ಬೆಂಗಳೂರು: ಬೆಳ್ಳಂಬೆಳಗ್ಗೆ ರೌಡಿಶೀಟರ್ಸ್ಗೆ ಶಾಕ್ ನೀಡಿರುವ ಬೆಂಗಳೂರು ಸಿಟಿ ಪೊಲೀಸರು ನಗರದಾದ್ಯಂತ ರೌಡಿ ಆಸಾಮಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. 1 ಸಾವಿರಕ್ಕೂ ಅಧಿಕ ರೌಡಿಶೀಟರ್ಸ್ ಮನೆಗಳಲ್ಲಿ ಪರಿಶೀಲನೆ ನಡೆಯುತ್ತಿದೆ. ನಗರದ 8 ವಲಯಗಳ ಪೊಲೀಸರಿಂದ ಏಕಕಾಲಕ್ಕೆ ಕಾರ್ಯಾಚರಣೆ ನಡೆದಿವುದು ವಿಶೇಷವಾಗಿದೆ.
ಲಾಕ್ಡೌನ್ ತೆರವುಗೊಂಡ ಬಳಿಕ ರೌಡಿಸಂ ಚಟುವಟಿಕೆಗಳು ಹೆಚ್ಚಾಗಿದ್ದವು. ಹಣಕಾಸು ವ್ಯವಹಾರ, ವೈಯಕ್ತಿಕ ದ್ವೇಷ ಹತ್ತು ಹಲವು ಕಾರಣಗಳಿಂದ ಕೊಲೆ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದವು. ಜೈಲಿನಿಂದಲೇ ಕುಳಿತು ರೌಡಿಸಂ ನಿಯಂತ್ರಣದ ಬಗ್ಗೆಯೂ ತನಿಖೆ ವೇಳೆ ಬಯಲಾಗಿತ್ತು. ಹೀಗಾಗಿ ಹೆಚ್ಚುವರಿ ಆಯುಕ್ತರು ಮತ್ತು ಡಿಸಿಪಿಗಳೊಂದಿಗೆ ಸಭೆ ನಡೆಸಿದ್ದ ಕಮಿಷನರ್ ಕಮಲ್ ಪಂತ್ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ಸೂಚಿಸಿದ್ದರು.
ಅದರಂತೆ ಹಲವು ದಿನಗಳಿಂದ ಆಯಾ ಪೊಲೀಸ್ ವಿಭಾಗದ ವ್ಯಾಪ್ತಿಯಲ್ಲಿ ರೌಡಿಗಳ ಮೇಲೆ ಪೊಲೀಸರು ನಿಗಾವಹಿಸಿದ್ದರು. ಇಂದು ಬೆಳ್ಳಂಬೆಳಗ್ಗೆ ರೌಡಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಬಾಲ ಬಿಚ್ಚದಂತೆ ರೌಡಿ ಆಸಾಮಿಗಳಿಗೆ ಖಡಕ್ ವಾರ್ನಿಂಗ್ ನೀಡಲಾಗುತ್ತಿದೆ.
ಪರಪ್ಪನ ಕೇಂದ್ರ ಕಾರಾಗೃಹದ ಮೇಲೆ ದಾಳಿ: ಬೆಳಗಿನ ಜಾವ ರೌಡಿ ರೇಡ್ ಜೊತೆಗೆ ಪರಪ್ಪನ ನ ಅಗ್ರಹಾರ ಜೈಲಿನ ಮೇಲೆಯೂ ದಾಳಿ ನಡೆಯುತ್ತಿದೆ. ಸಿಸಿಬಿ ಪೊಲೀಸರಿಂದ ಪರಪ್ಪನ ಆಗ್ರಹಾರ ಜೈಲಿನ ಮೇಲೆ ದಾಳಿ ಮಾಡಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಬೆಳಗ್ಗೆ ಐದು ಗಂಟೆಗೆ ಸಿಸಿಬಿ ಪೊಲೀಸರು ಶ್ವಾನದಳದ ಜೊತೆಗೆ ದಾಳಿ ಮಾಡಿದ್ದಾರೆ. ಇತ್ತೀಚಿಗೆ ಪರಪ್ಪನ ಅಗ್ರಹಾರ ಜೈಲಿನಿಂದ ಕೊಲೆಗಳಿಗೆ ಪ್ಲಾನ್ ಮಾಡಿರುವುದು ಬೆಳಕಿಗೆ ಬಂದಿತ್ತು. ರಶೀದ್ ಮಲಬಾರಿ ಸಹಚರ ಕರೀಂ ಅಲಿ, ಡಿಜೆ ಹಳ್ಳಿಯಲ್ಲಿ ಕೊಲೆಯಾದ ಕೃಷ್ಣಮೂರ್ತಿ, ಬನಶಂಕರಿ ಬಳಿ ಕೊಲೆಯಾದ ಫೈನಾಶ್ಶಿಯರ್ ಮದನ್ ಕೊಲೆಗೆ ಜೈಲಿನಿಂದ ಪ್ಲಾನ್ ನಡೆದಿತ್ತು. ಈ ಹಿನ್ನೆಲೆಯಲ್ಲಿ ಜೈಲಿನ ಮೇಲೆ ಸಿಸಿಬಿ ದಾಳಿ ನಡೆದಿದೆ ಎನ್ನಲಾಗುತ್ತಿದೆ.
ಉಳಿದಂತೆ ಜೈಲಿಂದ ಯುವರಾಜಸ್ವಾಮಿ ಕರೆ ಮಾಡಿದ್ದ ಎಂಬ ಗಂಭೀರ ಆರೋಪವನ್ನು ಶಾಸಕ ಬೆಲ್ಲದ್ ಮಾಡಿದ್ದರು. ಈ ನಿಟ್ಟಿನಲ್ಲಿ ಕೂಡ ಫೋನ್ ಕರೆಗಳ ಬಳಕೆ ಆರೋಪ ಬಂದಿದ್ದರಿಂದ ಜೈಲಿನಲ್ಲಿ ಪರಿಶೀಲನೆ ನಡೆಯುತ್ತಿದೆ. ಸಜಾ ಬಂಧಿಗಳು ಹಾಗೂ ವಿಚಾರಣಾಧೀನ ಕೈದಿಗಳ ಬ್ಯಾರಕ್ಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಂಕಿ ಅಂಶ ಈವರೆಗೆ ಹೊರಬಿದ್ದಿರುವುದು: ರೌಡಿ ಶೀಟರ್ ಮನೆಗಳ ಮೇಲೆ ಬೆಂಗಳೂರು ಪೊಲೀಸರಿಂದ ಮುಂದುವರೆದ ಬೆಳಗಿನ ಜಾವದ ರೇಡ್ನಲ್ಲಿ ಪಶ್ಚಿಮ ವಿಭಾಗದ ಪೊಲೀಸರು ಅಂಕಿ ಅಂಶ ಹಂಚಿಕೊಂಡಿದ್ದು, ವ್ಯಾಪ್ತಿಯ ಕಮಾಕ್ಷಿಪಾಳ್ಯ, ಬ್ಯಾಡರಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಮನೆ ಮೇಲೆ ದಾಳಿ ನಡೆದಿದೆ ಎಂದು ವಿಭಾಗದ ಮುಖ್ಯಸ್ಥರು ಖಚಿತಪಡಿಸಿದ್ದಾರೆ.
ರೌಡಿಗಳ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಯುತ್ತಿದೆ, ಮೂರು ತಂಡಗಳಿಂದ ದಾಳಿ ನಡೆಸಲಾಗಿದೆ. ಅಪರಾಧ ಚಟುವಟಿಕೆಗೆ ಬಳಸುವ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲು ದಾಳಿ ನಡೆಸಿದ್ದೇವೆ ಎಂದು ಪಶ್ಚಿಮ ವಿಭಾಗದ ಡಿ.ಸಿ.ಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.