ಬೆಂಗಳೂರು: ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾದ ಆರೋಪಿಯ ಸಂಬಂಧಿ ಜೈದ್ ವಿಚಾರಣೆಯನ್ನು ಸಿಸಿಬಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ.
ಸದ್ಯ ಜೆಡಿಎಸ್ ಮುಖಂಡ ವಾಜೀದ್ ಹಾಗೂ ಜೈದ್ ಇಬ್ಬರು ಘಟನೆ ನಡೆದಾಗ ಸಂಪರ್ಕದಲ್ಲಿದ್ದರು. ಹೀಗಾಗಿ ಇಬ್ಬರನ್ನೂ ಪ್ರತ್ಯೇಕ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆಗೂ ಮೊದಲು ಇಬ್ಬರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಉಗ್ರರ ಸಂಪರ್ಕದ ಕುರಿತಂತೆ ಮಾಹಿತಿ ಕಲೆಹಾಕುತ್ತಿದ್ದಾರೆ.
ಸದ್ಯ ಬಂಧಿತ ಕೆಲ ಆರೋಪಿಗಳಿಗೆ ಉಗ್ರರ ಜೊತೆ ನಂಟಿರೋ ಅನುಮಾನದ ಮೇರೆಗೆ ಅವರನ್ನೆಲ್ಲ ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿದ್ದಾರೆ. ಬಸವನಗುಡಿಯಲ್ಲಿ ಶಂಕಿತ ಉಗ್ರ ರೆಹಮಾನ್ನನ್ನು ಎನ್ಐಎ ಬಂಧಿಸಿತ್ತು. ಈತ ಹಲವಾರು ವರ್ಷಗಳಿಂದ ನಗರದಲ್ಲೇ ವಾಸವಿರುವ ಕಾರಣ ಆತನ ಮೇಲೂ ಸಿಸಿಬಿ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ.
ಗಲಭೆಗೂ ಆತನಿಗೂ ಸಂಬಂಧ ಇದೆಯಾ ಎನ್ನುವ ಶಂಕೆ ಸಹ ಇದ್ದು, ಈ ಹಿನ್ನೆಲೆಯಲ್ಲೂ ತನಿಖೆ ಚುರುಕಾಗಿದೆ. ಆರೋಪಿಗಳ ಮೊಬೈಲ್ ಕುರಿತ ಮಾಹಿತಿಯನ್ನು ಎನ್ಐಎ ಅಧಿಕಾರಿಗಳೊಂದಿಗೆ ಚರ್ಚಿಸಲು ತಯಾರಿ ನಡೆಸಿದ್ದಾರೆ.