ಬೆಂಗಳೂರು: ಸದ್ಯ ದೇಶದಲ್ಲಿ ಮಹಿಳೆಯರ ವಿರುದ್ಧ ಭೀತಿ ಹಾಗೂ ದ್ವೇಷದ ವಾತಾವರಣ ಇದೆ. ಮಹಿಳೆಯರ ಸಾಂವಿಧಾನಿಕ ಹಕ್ಕುಗಳ ಮೇಲೆ ದಾಳಿ ನಡೆಯುತ್ತಿದೆ. ಹೀಗಾಗಿ ಮಹಿಳೆಯನ್ನು ಕಡೆಗಣಿಸಲ್ಪಟ್ಟ ಸಮುದಾಯಗಳ ಬದಲಾವಣೆಗಾಗಿ ವೋಟು ಹಾಕೋಣ ಎಂದು ಪ್ರಮುಖ ಸಂಘಟನೆಗಳು ನಗರದ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ 'ಮಹಿಳಾ ನಡಿಗೆ-ಭಾರತ' ಹೆಸರಿನ ಹೋರಾಟವನ್ನು ಹಮ್ಮಿಕೊಂಡಿದ್ದವು.
ಈ ಕಾರ್ಯಕ್ರಮದಲ್ಲಿ ಶಾಸಕಿ ಸೌಮ್ಯಾ ರೆಡ್ಡಿ, ನಿರ್ದೇಶಕಿ ಕವಿತಾ ಲಂಕೇಶ್, ಹೋರಾಟಗಾರ್ತಿ ಅಕೈ ಪದ್ಮಶಾಲಿ ಮೊದಲಾದವರು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಕವಿತಾ ಲಂಕೇಶ್, 2014ರಿಂದ ಗಲಾಟೆಗಳು ಜಾಸ್ತಿ ಆಗ್ತಾ ಇವೆ. ನನ್ನ ಅಕ್ಕ ಗೌರಿ ಲಂಕೇಶ್ ಸತ್ತಾಗಲೂ ಸಂಭ್ರಮಿಸಿದ್ರು. ಅತ್ಯಾಚಾರ ಆದಾಗ್ಲೂ ಸಂಭ್ರಮಿಸುವ ಮನಸ್ಸುಗಳು ಇವೆ. ಇಂತಹ ಗಲಾಟೆಗಳು ನಿಲ್ಲಬೇಕು. ಸಂಭ್ರಮಿಸುವ ಮನಸ್ಥಿತಿಗಳು ಕಡಿಮೆಯಾಗಬೇಕು. ಇದಕ್ಕಾಗಿ ಮಹಿಳೆಯರು ಯೋಚಿಸಿ ಮತ ಹಾಕಬೇಕು ಎಂದರು.
ಅಲ್ಲದೆ ಪ್ರಧಾನಿ ಮೋದಿಯನ್ನ ಈ ಬಾರಿ ಗೆಲ್ಲಿಸಿದ್ರೆ ಮತ್ತೆಂದೂ ನಾವು ಗೆಲ್ಲೋಕೆ ಆಗೋದಿಲ್ಲ. ನಮಗೆ ಸ್ವಾತಂತ್ರ್ಯ ಬೇಕು ಎಂದು ನೆರೆದಿದ್ದ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದರು. ಮಹಿಳಾ ಸಬಲೀಕರಣ, ಬೇಟಿ ಬಚಾವೊ ಮೊದಲಾದ ಸುಳ್ಳು ಆಶ್ವಾಸನೆಗಳನ್ನು ಬಿಜೆಪಿ ನೀಡುತ್ತಿದೆ. ಆದ್ರೆ ಕಳೆದ ಐದು ವರ್ಷದಲ್ಲಿ ಮಹಿಳೆಯರ ಹಕ್ಕುಗಳನ್ನು ನೀಡುವಲ್ಲಿ ಪ್ರಧಾನಿ ಮೋದಿಯವರು ವಿಫಲರಾಗಿದ್ದಾರೆ.
ಹೀಗಾಗಿ ಮನುವಾದಿ, ಜಾತಿವಾದಿ, ಕೋಮುವಾದಿ ಶಕ್ತಿಗಳನ್ನು ಸೋಲಿಸುವ ನಿಟ್ಟಿನಲ್ಲಿ ಮತ ಚಲಾಯಿಸಬೇಕು. ಅಲ್ಪಸಂಖ್ಯಾತರು, ಮಹಿಳೆಯರು, ಲೈಂಗಿಕ ಅಲ್ಪಸಂಖ್ಯಾತರಿಗೆ ತಮ್ಮ ಹಕ್ಕುಗಳನ್ನು ನೀಡುವವರಿಗೆ ಮತ ಚಲಾಯಿಸಬೇಕೆಂದು ಮಹಿಳಾ ನಡಿಗೆ- ಭಾರತ ಹೋರಾಟದಲ್ಲಿ ಆಗ್ರಹಿಸಿದರು.