ಬೆಂಗಳೂರು: ಅತ್ಯಾಚಾರ ಆರೋಪ ಪ್ರಕರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಸಮಗ್ರ ಹಾಗೂ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಜೊತೆ ಜಂಟಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ವಿರುದ್ಧದ ಪ್ರಕರಣವನ್ನು ಸರ್ಕಾರ ಎಸ್ಐಟಿ ತನಿಖೆಗೆ ವಹಿಸಿದೆ. ಆದರೆ ಇದರಿಂದ ನ್ಯಾಯಸಮ್ಮತ ತೀರ್ಪು ಸಿಗುವ ನಿರೀಕ್ಷೆ ಇಲ್ಲ. ಇದರಿಂದಾಗಿ ಕೂಡಲೇ ಪ್ರಕರಣವನ್ನು ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದ ಸಮಿತಿಗೆ ವಹಿಸಬೇಕು. ಇದರಿಂದ ಮಾತ್ರ ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯ ಎಂದರು.
ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾದ ಹಿನ್ನೆಲೆ ಕೂಡಲೇ ಕಾನೂನು ಸಚಿವ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರಮೇಶ್ ಜಾರಕಿಹೊಳಿ ಅವರಿಗೆ ಸಹಕರಿಸಿದ ಎಲ್ಲಾ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇದಾದ ಬಳಿಕವೇ ನಿಷ್ಪಕ್ಷಪಾತ ತನಿಖೆಯನ್ನು ನಿರೀಕ್ಷಿಸಲು ಸಾಧ್ಯ ಎಂದು ಡಿಕೆಶಿ ಅಭಿಪ್ರಾಯಪಟ್ಟರು.
ಇದು ಒಬ್ಬ ವ್ಯಕ್ತಿಗಿಂತ ಕರ್ನಾಟಕ ಪೊಲೀಸರ ಗೌರವದ ವಿಷಯ. ಈ ರೀತಿ ಆದ್ರೆ ಮುಂದಿನ ದಿನಗಳಲ್ಲಿ ಯಾವ ಪೊಲೀಸ್ ಅಧಿಕಾರಿಗಳು ಕೆಲಸ ಮಾಡಲು ಸಾಧ್ಯವಾಗಲ್ಲ. ಇಂತಹ ಸರ್ಕಾರದಲ್ಲಿ ಈ ರೀತಿ ಆಗಿತ್ತು ಎಂದು ತಿಳಿಯುತ್ತೆ. ಇನ್ಮುಂದೆ ಯಾವುದೇ ದೂರು ಬಂದ್ರೆ ಈ ಪ್ರಕರಣವನ್ನ ಹೇಳುತ್ತಾರೆ. ಎಸ್ಐಟಿ ತಂಡದಲ್ಲಿರುವ ಅಧಿಕಾರಿಗಳು ಇನ್ನು ಹತ್ತು, ಇಪ್ಪತ್ತು ವರ್ಷ ಕೆಲಸ ಮಾಡಬೇಕಾಗುತ್ತೆ. ಈ ರೀತಿ ತನಿಖೆಯಾದ್ರೆ ಮುಂದೆ ಏನಾಗಲಿದೆ ಎಂದು ಗೊತ್ತಿಲ್ವಾ? ಅವನು ಯಾವ್ ಹುಡುಗಿಗೆ ಕಾಲ್ ಮಾಡಿದ್ದಾನೆ ಎಂಬುದರ ಬಗ್ಗೆ ತನಿಖೆ ಮಾಡಬೇಕಿತ್ತು. ಆದ್ರೆ ಆ ಯುವತಿಗೆ ಹಲವರಿಂದ ಒತ್ತಡ ಹಾಕಿಸುತ್ತಿದ್ದಾರೆ. ಯುವತಿ ಕುಟುಂಬದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇದು ರಾಮ ರಾಜ್ಯನಾ ಅಥವಾ ರಾವಣ ರಾಜ್ಯನಾ? ಯುವತಿ ಪೋಷಕರು ಒತ್ತಡದಿಂದ ನನ್ನ ಮೇಲೆ ಏನೇನೋ ಮಾತಾಡಿದ್ದಾರೆ. ನನಗೆ ಆ ಬಗ್ಗೆ ಬೇಸರ ಇಲ್ಲ ಎಂದು ಡಿ ಕೆ ಶಿವಕುಮಾರ್ ಹೇಳಿದ್ರು.
ಕೊರೊನಾ ಬಂದು ಆಸ್ಪತ್ರೆಯಲ್ಲಿ ಮಲಗಿದ್ದರು. ಎಲ್ಲಾ ಸೋಂಕಿತರು ಪಿಪಿಇ ಕಿಟ್ ಹಾಕ್ತರೇನ್ರೀ? ನಾನು ಆಸ್ಪತ್ರೆಯಲ್ಲಿದ್ದೆ, ಸಿದ್ದರಾಮಯ್ಯ ಆಸ್ಪತ್ರೆಯಲ್ಲಿದ್ರು. ನಾವು ಪಿಪಿಇ ಕಿಟ್ ಹಾಕಿಲ್ಲ. ಎಲ್ಲಿ ಕೊರೊನಾ ಬಂತು ದಾಖಲೆ ತೋರಿಸಲಿ. ಆ ಯುವತಿ ನಮ್ಮ ಬಳಿ ನ್ಯಾಯ ಕೇಳೋದು ತಪ್ಪಾ? ಸಿದ್ದರಾಮಯ್ಯ, ರಮೇಶ್ ಕುಮಾರ್, ನನ್ನ ಹೆಸರನ್ನು ಆ ಯುವತಿ ಹೇಳಿದ್ದಳು. ಒಂದು ರಾಜಕೀಯ ಪಕ್ಷವಾಗಿ ಸಹಾಯ ಮಾಡುತ್ತೇವೆ. ನಮ್ಮ ವಕೀಲರು ಪೋಷಕರನ್ನ ಭೇಟಿ ಮಾಡಲು ತಡೆ ಹಾಕುತ್ತಾರೆ. ಆ ಯುವತಿ ಧೈರ್ಯದಿಂದ ಮುಂದೆ ಬಂದು ಹೇಳಿದ್ದಳು. ಇನ್ನು ಎಷ್ಟು ಸಿಡಿ ಇವೆಯೋ ನನಗೆ ಗೊತ್ತಿಲ್ಲ ಎಂದರು.
ಕಳೆದ ಚುನಾವಣೆಯಲ್ಲಿ ಒಂದು ಸಿಡಿ ಬಂದಿತ್ತು. ಪೊಲೀಸ್ ಅಧಿಕಾರಿ ಅನುಚೇತ್ ಏನ್ ಮಾಡಿದ್ದೀರಾ ನೀವು? ಒಬ್ಬ ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ. ಬೇರೆ ಪ್ರಕರಣಗಳಿಗೆ ಈ ಪ್ರಕರಣ ಎಕ್ಸಾಂಪಲ್ ಸೆಟ್ ಮಾಡುತ್ತಿದ್ದೀರಾ. ಯುವತಿ ಹಾಗು ಪೋಷಕರ ಬೆಂಬಲಕ್ಕೆ ನಾವು ನಿಲ್ಲುತ್ತೇವೆ. ಕೂಡಲೇ ರೇಪಿಸ್ಟ್ ರಮೇಶ್ ನನ್ನ ಬಂಧಿಸಬೇಕು. ನಿನ್ನ ಕ್ಯಾರೆಕ್ಟರ್ ಬಗ್ಗೆ ಮಾತಾಡು. ಆ ಯುವತಿ ಕ್ಯಾರಕ್ಟರ್ ಬಗ್ಗೆ ನೀನು ಮಾತಾಡ್ತೀಯಾ ಎಂದು ರಮೇಶ್ ಜಾರಕಿಹೊಳಿ ಅವರನ್ನು ಏಕವಚನದಲ್ಲೇ ಡಿಕೆಶಿ ಜರಿದರು.
ಯಾರೋ 5 ಕೋಟಿ ಕೊಟ್ಟು ಬಿಟ್ಟಿದ್ದಾರಂತೆ. ಆ ಹೆಣ್ಣು ಮಗಳ ಕ್ಯಾರೆಕ್ಟರ್ ಬಗ್ಗೆ ಮಾತಾಡ್ತೀಯಾ. ನಿನ್ನ ಕ್ಯಾರೆಕ್ಟರ್ ಏನಾಗಿದೆ. ಎಂತಹ ಶಬ್ದ ಬಳಸಿದ್ದೀಯ ಯಾರ ಮನೆ ವಿಷಯ ಬಂದಿದೆ. ಡೆಲ್ಲಿ...ಡೆಲ್ಲಿ... ಎಲ್ಲಾ ವಿಷಯದಲ್ಲಿ ತನಿಖೆ ಆಗಲೇಬೇಕು. ರೇಪಿಸ್ಟ್ ರಮೇಶ್ ಬಂಧನವಾಗಬೇಕು. ನಿರ್ಭಯಾ ಕೇಸಿನಂತೆ ಇದು ಸಹ ಬೇಸಿಕ್ ಆಗುತ್ತೆ ಎಂದರು.
ಹಿಂದೆ ಅವರ ಫ್ಯಾಮಿಲಿ ಮೆಂಬರ್ ನಮ್ಮದು ಮುಟ್ಟಲಿ, ನಿಮ್ಮದು ಬಿಚ್ಚುತ್ತೇವೆ ಅಂದಿದ್ದರು. ಆದರೆ ಯಡಿಯೂರಪ್ಪ ಇದಕ್ಕೆ ಹೆದರಲ್ಲ ಅಂದುಕೊಳ್ತೀನಿ. ಉಪ ಚುನಾವಣೆ ವೇಳೆ ರಮೇಶ್ ಜಾರಕಿಹೊಳಿ ರೇಪ್ ಕೇಸ್ ಪ್ರಸ್ತಾಪಿಸಿದ ವಿಚಾರ ಮಾತನಾಡಿ, ಕಾಂಗ್ರೆಸ್ಗೆ ರೇಪ್ ಕೇಸ್ ತರಹದ ವಿಚಾರ ಬೇಕಿಲ್ಲ. ಹೀಗಾಗಿ ಉಪ ಚುನಾವಣೆಗಳಲ್ಲಿ ರೇಪ್ ಕೇಸ್ ಪ್ರಸ್ತಾಪ ಮಾಡಲಿಲ್ಲ. ಮುಂದಿನ ಚುನಾವಣೆಗಳಲ್ಲಿ ಈ ವಿಚಾರ ಪ್ರಸ್ತಾಪದ ಬಗ್ಗೆ ಮುಂದೆ ನೋಡುವ ಎಂದು ಡಿಕೆಶಿ ಗುಡುಗಿದರು.