ಬೆಂಗಳೂರು: ನಗರದಲ್ಲಿ ರೆಡ್ ಸ್ಯಾಂಡಲ್ ಮಾಫಿಯಾ ಮೇಲೆ ಸಿಸಿಬಿ ದಾಳಿ ಮುಂದುವರೆಸಿದ್ದು, ವಿದೇಶಕ್ಕೆ ರಕ್ತಚಂದನ ಸಾಗಿಸುತ್ತಿದ್ದ ಇಬ್ಬರು ಅಂತಾರಾಷ್ಟ್ರೀಯ ಸ್ಮಗ್ಲರ್ಸ್ಗಳನ್ನು ಬಂಧಿಸಿದೆ.
ವಿದ್ಯಾರಣ್ಯಪುರದ ಸಿಂಗಾಪುರ ಬಳಿಯ ಗೋದಾಮಿನಲ್ಲಿ ರಕ್ತಚಂದನ ಮರದ ತುಂಡುಗಳನ್ನು ಶೇಖರಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳಾದ ಶೇಖ್ ಅನೀಸ್ ಹಾಗೂ ಮೊಹಮದ್ ಇಕ್ಬಾಲ್ನನ್ನು ಬಂಧಿಸಿ ಸುಮಾರು 60 ಲಕ್ಷ ರೂ. ಮೌಲ್ಯದ 2 ಟನ್ ರಕ್ತಚಂದನ ವಶಪಡಿಸಿಕೊಂಡಿದ್ದಾರೆ.
ಸ್ಕಾರ್ಪಿಯೋ ಕಾರಿನಲ್ಲಿ ರಕ್ತಚಂದನ ಸಾಗಾಟದ ಬಗ್ಗೆ ಮಾಹಿತಿ ಪಡೆದ ಸಿಸಿಬಿ, ದಾಳಿ ನಡೆಸಿ ಆರೋಪಿ ಶೇಖ್ ಅನಿಸ್ನಿಂದ 471 ಕೆಜಿ ರೆಡ್ ಸ್ಯಾಂಡಲ್ ವಶಪಡಿಸಿಕೊಂಡಿತು. ಈತ ನೀಡಿದ ಮಾಹಿತಿ ಮೇರೆಗೆ ವಿದ್ಯಾರಣ್ಯಪುರದ ಸಿಂಗಾಪುರ ಲೇಔಟ್ನ ಎರಡು ಗೋದಾಮುಗಳ ಮೇಲೆ ದಾಳಿ ನಡೆಸಿ ಮತ್ತೊಬ್ಬ ಆರೋಪಿಯು ಅಡಗಿಸಿಟ್ಟಿದ್ದ 1500 ಕೆಜಿ ರೆಡ್ ಸ್ಯಾಂಡಲ್ನ್ನು ಜಪ್ತಿ ಮಾಡಿಕೊಂಡಿದೆ.
ಆರೋಪಿಗಳು ತಮಿಳುನಾಡು, ಆಂಧ್ರಪ್ರದೇಶದ ಅರಣ್ಯಗಳಲ್ಲಿ ರಕ್ತಚಂದನ ಮರದ ತುಂಡುಗಳನ್ನು ಕಡಿದು ನಗರಕ್ಕೆ ಸರಬರಾಜು ಮಾಡಿ ಇಲ್ಲಿಂದ ಅಕ್ರಮವಾಗಿ ಚೆನ್ನೈ ಹಾಗೂ ಮುಂಬೈ ಮೂಲಕ ಹೊರ ದೇಶಗಳಿಗೆ ರಫ್ತು ಮಾಡುತ್ತಿದ್ದರು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.