಟನೆ ವಿಚಾರದಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರುತ್ತಿರುವುದು ಸರಿಯಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನೇಗಿಲು ಹಿಡಿದು ಉಳುಮೆ ಮಾಡುತ್ತಿದ್ದ ಮಣ್ಣಿನ ಮಕ್ಕಳು ಬೀದಿಗಿಳಿದು ಅಹೋರಾತ್ರಿ ಹೋರಾಟ ನಡೆಸುತ್ತಿರುವುದು ದೇಶದ ದುರಂತ. ಕಳೆದ 28 ದಿನಗಳಿಂದ ದೆಹಲಿ ಗಡಿಯಲ್ಲಿ ಅನ್ನದಾತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ರೂ, ಡಬಲ್ ಬಂಡಲ್ ಬಿಜೆಪಿ ನಿರ್ಲಕ್ಷ್ಯ ಧೋರಣೆ ತೋರುತ್ತಿದೆ ಎಂದು ಆರೋಪಿಸಿದ್ರು.
ನಮ್ಮದು ರೈತ ಪರ ಸರ್ಕಾರ ಎಂದು ಬಾಯಿ ಬಡಿದುಕೊಳ್ಳುವ ಕೇಂದ್ರ ಬಿಜೆಪಿ ಸರ್ಕಾರ ಅನ್ನದಾತರ ಸಮಸ್ಯೆ ಆಲಿಸಲು ಮಾತ್ರ ಸಿದ್ಧವಿಲ್ಲ. ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿಗೆ ಸಮಯವಿದೆ. ಆದರೆ, ಅನ್ನದಾತರ ಸಮಸ್ಯೆ ಆಲಿಸಲು ಮಾತ್ರ ಅವರಿಗೆ ಸಮಯವಿಲ್ಲ. ಕೇಂದ್ರದ ನೂತನ ಕೃಷಿ ಕಾಯಿದೆ ವಿರುದ್ಧ ಹೋರಾಟ ನಡೆಸುತ್ತಿರುವ ಕಾಯಕ ಯೋಗಿಗಳ ಮೇಲಿನ ದೌರ್ಜನ್ಯ ಖಂಡನೀಯ ಎಂದರು.
ಓದಿ:ರೈತರ ಸಮಸ್ಯೆಗೆ ಪರಿಹಾರ ಒದಗಿಸಲು ಕೇಂದ್ರ ಬದ್ಧ: ನಳಿನ್ ಕುಮಾರ್ ಕಟೀಲು
ಕೊರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ:
ಹೊಸ ರೂಪದೊಂದಿಗೆ ಕಾಣಿಸಿಕೊಂಡಿರುವ ಕೊರೊನಾ ವೈರಸ್ ಸೋಂಕಿನ ಕಡಿವಾಣಕ್ಕೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಂದಾಗಬೇಕು. ತಜ್ಞರ ಸಲಹೆ ಮೇರೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಪ್ರತಿಯೊಬ್ಬ ನಾಗರಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಹಾಗೆಯೇ ಸ್ಯಾನಿಟೈಸರ್ ಬಳಸಬೇಕು. ಕಳೆದ ಬಾರಿಯ ನಿರ್ಲಕ್ಷ್ಯದಿಂದಾದ ಅನಾಹುತಗಳು ಮರುಕರುಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.