ಬೆಂಗಳೂರು: ಸಿಸಿಬಿ ಪೋಲಿಸರು ಅಕ್ರಮವಾಗಿ ನಡೆಸುತ್ತಿದ್ದ 10 ರಿಕ್ರಿಯೇಷನ್ ಕ್ಲಬ್ ಮೇಲೆ ದಾಳಿ ಮಾಡಿ, ಸುಮಾರು 236 ಜನರನ್ನು ಬಂಧಿಸಿ, 6.55 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಆರ್ಎಂಸಿ ಯಾರ್ಡ್, ದೇವನಹಳ್ಳಿ, ವಿಜಯನಗರ, ಜೀವನ್ ಭೀಮಾನಗರ, ಮೈಕೋಲೇಔಟ್, ಚಿಕ್ಕಜಾಲ, ಉಪ್ಪಾರಪೇಟೆ, ಸಿಟಿ ಮಾರ್ಕೆಟ್ ಠಾಣಾ ವ್ಯಾಪ್ತಿಯಲ್ಲಿ ವಿನಾಯಕ ರಿಕ್ರಿಯೇಷನ್, ರಂಗನಾಥ ರಿಕ್ರಿಯೇಷನ್, ರಾಜರಾಜೇಶ್ವರಿ ರಿಕ್ರಿಯೇಷನ್ ಸೇರಿದಂತೆ ಒಟ್ಟು 10 ಕ್ಲಬ್ಗಳನ್ನು ನಡೆಸುತ್ತಿದ್ದರು.
ಈ ಮಾಹಿತಿ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರ ಗಮನಕ್ಕೆ ಬಂದಿದ್ದು, ಡಿಸಿಪಿ ಇನ್ಸ್ಪೆಕ್ಟರ್ಗಳ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಇನ್ನು ದಾಳಿ ವೇಳೆ ಆರೋಪಿಗಳು ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಸಾಬೀತಾಗಿರುವ ಹಿನ್ನೆಲೆ ಸುಮಾರು 236 ಮಂದಿಯನ್ನ ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
ಇನ್ನು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಮಾತನಾಡಿ, ನಗರದ 10 ಭಾಗದಲ್ಲಿ ದಾಳಿ ನಡೆಸಿ ಅಂದರ್ ಬಾಹರ್ ಆಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.