ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿಯನ್ನು ರಾಜ್ಯ ಪೊಲೀಸರು ಬಹಳ ಚಾಣಾಕ್ಷತೆಯಿಂದ ಆಫ್ರಿಕಾದ ಸೆನೆಗಲ್ನಿಂದ ಕರೆ ತಂದು ವಿಚಾರಣೆಗೊಳಪಡಿಸಿ ಅನೇಕ ವಿಚಾರಗಳನ್ನು ಬಯಲಿಗೆಳೆದಿದ್ದಾರೆ. ಆದರೆ ಕೊರೊನಾ ಮಹಾಮಾರಿಯಿಂದ ತನಿಖೆಗೆ ಕೊಂಚ ಬ್ರೇಕ್ ಬಿದ್ದಿದೆ.
ರವಿ ಪೂಜಾರಿಯನ್ನು ಭದ್ರತೆಯಿಂದ ಮಡಿವಾಳದ ಎಫ್ಎಸ್ಎಲ್ ಕಚೇರಿಯಲ್ಲಿಟ್ಟು ಸಿಸಿಬಿ ಡಿಸಿಪಿಗಳಾದ ಕುಲ್ದೀಪ್ ಜೈನ್ ಹಾಗೂ ಡಿಸಿಪಿ ತನಿಖೆ ನಡೆಸುತ್ತಿದ್ದರು. ಆದರೆ ಗುಂಪಲ್ಲಿ ಯಾರು ಸೇರದಿರುವ ಹಿನ್ನೆಲೆ ಹಾಗೂ ರವಿ ಪೂಜಾರಿ ಆರೋಗ್ಯದ ದೃಷ್ಟಿಯಿಂದ ತನಿಖೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿದೆ.
ರವಿ ಪೂಜಾರಿ ನೋಡಿಕೊಳ್ಳಲು 90 ಮಂದಿ ಬೇಕಿತ್ತು:
ರವಿ ಪೂಜಾರಿ ಆರೋಗ್ಯದಲ್ಲಿ ಸಮಸ್ಯೆಯಿದ್ದು, ಅಜಾಗೃತೆಯಿಂದ ಆತನನ್ನು ನೋಡಿಕೊಂಡರೆ ಸೋಂಕು ತಗಲುವ ಲಕ್ಷಣಗಳು ಹೆಚ್ಚಿದೆ. ಈತನಿಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಭದ್ರತೆಯಿಂದ ನೋಡಿಕೊಳ್ಳಬೇಕಿದೆ. ಹೀಗಾಗಿ ಸಿಸಿಬಿ ಸಿಬ್ಬಂದಿ ಮೂರು ಶಿಫ್ಟ್ನಲ್ಲಿ ನಿಗಾ ವಹಿಸಿದ್ದರು.
- ಎ ಶಿಫ್ಟ್ : ಬೆಳಗ್ಗೆ 6 ರಿಂದ ಮಧ್ಯರಾತ್ರಿ ಮ. 2 ಗಂಟೆವರೆಗೆ 30 ಜನ ಸಿಬ್ಬಂದಿ
- ಬಿ ಶಿಫ್ಟ್ : ಮ. 2 ರಿಂದ ರಾತ್ರಿ 8 ಗಂಟೆವರೆಗೆ 30 ಜನ ಸಿಬ್ಬಂದಿ
- ಸಿ ಶಿಫ್ಟ್ : ರಾತ್ರಿ 8 ರಿಂದ ಬೆಳಗ್ಗೆ 6 ಗಂಟೆವರೆಗೆ ಒಟ್ಟು 90 ಜನ ಸಿಬ್ಬಂದಿ ಆತನ ಭದ್ರತೆಯನ್ನ ನೋಡಿಕೊಳ್ಳಬೇಕಾದ ಪರಿಸ್ಥಿತಿ ಇತ್ತು. ಸದ್ಯ ಕೊರೊನಾ ಮಹಾಮಾರಿ ಇರುವ ಕಾರಣ ಗುಂಪು ಸೇರಿ ಏನಾದರು ರೋಗ ಲಕ್ಷಣಗಳು ಕಂಡು ಬಂದರೆ ಮತ್ತೆ ತನಿಖೆಗೆ ಸಮಸ್ಯೆಯಾಗಬಹುದೆಂದು ಈ ರೋಗ ಕಡಿಮೆಯಾಗುವವರೆಗೂ ಪೂಜಾರಿಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.
ಕೊರೊನಾ ಕಡಿಮೆಯಾಗುತ್ತಿದ್ದಂತೆ ಮತ್ತೆ ತನಿಖೆ ಆರಂಭಿಸಲು ಸಿಸಿಬಿ ನಿರ್ಧಾರ:
ಸದ್ಯ ರವಿ ಪೂಜಾರಿ ವಿರುದ್ಧ 90ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರಿನಲ್ಲಿ 39 ಪ್ರಕರಣ, ಮಂಗಳೂರು 36, ಉಡುಪಿ 11ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
- 2007ಫೆಬ್ರವರಿ 15ರಲ್ಲಿ ಶಬ್ನಮ್ ಬಿಲ್ಡರ್ಸ್ ಮಾಲೀಕರಾದ ಶೈಲಜಾ ಹಾಗೂ ರವಿ ಎಂಬುವರ ಹತ್ಯೆ ಪ್ರಕರಣ
- 2009ರಲ್ಲಿ ಇಂದಿರಾನಗರದ ಖಾಸಗಿ ವಾಹಿನಿ ಮೇಲೆ ದಾಳಿ
- 2005 ರಲ್ಲಿ ಆರ್. ಟಿ. ನಗರದ ಉದ್ಯಮಿ ಸುಬ್ಬರಾಜು ಕೊಲೆ ಪ್ರಕರಣ
- 2013ರಲ್ಲಿ ಬಾಲಿವುಡ್ ಸಿನಿಮಾ ನಟರಾದ ಶಾರುಕ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಡಿಕೆಶಿ ಕುಟುಂಬಸ್ಥರಿಗೆ ಬೆದರಿಕೆ ಸೇರಿದಂತೆ ಹಲವಾರು ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿತ್ತು. ಕೊರೊನಾ ಕಡಿಮೆಯಾದ ಬಳಿಕ ರವಿ ಪೂಜಾರಿಯನ್ನ ಮತ್ತೆ ಸಿಸಿಬಿ ತಂಡ ವಶಕ್ಕೆ ಪಡೆಯಲಿದೆ.
ರವಿ ನೋಡಿಕೊಳ್ಳುವುದಕ್ಕೆ ಆಹಾರ ಎಣ್ಣೆ ಸಮಸ್ಯೆ:
ರವಿ ಪೂಜಾರಿಯನ್ನು ಸದ್ಯದ ಮಟ್ಟಿಗೆ ನೋಡಿಕೊಳ್ಳುವುದು ಕಷ್ಟವಾಗಿದೆಯಂತೆ. ಆತ ಆಫ್ರಿಕಾದ ಸೆನೆಗಲ್ನಲ್ಲಿದ್ದಾಗ ದಿನದ ಮೂರು ಹೊತ್ತು ಎಣ್ಣೆಯೊಂದಿಗೆ ಮಾಂಸದೂಟ ಸೇವಿಸುತ್ತಿದ್ದ. ಆತನ ಆರೋಗ್ಯ ದೃಷ್ಟಿಯಿಂದ ಬೆಡ್, ನಾನ್ವೆಜ್, ಮೀನು ಊಟ ಆಗಾಗ ಎಣ್ಣೆ ಕೊಡಲಾಗುತ್ತಿತ್ತು. ಸದ್ಯ ಕೊರೊನಾದಿಂದ ಇದೆಲ್ಲಕ್ಕೂ ಬ್ರೇಕ್ ಹಾಕಲಾಗಿತ್ತು. ಸದ್ಯ ಈತನನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.