ಬೆಂಗಳೂರು: ಸಿಡಿ ಪ್ರಕರಣ ಸಂಬಂಧ ಯುವತಿ ಹಾಜರಾಗಿ 164 ರಡಿ ಸ್ವ - ಇಚ್ಛೆಯಿಂದ ಹೇಳಿಕೆ ದಾಖಲಿಸಲು ನ್ಯಾಯಾಲಯ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಕ್ಷಣದಲ್ಲಾದರೂ ಯುವತಿ ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆಯಿದೆ.
ಯುವತಿ ಹಾಜರು ಸಂಬಂಧ ಕೋರ್ಟ್ ಕಲಾಪ ಆರಂಭವಾಗುತ್ತಿದ್ದಂತೆ 24ನೇ ಎಸಿಎಂಎಂ ನ್ಯಾಯಾಲಯದ ನ್ಯಾ.ಬಾಲಗೋಪಾಲಕೃಷ್ಣ ಮುಂದೆ ಸಿಡಿ ಲೇಡಿ ಪರ ವಕೀಲ ಕೆ.ಎನ್. ಜಗದೀಶ್ ವಾದ ಮಂಡಿಸಿದರು.
‘ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಯುವತಿಗೆ ಎಸ್ಐಟಿ ಮೇಲೆ ನಂಬಿಕೆಯಿಲ್ಲ. ಅಲ್ಲದೇ ಆಕೆಗೆ ಜೀವ ಬೆದರಿಕೆಯಿದೆ. ಹೀಗಾಗಿ ನ್ಯಾಯಾಲಯದ ಸಮ್ಮುಖದಲ್ಲಿ ಸಿಆರ್ಪಿಸಿ 164 ರಡಿ ಅವಕಾಶ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.
ವಾದ ಆಲಿಸಿದ ನ್ಯಾಯಾಧೀಶರು ಮೊದಲು ಸಿಆರ್ಪಿಸಿ 164 ರಡಿ ಯುವತಿ ಹೇಳಿಕೆ ದಾಖಲಿಸುತ್ತೇವೆ. ಅದಾದ ಬಳಿಕ ತನಿಖಾಧಿಕಾರಿಗಳಿಗೆ ಒಪ್ಪಿಸುತ್ತೇವೆ. ಯುವತಿಗೆ ತನಿಖಾಧಿಕಾರಿಗಳು ಒತ್ತಡ ಹೇರುವಂತಿಲ್ಲ ಎಂದು ಆದೇಶಿಸಿದರು.
ಯುವತಿಯನ್ನು ನಾವು ಕರೆದುಕೊಂಡು ಬರುತ್ತೇವೆ: ಸಿಆರ್ ಪಿಸಿ ಸೆಕ್ಷನ್ 164 ನಡಿ ಯುವತಿ ಹೇಳಿಕೆ ದಾಖಲಿಸಿಕೊಳ್ಳಲು ನ್ಯಾಯಾಲಯ ಅನುಮತಿ ನೀಡಿದೆ ಎಂದು ಸಿಡಿ ಯುವತಿ ಪರ ವಕೀಲ ಕೆ.ಎನ್. ಜಗದೀಶ್ ಹೇಳಿದ್ದಾರೆ. ನ್ಯಾಯಾಲಯ ಅನುಮತಿ ನೀಡಿದ ಬಳಿಕ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿ, ಯುವತಿ ಹೇಳಿಕೆ ದಾಖಲಿಸಿಕೊಳ್ಳಲು ನ್ಯಾಯಾಲಯ ಅನುಮತಿ ನೀಡಿದೆ. ಇಂದೇ ಹಾಜರುಪಡಿಸಿ ಯುವತಿಯಿಂದ ಹೇಳಿಕೆ ನ್ಯಾಯಾಲಯ ಸೂಚನೆ ನೀಡಿದೆ. ಹೀಗಾಗಿ ಯುವತಿಯನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗುವುದು ಎಂದಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಕೋರ್ಟ್ ಎದುರು ಹಾಜರು: ಯುವತಿ ಈಗಾಗಲೇ ಬೆಂಗಳೂರಿನಲ್ಲಿದ್ದಾರೆ. ಕೆಲವೇ ಕ್ಷಣಗಳಲ್ಲಿ ಕೋರ್ಟ್ಗೆ ಕರೆತರಲಿದ್ದೇವೆ. ಎಲ್ಲರ ಸಹಕಾರದಿಂದ ನಾನು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದೆ. ಯುವತಿ ಹಾಜರು ಸಂಬಂಧ ಸಮಯವನ್ನು ನ್ಯಾಯಾಲಯ ನಿಗದಿ ಮಾಡಿಲ್ಲ. ರೆಕಾರ್ಡಿಂಗ್‌ಗೆ ನ್ಯಾಯಾಲಯ ಒಪ್ಪಿಗೆ ಕೊಟ್ಟಿದೆ. ಯುವತಿಯನ್ನು ನಾವು ಕರೆದುಕೊಂಡು ಬರುತ್ತೇವೆ. ಈಗಾಗಲೇ ಯುವತಿ ಇರುವ ಜಾಗದಲ್ಲಿ ಸೆಕ್ಯುರಿಟಿ ಸಿಕ್ಕಿದೆ. ಸೆಕ್ಯುರಿಟಿಯವರು ಕೋರ್ಟ್ಗೆ ಕರೆದುಕೊಂಡು ಬರುತ್ತಾರೆ. ಈಗಾಗಲೇ ಯುವತಿ ಪೊಲೀಸರ ರಕ್ಷಣೆಯಲ್ಲಿದ್ದಾರೆ. 28 ದಿನಗಳಿಂದ ಯುವತಿ ಒತ್ತಡದಲ್ಲಿದ್ದಾರೆ. ಮಹಜರು, ಮೆಡಿಕಲ್ ಚೆಕಪ್ ಎಲ್ಲವನ್ನು ನಾವು ಮಾಡಿಸುತ್ತೇವೆ ಎಂದರು.
ಇಂತಹ ಕೇಸ್‌ಗಳಲ್ಲಿ ಪೋಷಕರ ಹೇಳಿಕೆಗೆ ಯಾವುದೇ ಬೆಲೆಯಿಲ್ಲ. ಕೇಸ್ ದಾಖಲಾಗಿದೆ ಅದಕ್ಕೆ ಸಂತ್ರಸ್ತರು ಬಿಟ್ಟರೆ ಯಾವುದೇ ಹೇಳಿಕೆಗೆ ಅವಕಾಶ ಇಲ್ಲ. ಒಂದು ವೇಳೆ ಆರೋಪಿಗಳು ಈ ರೀತಿ ಪೋಷಕರ ಮೇಲೆ ಒತ್ತಡ ಮಾಡಿದ್ರೆ ಅದು ಮತ್ತೆ ತಪ್ಪು ಆಗುತ್ತೆ. ಆಕೆ ಮಗು ಅಲ್ಲ, ಮೇಜರ್ ಆಗಿದ್ದಾರೆ. ಎಷ್ಟೋ ಕೇಸ್‌ನಲ್ಲಿ ತಂದೆ- ತಾಯಿಗಳು ಆರೋಪಿಗಳ ಪರ ಹೇಳಿಕೆ ನೀಡಿದ್ದಾರೆ. ಈ ರೀತಿ ಹೇಳಿಕೆ ನೀಡೋದನ್ನು ಪೋಷಕರು ನಿಲ್ಲಿಸಬೇಕು. ಯಾವುದೇ ಕಾರಣಕ್ಕೂ ಪೊಲೀಸರು ಒತ್ತಾಯ ಮಾಡುವಂತಿಲ್ಲ. ಒತ್ತಾಯ ಮಾಡಿ ಹೇಳಿಕೆಯನ್ನು ಪಡೆಯುವಂತಿಲ್ಲ. ನಿನ್ನೆ ಕೂಡಾ ಆರೋಪಿ ಸ್ಥಾನದಲ್ಲಿರುವ ವ್ಯಕ್ತಿಗೆ ಅನೇಕ ಪ್ರಶ್ನೆಗಳನ್ನು ತನಿಖಾಧಿಕಾರಿಗಳು ಕೇಳಿದ್ದಾರೆ. ಇದಕ್ಕೆ ಪ್ರತಿಯಾಗಿ 4 ದಿನದಲ್ಲಿ ಉತ್ತರ ಕೊಡುತ್ತೇವೆ ಎಂದಿದ್ದಾರೆ. ಅವರಿಗೆ ವಿಐಪಿ ಟ್ರೀಟ್ ಮಾಡಿದ್ದಾರೆ. ನಮಗೇಕೆ ನೀಡೋದಿಲ್ಲ ಎಂದು ಪ್ರಶ್ನಿಸುವುದಿಲ್ಲ ಎಂದರು.