ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನ ವ್ಯಕ್ತಿಯ ವಾಯ್ಸ್ ಸ್ಯಾಂಪಲ್ ಅನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿದ್ದು, ಇಂದು ವರದಿ ಹೊರ ಬೀಳುವ ನಿರೀಕ್ಷೆಯಿದೆ. ಒಂದು ವೇಳೆ ಸಿಡಿಯಲ್ಲಿರುವ ಧ್ವನಿಗೂ ಮತ್ತು ನೀಡಿರುವ ಧ್ವನಿಗೂ ಹೊಲಿಕೆ ಕಂಡು ಬಂದರೆ ಎಸ್ಐಟಿ ಬಂಧಿಸುವ ಸಾಧ್ಯತೆಯಿದೆ.
ವಿಡಿಯೋದಲ್ಲಿನ ಹಿನ್ನೆಲೆ ಧ್ವನಿ ಚಿಕ್ಕಮಗಳೂರಿನ ವ್ಯಕ್ತಿಯದ್ದು ಎಂಬ ಶಂಕೆ ವ್ಯಕ್ತವಾದ ಬೆನ್ನಲ್ಲೆ ಎಸ್ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಬಳಿಕ ಆತನ ವಾಯ್ಸ್ ಸ್ಯಾಂಪಲ್ ಪಡೆದು ಎಫ್ಎಸ್ಎಲ್ಗೆ ಕಳುಹಿಸಿತ್ತು. ಇಂದು ಆ ಬಗೆಗಿನ ವರದಿ ಬರುವ ಸಾಧ್ಯತೆಯಿದೆ.
ಇದೇ ಪ್ರಕರಣದಲ್ಲಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ್ದ ನಾಲ್ವರಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ನಾಲ್ವರು ಇಂದು ಬೆಳಗ್ಗೆ 11 ಗಂಟೆಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹಾಜರಾಗುವ ಸಾಧ್ಯತೆಯಿದೆ. ಅದೇ ರೀತಿ ಯುವತಿ ಸೇರಿದಂತೆ ಆಕೆಯ ಸಂಪರ್ಕದಲ್ಲಿದ್ದವರಿಗೂ ನೋಟಿಸ್ ನೀಡಿದೆ.
ಓದಿ: ಕಟೀಲ್ಗೆ ಪ್ರಾರ್ಥಿಸಿದ ಪೆನ್ನು ಕೊಟ್ಟ ವಿನಯ್ ಗುರೂಜಿ.. ಭದ್ರವಾಗಲಿದೆಯಾ ರಾಜ್ಯಾಧ್ಯಕ್ಷರ ಪಟ್ಟ!
ಸಂತ್ರಸ್ತೆಯ ಗೆಳೆಯನಿಗೆ ಮೊದಲು ಸಿಡಿ ದೊರೆತಿದ್ದು, ಈತನ ಮೂಲಕ ಹಲವರನ್ನು ಭೇಟಿ ಮಾಡಿ ಕೃತ್ಯ ಎಸಗಲಾಗಿದೆ ಎನ್ನಲಾಗುತ್ತಿದೆ. ಆಕಾಶ್ ಮತ್ತು ಆತನ ತಂಡದ ಕುರಿತಾಗಿ ಸಾಕ್ಷ್ಯಗಳನ್ನು ಪಡೆಯುವ ತೀವ್ರ ಹುಡುಕಾಟ ನಡೆಸಿದ್ದ ಎಸ್ಐಟಿ ತನಿಖೆ ವೇಳೆ 70 ಸಿಸಿಟಿವಿ ಪರಿಶೀಲನೆ ನಡೆಸಿದೆ. ಶಂಕಿತರ ಚಲನವಲನಗಳ ಮೇಲೆ ನಿಗಾವಹಿಸಿ ಮಾಹಿತಿ ಕಲೆ ಹಾಕಿದೆ. ಪರಸ್ಪರರು ಯಾರಿಗೂ ಅನುಮಾನ ಬಾರದಿರಲು ವಾಟ್ಸ್ಆ್ಯಪ್ ಕರೆಗಳನ್ನು ಮಾಡಿಕೊಂಡು ಸಂಪರ್ಕಿಸಿದ್ದರು ಎನ್ನಲಾಗಿದೆ.