ಬೆಂಗಳೂರು: ಕುಖ್ಯಾತ ರೌಡಿ ಶೀಟರ್ ಸ್ಲಂ ಭರತನ ನಾಲ್ವರು ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿ ಅವರಿಂದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರೇಮ್ ಕುಮಾರ್, ಸುನೀಲ್, ವಿನೋದ್, ಕಿರಣ್ ಬಂಧಿತ ಆರೋಪಿಗಳು. ಇವರು ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುರುಬರಹಳ್ಳಿ ಕೆಂಪೇಗೌಡ ಆಟದ ಮೈದಾನದ ಬಳಿ ಹಳೆಯ ದ್ವೇಷದಿಂದ ಶೇಖರ್ ಗೌಡ ಎಂಬ ವ್ಯಕ್ತಿಯ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಲು ಸಜ್ಜಾಗಿದ್ದರು.
ಈ ವಿಚಾರ ತಿಳಿದು ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಆರೋಪಿಗಳ ಪೈಕಿ ಸುನೀಲ್, ವಿನೋದ್, ಕಿರಣ್ ಶೇಖರ್ ಗೌಡ ಜೊತೆ ಕೆಲಸ ನಿರ್ವಹಿಸುತ್ತಿದ್ದು, ಯಾವುದೋ ಕಾರಣಕ್ಕೆ ಕೆಲಸದಿಂದ ಬಿಡಿಸಿದ ಕಾರಣದಿಂದ ಆರೋಪಿಗಳು ಕೊಲೆ ಮಾಡಲು ನಿರ್ಧರಿಸಿದ್ದರು ಎಂಬುದು ತಿಳಿದು ಬಂದಿದೆ.
ಇನ್ನು, ಭರತನ ಹಲವು ಸಹಚರರನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದು, ಸದ್ಯ ಸಿಸಿಬಿ ಪೊಲೀಸರು ಇದೀಗ ಕಾರ್ಯಾಚರಣೆಗೆ ಇಳಿದಿದ್ದಾರೆ.