ಹಾವೇರಿ: ಪಿಎಫ್ಐ ಈಗಾಗಲೇ ಬ್ಯಾನ್ ಆಗಿದೆ. ಎಲೆಕ್ಷನ್ ಕಮಿಷನ್ ಪ್ರಕಾರ ಎಸ್ಡಿಪಿಐ ರಿಜಿಸ್ಟರ್ಡ್ ಪೊಲಿಟಿಕಲ್ ಪಾರ್ಟಿ. ಅದರ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಮುಂದಿನ ದಿನಗಳಲ್ಲಿ ಆಗುವ ಬೆಳವಣಿಗೆಗಳ ಆಧಾರದ ಮೇಲೆ ಅದರದ್ದೇ ಆದ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು ಬಜೆಟ್ನಲ್ಲಿ ಜಿಲ್ಲೆಗೆ ನೀಡಿದ ಕಾರ್ಯಕ್ರಮಗಳ ಉದ್ಘಾಟನೆಗೆ ಬಂದಿರುವುದಾಗಿ ತಿಳಿಸಿದರು. ನಾನು ಮನಸ್ಸು ಮಾಡಿದರೆ ಪ್ಲೆಕ್ಸ್, ಕಾರ್ಯಕ್ರಮ ಮಾಡಲು ಬಿಡೋದಿಲ್ಲ ಎನ್ನುವ ಡಿಕೆಶಿ ಹೇಳಿಕೆ ವಿಚಾರ ಕುರಿತಂತೆ ಮಾತನಾಡಿದ ಅವರು, ಡಿಕೆಶಿ ಏನಾದರೂ ಹೇಳಲಿ ಬಿಡಲಿ. ಪ್ಲೆಕ್ಸ್ ಹಾಕುವವರು ಅನುಮತಿ ಪಡೆದು ಹಾಕಬೇಕು. ಅನುಮತಿ ಪಡೆದಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ಯಾವುದೇ ರಾಜಕೀಯ ಪಕ್ಷದ ಪ್ಲೆಕ್ಸ್ ಹರಿಯೋ ಅವಶ್ಯಕತೆ ನಮಗಿಲ್ಲ ಇಲ್ಲ. ಎಲ್ಲರಿಗೂ ಗೊತ್ತಿದೆ ಯಾರು ಭಾರತ್ ಜೋಡೋ ಮಾಡಿದ್ದಾರೆ ಯಾರು ಭಾರತ್ ತೋಡೋ ಮಾಡಿದ್ದಾರೆ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.
ಪಿಎಫ್ಐ ಬ್ಯಾನ್ ಎಲೆಕ್ಷನ್ ಗಿಮಿಕ್ ಎಂಬ ಬಿ.ಕೆ.ಹರಿಪ್ರಸಾದ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಹರಿಪ್ರಸಾದ್ ಅವರಿಂದ ಬೇರೆ ಏನು ನಿರೀಕ್ಷೆ ಮಾಡಲು ಸಾಧ್ಯ. ನಮ್ಮ ಎದುರಿಗೇ ಹಲವು ವಿಧ್ವಂಸಕ ಕೃತ್ಯಗಳು ನಡೆದಿವೆ. ಕೊಲೆ, ಭಯೋತ್ಪಾದನೆ ಚುಟುವಟಿಕೆಗಳಿಗೆ ಬೆಂಬಲ ನಡೆದು, ಇದೇ ಕಾಂಗ್ರೆಸ್ನವರು ವಿಧಾನಸೌಧ ಒಳಗೆ, ಹೊರಗೆ ಪಿಎಫ್ಐ ಬ್ಯಾನ್ ಮಾಡಿ ಎಂದು ಹೋರಾಟ ಮಾಡಿದವರು. ಈಗ ಬ್ಯಾನ್ ಮಾಡಿದರೆ ಎಲೆಕ್ಷನ್ ಗಿಮಿಕ್ ಎನ್ನುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ನ ಭಾರತ ಜೋಡೋಗೆ ಸಾಹಿತಿಗಳ ಬೆಂಬಲ ವಿಚಾರ ಮಾತನಾಡಿದ ಅವರು, ಎರಡೂ ಕಡೆಗೂ ಬೆಂಬಲ ಸೂಚಿವ ಸಾಹಿತಿಗಳಿದ್ದಾರೆ. ಹಾವೇರಿಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನವೆಂಬರ್ ತಿಂಗಳಿನಲ್ಲಿ ಮಾಡೇ ಮಾಡ್ತೀವಿ. ಅದಕ್ಕೆ ಬೇಕಾದ ತಯಾರಿಗಳು ನಡೆಯುತ್ತಿವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ: ಪಿಎಫ್ಐ ನಿಷೇಧ: ಸೆಪ್ಟೆಂಬರ್ ಕ್ರಾಂತಿ ಎಂದು ಬಣ್ಣಿಸಿದ ಅಲೋಕ್ ಕುಮಾರ್