ಬೆಂಗಳೂರು: ವಿವಿಧ ರಾಜ್ಯಗಳ ಯುವತಿಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿರುವ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದು, 27 ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.
ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಜಸ್ಥಾನ ಮೂಲದ ಪ್ರಮುಖ ಆರೋಪಿ ಯೋಗಿಶ್ ಎಂಬಾತ ಮೊಬೈಲ್ನಲ್ಲಿ ಗಿರಾಕಿಗಳನ್ನ ಬರಮಾಡಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ. ಮಾಹಿತಿ ತಿಳಿದ ಸಿಸಿಬಿ ಮಹಿಳಾ ವಿಭಾಗದ ಎಸಿಪಿ ಮದ್ವಿ ಅವರ ತಂಡವು ಅಡ್ಡೆ ಮೇಲೆ ದಾಳಿ ನಡೆಸಿ ನೇಪಾಳ, ಪಂಜಾಬ್, ದೆಹಲಿ, ಜಮ್ಮು ಕಾಶ್ಮೀರ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯದ ಯುವತಿಯರನ್ನು ರಕ್ಷಿಸಿದೆ.

ಪ್ರಮುಖ ಆರೋಪಿ ಯೋಗಿಶ್ನನ್ನ ವಿಚಾರಣೆ ಮಾಡಿದಾಗ ಅಧಿಕ ಹಣ ಗಳಿಸುವ ಉದ್ದೇಶದಿಂದ ಅನ್ಯ ರಾಜ್ಯದ ಯುವತಿಯರಿಗೆ ಹೆಚ್ಚು ಹಣ ಗಳಿಸುವ ಕೆಲಸ ಕೊಡಿಸುವುದಾಗಿ ನಂಬಿಸಿ ಈ ಕೃತ್ಯ ಮಾಡುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.