ಬೆಂಗಳೂರು: ಐಟಿಬಿಟಿ ಕ್ಷೇತ್ರವಾಗಿರುವ ಮಹದೇವಪುರ ಕ್ಷೇತ್ರದಲ್ಲಿ ಕನ್ನಡೇತರರು ಹೆಚ್ಚಾಗಿದ್ದು, ಅವರಿಗೆ ಕನ್ನಡ ಕಲಿಸುವ ಕೆಲಸ ಮಾಡಬೇಕು ಎಂದು ಭಾರತೀಯರ ಸೇವಾ ಸಮಿತಿ ರಾಜ್ಯಾಧ್ಯಕ್ಷ ಹೆಚ್.ಎಂ. ರಾಮಚಂದ್ರ ತಿಳಿಸಿದರು.
ವೈಟ್ ಫೀಲ್ಡ್ ಮುಖ್ಯರಸ್ತೆಯ ಮಣಿಪಾಲ್ ಆಸ್ಪತ್ರೆ ಬಳಿಯಿರುವ ಡಾ. ಅಂಬೇಡ್ಕರ್ ಆಟೋ ನಿಲ್ದಾಣದಲ್ಲಿ ಭಾರತೀಯರ ಸೇವಾ ಸಮಿತಿಯ ಆಟೋ ಚಾಲಕರಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ಈ ಸಂದಂರ್ಭದಲ್ಲಿ ಕೊರೊನಾ ವಾರಿಯರ್ಸ್ ಗಳಾದ ಪೊಲೀಸರಿಗೆ ಮತ್ತು ವೈದ್ಯರಿಗೆ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು.
ನಂತರ ಮಾತನಾಡಿದ ಭಾರತೀಯರ ಸೇವಾ ಸಮಿತಿ ರಾಜ್ಯಾಧ್ಯಕ್ಷ ಹೆಚ್.ಎಂ. ರಾಮಚಂದ್ರ ಸರ್ಕಾರ ಸೂಚಿಸಿರುವ ಕೊರೊನಾ ಮಾರ್ಗಸೂಚಿಯಂತೆ ಸರಳವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದ್ದು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಆಟೋ ಬಾಡಿಗೆ ಬರುವ ಎಲ್ಲಾ ಗ್ರಾಹಕರನ್ನು ಕನ್ನಡದಲ್ಲೇ ಮಾತನಾಡಿಸುವ ಮೂಲಕ ಐಟಿಬಿಟಿ ಕ್ಷೇತ್ರದಲ್ಲಿ ಕನ್ನಡೇತರ ಪರ ಭಾಷಿಕರಿಗೆ ನವೆಂಬರ್ ತಿಂಗಳಲ್ಲಿ ಕನ್ನಡ ಕಲಿಸುತ್ತಿದ್ದಾರೆ. ಆಟೋದಲ್ಲಿ ಬರುವ ಜನರನ್ನು ಕನ್ನಡದಲ್ಲಿ ಮಾತನಾಡಿಸುವ ಮೂಲಕ ಕನ್ನಡವನ್ನು ಬೆಳೆಸುವ ಕಾರ್ಯವನ್ನು ಭಾರತೀಯರ ಸೇವಾ ಸಮಿತಿಯ ಆಟೋ ಘಟಕ ಚಾಲಕ ಸದಸ್ಯರು ಮಾಡುತ್ತಿದ್ದಾರೆ ಎಂದರು.
ಬೆರಳೆಣಿಕೆಯಷ್ಟು ಇರುವ ಮರಾಠಿ ಭಾಷಿಕರಿಗೆ ಕನ್ನಡ ನೆಲದಲ್ಲಿ ಪ್ರಾಮುಖ್ಯತೆ ನೀಡಿ ಕನ್ನಡಿಗರನ್ನು ಗುಲಾಮರನ್ನಾಗಿ ಮಾಡಲು ಹೊರಟಿರುವುದು ಸರಿಯಲ್ಲ. ಈ ನಡೆಯಿಂದ ಸರ್ಕಾರದ ಪತನಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.
ಮರಾಠ ಅಭಿವೃದ್ಧಿ ನಿಗಮ ನಿರ್ಧಾರ ಹಿಂದೆ ತೆಗೆದುಕೊಳ್ಳದಿದ್ದರೆ ಡಿಸೆಂಬರ್ ನಲ್ಲಿ ಕರ್ನಾಟಕ ಬಂದ್ ಗೆ ನಮ್ಮ ಸಂಘಟನೆಯಿಂದ ಸಂಪೂರ್ಣ ಬೆಂಬಲ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಡಿಸೆಂಬರ್ 5 ರಂದು ಹಮ್ಮಿಕೊಂಡ ಬಂದ್ ಗೆ ಭಾರತೀಯರ ಸೇವಾ ಸಮಿತಿ ಸಂಘಟನೆಯಿಂದ ಸಂಪೂರ್ಣ ಬೆಂಬಲ ನೀಡಲು ತಿರ್ಮಾನಿಸಲಾಗಿದೆ ಎಂದರು.