ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ರಾಜಧಾನಿಯಲ್ಲಿ ಜ್ಯುವೆಲರಿ ಶಾಪ್ ಸೇರಿದಂತೆ ವಿವಿಧ ಅಂಗಡಿಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುವವರ ಗ್ಯಾಂಗ್ ಸಕ್ರಿಯವಾಗಿದೆ. ಇಂತಹ ಕಳ್ಳರನ್ನು ಪತ್ತೆ ಹಚ್ಚಿ ಹೆಡೆಮುರಿಕಟ್ಟಲು ಅಂಗಡಿ ಮಾಲೀಕರಿಗೆ ಸಿಸಿಟಿವಿ ಅಳವಡಿಸುವಂತೆ ಪೊಲೀಸರು ತಾಕೀತು ಮಾಡಿದ್ದರೂ ಉಪಯೋಗವಾದಂತಿಲ್ಲ.
ಪೊಲೀಸರು ಭಯದಿಂದ ತೋರಿಕೆಗಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದರೂ ರಾತ್ರಿ ವೇಳೆ ಬಾಗಿಲು ಹಾಕುವಾಗ ಮಾಲೀಕರು ಸಿಸಿಟಿವಿ ಆಫ್ ಮಾಡಿ ತೆರಳುತ್ತಿರುವುದರಿಂದ ಕಳ್ಳತನ ಪ್ರಕರಣ ಹೆಚ್ಚೆಚ್ಚು ದಾಖಲಾಗುತ್ತಿವೆ. ಪ್ರತಿದಿನ ಒಂದೆರಡು ರೂ. ಕರೆಂಟ್ ಬಿಲ್ ಉಳಿಸಲು ಹೋಗಿ ಲಕ್ಷಾಂತರ ರೂ. ಮೌಲ್ಯ ಆಭರಣ ಸೇರಿ ವಿವಿಧ ವಸ್ತುಗಳನ್ನು ಕಳ್ಳತನ ಮಾಡಲು ಮಾಲೀಕರೇ ಅನುವು ಮಾಡಿಕೊಡುತ್ತಿದ್ದಾರೆ.
ಕೆ.ಆರ್ ಮಾರ್ಕೆಟ್, ಕಾಟನ್‌ಪೇಟೆ ಹಾಗೂ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಳ್ಳತನ ಪ್ರಕರಣ ಹೆಚ್ಚು ವರದಿಯಾಗುತ್ತಿವೆ. ಇದು ಖದೀಮರನ್ನು ಸೆರೆ ಹಿಡಿಯಲು ಪೊಲೀಸರಿಗೆ ಸವಾಲಾಗುತ್ತಿದೆ.
ಸಾರ್ವಜನಿಕ ಸುರಕ್ಷತೆ ಕಾಯ್ದೆಯಡಿ ಪ್ರತಿದಿನ ಕೋಟ್ಯಂತರ ರೂ. ವ್ಯವಹಾರ ನಡೆಸುವ ಅಂಗಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದು ಮಾಲೀಕರಿಗೆ ಕಡ್ಡಾಯವಾಗಿದೆ. ಕಾಯ್ದೆಯಂತೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದರೂ ರಾತ್ರಿ ವೇಳೆ ಸ್ವಿಚ್ ಆಫ್ ಮಾಡುತ್ತಿರುವುದು ಕಳ್ಳರಿಗೆ ವರದಾನವಾದರೆ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಪೊಲೀಸರಿಗೆ ತಲೆ ನೋವಾಗಿದೆ 2 ರೂ. ಉಳಿಸುವವರ ಬುದ್ದಿ: 1 ಡಿವಿಆರ್, 5 ಸಿಸಿಟಿವಿ ಕ್ಯಾಮೆರಾ 12 ಗಂಟೆ ಆನ್ ಆದರೆ 2 ರೂ. ಬಿಲ್ ಬರಲಿದೆ. ಅದನ್ನ ಉಳಿಸಲು ಶಾಪ್ ಮಾಲೀಕರು ಪ್ರತಿದಿನ ರಾತ್ರಿ ಕ್ಯಾಮೆರಾ ಆಫ್ ಮಾಡಿ ಹೋಗುತ್ತಿದ್ದಾರೆ. ಇದನ್ನ ತಿಳಿದಿರುವ ಕಳ್ಳರು ಸಂಚು ರೂಪಿಸಿ ಕಳ್ಳತನ ಮಾಡ್ತಿದ್ದಾರೆ.
ಇದರಿಂದ ಒಂದು ಕಡೆ ಸ್ಟೇಷನ್ ವ್ಯಾಪ್ತಿಯಲ್ಲಿ ಕೇಸ್ಗಳ ಸಂಖ್ಯೆ ಜಾಸ್ತಿಯಾದರೆ ಮತ್ತೊಂದೆಡೆ ಆರೋಪಿಗಳ ಸುಳಿವು ನೀಡುವ ಸಿಸಿಟಿವಿ ಇಲ್ಲದ ಕಾರಣ ಪ್ರಕರಣ ಬೇಧಿಸುವ ಸಂಖ್ಯೆಯಲ್ಲಿ ಗಣನೀಯವಾಗಿ ಕಡಿಮೆಯಾಗಿವೆ. ಕೆ ಆರ್ ಮಾರ್ಕೆಟ್, ಕಾಟನ್ ಪೇಟೆ ಹಾಗೂ ಉಪ್ಪಾರಪೇಟೆ ಮೂರು ಠಾಣಾ ವ್ಯಾಪ್ತಿಗಳಲ್ಲಿ ದಾಖಲಾದ ಪ್ರಕರಣಗಳು ಶೇ.30-50% ರಷ್ಟು ಮಾತ್ರ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಕಳಪೆ ಗುಣಮಟ್ಟದ ಸಿಸಿಟಿವಿಗೆ ಮೊರೆ : ಪಬ್ಲಿಕ್ ಸೇಫ್ಟಿ ಆ್ಯಕ್ಟ್ ಮೇಲೆ ಭಯಕ್ಕೆ ವರ್ತಕರು ಕಳಪೆ ಗುಣಮಟ್ಟದ ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವುದು ಕಂಡು ಬಂದಿದೆ. ಇದರಿಂದ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾದರೂ ಆರೋಪಿಗಳ ಚಹರೆ ಪತ್ತೆಯಾಗುತ್ತಿಲ್ಲ. ಪೊಲೀಸರಿಗೆ ಪ್ರಕರಣದ ಹಳೆಯ ಕಳ್ಳರ (ಎಂಒಬಿ) ಸುಳಿವು ಸಿಗುತ್ತಿಲ್ಲ. ಕೇವಲ ಆರೋಪಿಗಳ ಕೃತ್ಯದ ಮಾದರಿ ಮೇಲೆ ತನಿಖೆ ಮಾಡಲಾಗುತ್ತಿದೆ.
ಇನ್ನೊಂದೆಡೆ ಶಾಪ್ ಹೊರಗಿನ ವಾಹನಗಳ ಕಳ್ಳತನವೂ ಸಹ ಶುರುವಾಗಿದೆ. ದ್ವಿಚಕ್ರ ಮತ್ತು ಕಾರ್ಗಳ ಕಳ್ಳತನ ಪ್ರಕರಣಗಳು ರಿಪೋರ್ಟ್ ಆಗುತ್ತಿವೆ. ಸಾಮಾನ್ಯವಾಗಿ ವರ್ತಕರು ಪ್ರತಿದಿನ ಬೆಳಗ್ಗೆ ಸುಮಾರು 11 ಗಂಟೆಗೆ ಶಾಪ್ ಓಪನ್ ಮಾಡುತ್ತಾರೆ. ತಡವಾಗಿ ಬರೋದು ಸಹ ಕಳ್ಳತನಕ್ಕೆ ವರದಾನವಾಗುತ್ತಿದೆ.
ವರ್ತಕರಿಗೆ ಶಾರ್ಟ್ ಸಕ್ಯೂರ್ಟ್ ಭಯ : ವರ್ತಕರನ್ನು ಕರೆದು ಅನೇಕ ಬಾರಿ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದರೂ ಅಂಗಡಿ ಮಾಲೀಕರು ಎಚ್ಚೆತ್ತಿಲ್ಲ. ರಾತ್ರಿ ವೇಳೆ ಸಿಸಿಟಿವಿ ಕ್ಯಾಮೆರಾ ಆನ್‌ನಲ್ಲಿದ್ದರೆ ಆಕಸ್ಮಿಕವಾಗಿ ಶಾರ್ಟ್ ಸರ್ಕ್ಯೂಟ್ ಆದರೆ ಕೋಟ್ಯಂತರ ರೂ. ಮೌಲ್ಯದ ವಸ್ತುಗಳು, ಅಪಾರ ಪ್ರಮಾಣದ ಆಸ್ತಿ ನಾಶವಾಗಲಿದೆ. ಈ ಆತಂಕದಿಂದ ಪ್ರತಿದಿನ ಕ್ಯಾಮೆರಾ ಆಫ್ ಮಾಡುತ್ತೇವೆ ಎಂದು ವರ್ತಕರು ಹೇಳುವುದಾಗಿ ಪೊಲೀಸರು ಹೇಳುತ್ತಾರೆ.
ವರ್ತಕರಿಗೆ ಬೀಳಲಿದೆ ದಂಡದ ಬಿಸಿ : ಪಬ್ಲಿಕ್ ಸೇಫ್ಟಿ ಆ್ಯಕ್ಟ್ 2017 ಸೆಕ್ಷನ್ 44 ಪ್ರಕಾರ ಸಿಸಿಟಿವಿ ಕಡ್ಡಾಯವಾಗಿ ಹಾಕಬೇಕು. 30 ದಿನಗಳ ಕಾಲ ಸಿಸಿಟಿವಿ ವಿಡಿಯೋ ರೆಕಾರ್ಡ್ ಸ್ಟೋರ್ ಇಡಬೇಕು. ಆಯಾ ಠಾಣಾ ವ್ಯಾಪ್ತಿಯ ಎಸಿಪಿಗಳು ಈ ಬಗ್ಗೆ ಬಂದ ದೂರಿನ ಮೇಲೆ ಕ್ರಮ ತೆಗೆದುಕೊಳ್ಳಲಿದ್ದಾರೆ.
ತಪಾಸಣೆ ವೇಳೆ ಒಂದು ತಿಂಗಳು ಸಿಸಿಟಿವಿ ಕ್ಯಾಮೆರಾ ಸ್ಥಗಿತವಾಗಿರುವುದು ಕಂಡು ಬಂದರೆ 5 ಸಾವಿರ ರೂ. ದಂಡ ಹಾಗೂ 2 ತಿಂಗಳು ಕ್ಯಾಮೆರಾ ಕೆಲಸ ಮಾಡದಿರುವುದು ಸಾಬೀತಾದರೆ 10 ಸಾವಿರ ರೂ. ದಂಡ ಹಾಕಲಿದ್ದಾರೆ. 3ನೇ ಬಾರಿಯೂ ತಪ್ಪು ಕಂಡು ಬಂದಲ್ಲಿ ಅಂಗಡಿ ಪರವಾನಿಗೆ ರದ್ದು ಮಾಡಲು ಸಂಬಂಧಪಟ್ಟ ಇಲಾಖೆಗೆ ಶಿಫಾರಸು ಮಾಡಲಿದ್ದಾರೆ.
ಸಿಸಿಟಿವಿ ಕ್ಯಾಮೆರಾ ಆಫ್ ಮಾಡಿದ್ದ ಅಂಗಡಿಯಲ್ಲಿ ಕಳ್ಳತನ : ಕಳೆದ ವಾರ ಕೆ ಆರ್ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಶಮನ್ಸ್ ವಾಚ್ ಅಂಗಡಿಗೆ ಕನ್ನ ಹಾಕಿದ್ದ ಮೂವರು ಖದೀಮರು, ಬರೋಬ್ಬರಿ 3.50 ಲಕ್ಷ ರೂ. ಹಣ ದೋಚುವಾಗ ಪಕ್ಕದ ಅಂಗಡಿಯ ಸೆಕ್ಯೂರಿಟಿ ಗಾರ್ಡ್ ಮಾಹಿತಿಯ ಮೇರೆಗೆ ಅಲ್ಲೇ ಕಾರ್ಯನಿರ್ವಹಿಸುತ್ತಿದ್ದ ಟ್ರಾಫಿಕ್ ಇನ್ಸ್‌ಪೆಕ್ಟರ್ ಶಾಂತರಾಮ್, ಕೂಡಲೇ ಕಾರ್ಯಪ್ರವೃತ್ತರಾಗಿ ರೆಡ್ ಹ್ಯಾಂಡ್ ಆಗಿ ಆರೋಪಿಗಳನ್ನು ವಶಕ್ಕೆ ಪಡೆದು ಕೆ ಆರ್ ಮಾರ್ಕೆಟ್ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರಿಗೆ ಒಪ್ಪಿಸಿದ್ದರು.
ಮೂರು ಠಾಣೆಯಲ್ಲಿ ದಾಖಲಾದ ಕೇಸ್ ಪತ್ತೆಯ ಪ್ರಮಾಣ
ಪೊಲೀಸ್ ಠಾಣೆ | ಪತ್ತೆಯಾದ ಕೇಸ್ ಪ್ರಮಾಣ | ಸಿಸಿಟಿವಿ ಇಲ್ಲ | ಸಿಸಿಟಿವಿ ಆಫ್ |
---|---|---|---|
ಕೆ.ಆರ್ ಮಾರ್ಕೆಟ್ | 50% | 3% | 97 % |
ಉಪ್ಪಾರಪೇಟೆ | 45% | 6% | 94% |
ಕಾಟನ್ ಪೇಟೆ | 39% | 3% | 97% |