ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕುರಿತಂತೆ ಸಿಡಿ ಯುವತಿ ಮಾತನಾಡಿದ್ದಾಳೆ ಎನ್ನಲಾದ ಆಡಿಯೋ ಬಹಿರಂಗಗೊಂಡ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ಜೊತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಸಿಡಿ ಲೇಡಿಯದ್ದು ಎನ್ನಲಾದ ಆಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ರಮೇಶ್ ಜಾರಕಿಹೊಳಿ ಸಹೋದರ ಬಾಲಚಂದ್ರ ಜಾರಕಿಹೊಳಿ, ಗೃಹ ಸಚಿವ ಬಸವರಾಜ ಬೊಮ್ಮಾಯಿಯನ್ನು ಭೇಟಿಯಾದರು. ಆಡಿಯೋ ಪ್ರಕರಣ ಕುರಿತು ಕೆಲಕಾಲ ಮಾತುಕತೆ ನಡೆಸಿದರು. ನಂತರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಧಿಕೃತ ನಿವಾಸ ಕಾವೇರಿಗೆ ಸಿಎಂ ಮರಳುತ್ತಿದ್ದಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಿಎಂ ನಿವಾಸಕ್ಕೆ ಆಗಮಿಸಿದರು. ಬೆಳಗ್ಗೆಯಿಂದ ಸಿಡಿ ಕೇಸ್ನಲ್ಲಿ ಕಂಡ ತಿರುವುಗಳ ಕುರಿತು ವಿವರ ನೀಡಿ ಸಮಾಲೋಚನೆ ನಡೆಸಿದರು.
ಯುವತಿ ಇಂದು ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು, ವಕೀಲರ ಮೂಲಕ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದೂರು ಆಧರಿಸಿ ರಮೇಶ್ ಜಾರಕಿಹೊಳಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆಗೂ ಮುನ್ನ ಯುವತಿ ತನ್ನ ಕುಟುಂಬದೊಂದಿಗೆ ಮಾತನಾಡಿದ್ದು ಎನ್ನಲಾದ ಆಡಿಯೋ ಬಗ್ಗೆ ಚರ್ಚೆ ನಡೆಸಿದರು. ನಂತರ ಆರ್.ಟಿ ನಗರ ನಿವಾಸಕ್ಕೆ ಬೊಮ್ಮಾಯಿ ವಾಪಸಾದರು.
ಈ ವೇಳೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಿಡಿ ಪ್ರಕರಣ ಕುರಿತು ವಿಡಿಯೋ, ಆಡಿಯೋ ಮಾಹಿತಿ ಬಂದಿದೆ ಹಲವಾರು ತಿರುವುಗಳು ಈ ಕೇಸ್ನಲ್ಲಿ ಬರುತ್ತಿವೆ. ನಮ್ಮ ವಿಶೇಷ ತನಿಖಾ ತಂಡ ಕಾನೂನು ಬದ್ಧವಾಗಿ ಕೆಲಸ ಮಾಡುತ್ತಿದೆ. ಎಸ್ಐಟಿ ತನಿಖೆ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಿಷ್ಪಕ್ಷಪಾತವಾಗಿ ತನಿಖಾ ತಂಡ ಕೆಲಸ ಮಾಡುತ್ತಿದೆ. ವಿನಾಕಾರಣ ಈ ತಿರುವುಗಳಿಂದ ನಮ್ಮ ಕ್ರಮಬದ್ಧವಾದ ತನಿಖೆ ಎಲ್ಲಿಯೂ ಹಾದಿ ತಪ್ಪುವುದಿಲ್ಲ. ನಮ್ಮ ಪೊಲೀಸರು ಆ ನಿಟ್ಟಿನಲ್ಲೇ ಕೆಲಸ ಮಾಡಲಿದ್ದಾರೆ. ಮಾಧ್ಯಮಗಳ ಮುಂದೆ ಇಂದು ಆಡಿಯೋ ಬಂದಿದೆ. ಎಸ್ಐಟಿ ತನಿಖೆ ಬಗ್ಗೆ ನಾನು ಯಾವುದೇ ಹೇಳಿಕೆ ನೀಡುವುದಿಲ್ಲ. ತನಿಖೆ ಕ್ರಮಬದ್ಧವಾಗಿ ನಡೆಯಲಿದೆ ಎಂದಷ್ಟೇ ಹೇಳಲು ಸಾಧ್ಯ.ಇಂದಿನ ಆಡಿಯೋದಲ್ಲಿ ಯುವತಿ ಡಿ.ಕೆ ಶಿವಕುಮಾರ್ ಹೆಸರು ಹೇಳಿದ್ದಾರೆ. ಅವರಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯುವುದು ಪೊಲೀಸ್ ಇಲಾಖೆಗೆ ಬಿಟ್ಟ ವಿಚಾರ. ಅವರಿಗಿರುವ ದಾಖಲೆಗಳ ಆಧಾರದಲ್ಲಿ ಕ್ರಮ ಕೈಗೊಳ್ಳಲಿದ್ದಾರೆ. ಯುವತಿ ಮತ್ತು ಕುಟುಂಬದ ಸದಸ್ಯರಿಗೆ ಹೇಳಿಕೆ ನೀಡಲು ಬಂದಲ್ಲಿ ರಕ್ಷಣೆ ಕಲ್ಪಿಸಲಿದ್ದೇವೆ ಎಂದಿದ್ದಾರೆ.