ಬೆಂಗಳೂರು: ಅನ್ಲಾಕ್ ಬಳಿಕ ರಾಜಧಾನಿಯಲ್ಲಿ ರೌಡಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ನಗರ 8 ವಿಭಾಗಳಲ್ಲಿ ಇಂದು ಬೆಳ್ಳಂಬೆಳ್ಳಗೆ ಪೊಲೀಸರು ದಾಳಿ ನಡೆಸಿದರು. ಈ ವೇಳೆ ನಗರ ಪೊಲೀಸರು ಸಾವಿರಾರು ರೌಡಿಶೀಟರ್ಗಳನ್ನು ವಶಕ್ಕೆ ಪಡೆದುಕೊಂಡು ಮನೆಯಲ್ಲಿದ್ದ ಮಾರಕಾಸ್ತ್ರ ಹಾಗೂ ಗಾಂಜಾ ಸೇರಿದಂತೆ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್, ಬನಶಂಕರಿ ದೇವಾಲಯ ಮದನ್ ಕೊಲೆ, ಸೇರಿದಂತೆ ಹಳೆ ದ್ವೇಷಕ್ಕಾಗಿ ಹಾಡಹಾಗಲೇ ಮಾರಕಾಸ್ತ್ರಗಳಿಂದ ದುಷ್ಕರ್ಮಿಗಳು ಹತ್ಯೆ ನಡೆಸಿದ್ದರು. ಅಲ್ಲದೆ ಕೊಲೆಯತ್ನ, ದರೋಡೆ, ಹಫ್ತಾ ವಸೂಲಿ, ಸುಲಿಗೆ ಹಾಗೂ ಡ್ರಗ್ಸ್ ದಂಧೆ ಸೇರಿದಂತೆ ಇನ್ನಿತರ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿ ನಗರದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿತ್ತು. ಪ್ರಮುಖವಾಗಿ ರೇಖಾ ಕದಿರೇಶ್ ಹತ್ಯೆ ಬಳಿಕ ಗೃಹ ಸಚಿವ ಬಸವರಾಜ ಬೊಮ್ಮಾಯಿ ರೌಡಿ ಹಾಗೂ ಗೂಂಡಾ ಆ್ಯಕ್ಟಿವಿಟಿಯಲ್ಲಿ ತೊಡಗಿರುವವರ ಮೇಲೆ ಕ್ರಮ ಕೈಗೊಳ್ಳುವಂತೆ ಕಮೀಷನರ್ ಕಮಲ್ ಪಂತ್ ತಾಕೀತು ಮಾಡಿದ್ದರು.
ಅದರಂತೆ ನಗರದ ಎಲ್ಲಾ ಡಿಸಿಪಿಗಳೊಂದಿಗೆ ಸಭೆ ಮಾಡಿ ರೌಡಿಗಳ ಮನೆಗಳ ದಾಳಿ ಮಾಡಿ ಪರಿಶೀಲನೆ ಮಾಡುವಂತೆ ಸೂಚಿಸಿದ್ದರು. ಹಾಗಾದರೆ ನಗರದ ಯಾವ್ಯಾವ ವಿಭಾಗದಲ್ಲಿ ಎಷ್ಟು ರೌಡಿ ಮನೆಗಳ ಮೇಲೆ ಮೇಲೆ ದಾಳಿ ನಡೆದಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಕೇಂದ್ರ ವಿಭಾಗ: ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ನೇತೃತ್ವದಲ್ಲಿ ವಿವೇಕನಗರ, ವಿಲ್ಸನ್ ಗಾರ್ಡನ್, ಶೇಷಾದ್ರಪುರಂ ಸೇರಿದಂತೆ 13 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 107 ರೌಡಿ ಮನೆಗಳ ಮೇಲೆ ದಾಳಿ ಮಾಡಿ 93 ರೌಡಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪೂರ್ವ ವಿಭಾಗ: ಶಿವಾಜಿನಗರ, ಕೆ.ಜಿ. ಹಳ್ಳಿ, ಡಿಜಿ ಹಳ್ಳಿ, ಬಾಣಸವಾಡಿ ಸೇರಿದಂತೆ ಪೂರ್ವ ವಿಭಾಗದಲ್ಲಿರುವ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸುಮಾರು 55 ಪೊಲೀಸ್ ತಂಡಗಳಿಂದ ಒಟ್ಟು 254 ರೌಡಿ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ದಾಳಿ ವೇಳೆ 188 ರೌಡಿಗಳನ್ನು ವಶಕ್ಕೆ ಪಡೆದಿದ್ದಾರೆ.
ನಟೋರಿಯಸ್ ರೌಡಿ ಶಿವಾಜಿನಗರ ತನ್ವೀರ್ ಮನೆ ಮೇಲೆ ಡಿಸಿಪಿ ಶರಣಪ್ಪ ಮತ್ತು ತಂಡದಿಂದ ದಾಳಿ ನಡೆಸಿದೆ. ಕೆ.ಜಿ. ಹಳ್ಳಿಯ ಅಯೋಧ್ಯೆ ಮೈದಾನದಲ್ಲಿ ರೌಡಿ ಪರೇಡ್ ಮಾಡಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ.
ಉತ್ತರ ವಿಭಾಗ: ಯಶವಂತಪುರ, ಪೀಣ್ಯ, ಸೋಲದೇವನಹಳ್ಳಿ, ರಾಜಾಜಿನಗರ, ಆರ್.ಟಿ.ನಗರ ಸೇರಿದಂತೆ ಉತ್ತರ ಭಾಗದ 19 ಪೊಲೀಸ್ ಠಾಣಾ ವ್ಯಾಪ್ತಿಗಳ ರೌಡಿಗಳ ಮನೆಗಳ ಮೇಲೆ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ನೇತೃತ್ವದ ತಂಡ ದಾಳಿ ನಡೆಸಿ ಚಳಿ ಬಿಡಿಸಿದೆ.
ರೌಡಿಶೀಟರ್ ಗಳಾದ ರಮೇಶ್ ಅಲಿಯಾಸ್ ಕುಳ್ಳಿ, ಆನಂದ, ಅರುಣ್, ಶ್ರೀಕಾಂತ್ ಸೇರಿದಂತೆ 292 ರೌಡಿಗಳ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿತು. ಒಟ್ಟು 152 ರೌಡಿಗಳು ಪೊಲೀಸರ ವಶಕ್ಕೆ ಪಡೆದುಕೊಂಡಿದೆ.
ಪಶ್ಚಿಮ ವಿಭಾಗ : ಕಾಟನ್ ಪೇಟೆ, ಸಿಟಿಮಾರ್ಕೆಟ್, ಬ್ಯಾಟರಾಯನಪುರ ಕಾಮಾಕ್ಷಿಪಾಳ್ಯ ಪಶ್ಚಿಮ ವಿಭಾಗಕ್ಕೆ ಸೇರುವ 17 ಪೊಲೀಸ್ ಠಾಣಾ ವ್ಯಾಪ್ತಿಗಳ 105 ರೌಡಿ ಮನೆ ದಾಳಿ ನಡೆಸಿದ ಡಿಸಿಪಿ ಸಂಜೀವ ಪಾಟೀಲ್ ನೇತೃತ್ವದ ಪೊಲೀಸರು ತಂಡ 76 ರೌಡಿಗಳನ್ನು ವಶಕ್ಕೆ ಪಡೆದುಕೊಂಡು ಖಡಕ್ ವಾರ್ನಿಂಗ್ ಮಾಡಿದೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಭೇಟಿ ನೀಡಿ ರೌಡಿಗಳಿಗೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದರು.
ವೈಟ್ ಫೀಲ್ಡ್ ವಿಭಾಗ: ಬೆಳ್ಳಂದೂರು, ವರ್ತೂರು, ಮಾರತ್ ಹಳ್ಳಿ ಸೇರಿದಂತೆ ವೈಟ್ ಫೀಲ್ಡ್ ಉಪವಿಭಾಗದಲ್ಲಿ ಇಂದು ನಸುಕಿನ ವೇಳೆ 116 ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ 82 ಮಂದಿ ರೌಡಿಶೀಟರ್ಗಳನ್ನು ಡಿಸಿಪಿ ದೇವರಾಜ್ ನೇತೃತ್ವದ ತಂಡ ವಶಕ್ಕೆ ಪಡೆದುಕೊಂಡಿತು.
ಮಾರತ್ ಹಳ್ಳಿ ರೌಡಿಶೀಟರ್ ಕಾಡುಬೀಸನಹಳ್ಳಿ ಲೋಕಿ ಸೇರಿದಂತೆ ಮೂವರ ಮನೆಗಳಲ್ಲಿ ಒಟ್ಟು ಎರಡೂವರೆ ಕೆಜಿ ಮಾದಕ ವಸ್ತು ಜಪ್ತಿ ಮಾಡಿಕೊಂಡಿದ್ದಾರೆ. ಇಬ್ಬರ ರೌಡಿಗಳ ಮನೆಯಲ್ಲಿದ್ದ ಎರಡು ಮಚ್ಚು ವಶಕ್ಕೆ ಪಡೆದುಕೊಂಡು ಒಟ್ಟು 15 ರೌಡಿಗಳ ವಿರುದ್ಧ ಸಿಆರ್ ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು.
ಈಶ್ಯಾನ ವಿಭಾಗ: ಯಲಹಂಕ, ಯಲಹಂಕ ನ್ಯೂಟನ್, ಬಾಗಲೂರು, ವಿದ್ಯಾರಣ್ಯಪುರ, ಸಂಪಿಗೆಹಳ್ಳಿ ಸೇರಿದಂತೆ ಈಶಾನ್ಯ ವಿಭಾಗಕ್ಕೆ ಒಳಪಡುವ ಪೊಲೀಸ್ ಠಾಣಾ ವ್ಯಾಪ್ತಿಗಳ ಒಟ್ಟು 159 ರೌಡಿಗಳ ಮನೆ ಮೇಲೆ ಇಂದು ಬೆಳಗ್ಗೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡು ಡಿಸಿಪಿ ಸಿ.ಕೆ.ಬಾಬಾ ಖಡಕ್ ಎಚ್ಚರಿಕೆ ನೀಡಿದ್ದಾರೆ. ಯಲಹಂಕ ನ್ಯೂಟನ್ ಠಾಣೆ ರೌಡಿಶೀಟರ್ ನವಾಜ್ ಮನೆಯಲ್ಲಿ 75 ಸಾವಿರ ಮೌಲ್ಯದ 5 ಕೆ.ಜಿ.ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ.
ಜೈಲಿನಲ್ಲಿ ತಟ್ಟೆ, ಸ್ಪೂನ್ಗಳನ್ನೇ ಮಾರಕಾಸ್ತ್ರ: ಜೈಲಿನಲ್ಲಿರುವ ಕೈದಿಗಳಿಗೆ ಶಾಕ್ ಕೊಟ್ಟ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ತಂಡ ಜೈಲಿನ ಪ್ರತಿಯೊಂದ ಬ್ಯಾರಕ್ ಗಳಿಗೂ ತೆರಳಿ ಪರಿಶೀಲನೆ ನಡೆಸಿತು. ದಾಳಿ ವೇಳೆ ಚಾಕು, ಚೂರಿ, ಹರಿತವಾದ ವಸ್ತು, ಮೊಬೈಲ್, ಚಾರ್ಜರ್ ಸೇರಿದಂತೆ ಹಲವು ಆಯುಧಗಳನ್ನು ಜಪ್ತಿ ಮಾಡಿಕೊಳ್ಳಲಾಯಿತು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಜೈಲಿನಲ್ಲಿದ್ದ ರೌಡಿ ಚಟುವಟಿಕೆ ನಡೆಸುತ್ತಿದ್ದರು ಎಂಬ ಮಾಹಿತಿ ಇತ್ತು. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಯಿತು. ಸಿಸಿಬಿಯ 100 ಕ್ಕೂ ಸಿಬ್ಬಂದಿಯಿಂದ ನಡೆದ ದಾಳಿ ವೇಳೆ ವಿಚಾರಣಾಧೀನ ಕೈದಿಗಳ ಪಾತ್ರದ ಬಗ್ಗೆ ಮಾಹಿತಿ ದೊರಕಿದೆ. ಮೊಬೈಲ್, ಸಿಮ್ ಕಾರ್ಡ್, ಗಾಂಜಾ , ಗಾಂಜಾ ಪೈಪ್ , ಪೆನ್ ಡ್ರೈವ್, ಮೆಮೊರಿ ಕಾರ್ಡ್ ವಶಕ್ಕೆ ಪಡೆದಿದ್ದೇವೆ. ಕೆಲ ಮಾರಾಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದೇವೆ. ಅಲ್ಲಿ ತಟ್ಟೆ ಮತ್ತು ಸ್ಪೂನ್ ಅನ್ನೇ ಬಳಸಿ ಮಾರಕಾಸ್ತ್ರ ಬಳಸುತ್ತಿದ್ದರು ಈಗಷ್ಟೇ ರೇಡ್ ಮುಗಿದಿದೆ, ಪರಿಶೀಲನೆ ಮಾಡುತ್ತೇವೆ ಎಂದರು.