ಬೆಂಗಳೂರು: ನಟೋರಿಯಸ್ ರೌಡಿಶೀಟರ್ ಮೇಲೆ ಸಿಸಿಬಿ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಕೋಣನಕುಂಟೆ ಠಾಣಾ ವ್ಯಾಪ್ತಿಯ ನಾರಾಯಣನಗರ ಡಬಲ್ ರೋಡ್ನಲ್ಲಿ ಈ ಘಟನೆ ನಡೆದಿದೆ.
ನಟೋರಿಯಸ್ ರೌಡಿಶೀಟರ್ ಮಂಜ ಅಲಿಯಾಸ್ ಬೊಂಡ ಮಂಜನ ಕಾಲಿಗೆ ಗುಂಡು ಹಾರಿಸಲಾಗಿದೆ. ಬಂಧನದ ವೇಳೆ ಸಿಸಿಬಿ ಹೆಡ್ ಕಾನ್ಸ್ಟೇಬಲ್ ನಾಗರಾಜ್ ಗಾಯಗೊಂಡಿದ್ದು, ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಲಘಟ್ಟಪುರ ಠಾಣೆ ರೌಡಿಶೀಟರ್ ಮಂಜ ಅಲಿಯಾಸ್ ಬೊಂಡ ಮಂಜನ ವಿರುದ್ಧ 23ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಕಳೆದ ಒಂದು ತಿಂಗಳಿನಿಂದ ಆರೋಪಿ ಪತ್ತೆಗಾಗಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದರು. ಕೋಣನಕುಂಟೆಯಲ್ಲಿ ರೌಡಿಶೀಟರ್ನ ಚಲನವಲನದ ಬಗ್ಗೆ ಇಂದು ಖಚಿತ ಮಾಹಿತಿ ಪಡೆದ ಮೇರೆಗೆ ಆತನನ್ನು ಬಂಧಿಸಲು ಇನ್ಸ್ಪೆಕ್ಟರ್ ಪುನೀತ್ ಮತ್ತು ತಂಡ ತೆರಳಿತ್ತು. ಪೊಲೀಸರನ್ನು ಕಂಡ ರೌಡಿಶೀಟರ್ ಬೈಕ್ನಲ್ಲಿ ನಾರಾಯಣನಗರ ಬಳಿ ಪರಾರಿಯಾಗ್ತಿದ್ದಂತೆ ಪೊಲೀಸರು ಅಡ್ಡಗಟ್ಟಿದ್ದಾರೆ. ಈ ವೇಳೆ ಏಕಾಏಕಿ ಸಿಸಿಬಿ ಹೆಡ್ ಕಾನ್ಸ್ಟೇಬಲ್ ನಾಗರಾಜ್ ಕೈಗೆ ಡ್ರ್ಯಾಗರ್ನಿಂದ ಹಲ್ಲೆ ಮಾಡಿದ್ದಾನೆ.
ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದರೂ ಪ್ರತಿರೋಧವೊಡ್ಡಿ, ಇನ್ಸ್ಪೆಕ್ಟರ್ ಮೇಲೂ ಹಲ್ಲೆಗೆ ಮುಂದಾಗಿದ್ದ. ಹಾಗಾಗಿ ಇನ್ಸ್ಪೆಕ್ಟರ್ ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಘಟನೆ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.